ನಾವು ಹಕ್ಕು ಮಂಡಿಸಲು ದಿಗ್ವಿಜಯ್ ಬಿಡಲೇ ಇಲ್ಲ:ಗೋವಾ ಕಾಂಗ್ರೆಸ್

ಪಣಜಿ,ಮಾ.18: ರಾಜ್ಯದಲ್ಲಿ ಬಿಜೆಪಿಗಿಂತ ಹೆಚ್ಚಿನ ಸ್ಥಾನಗಳನ್ನು ಗೆದ್ದಿದ್ದರೂ ಸರಕಾರವನ್ನು ರಚಿಸುವಲ್ಲಿ ಪಕ್ಷದ ವೈಫಲ್ಯಕ್ಕೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ್ ಸಿಂಗ್ ಮತ್ತು ಗೋವಾ ಸ್ಕ್ರೀನಿಂಗ್ ಸಮಿತಿಯ ಮುಖ್ಯಸ್ಥ ಕೆ.ಸಿ.ವೇಣುಗೋಪಾಲ್ ಅವರೇ ಕಾರಣರೆಂದು ಗೋವಾ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಲುಯಿಝಿನೊ ಫಲೆಯಿರೊ ಅವರು ಪರೋಕ್ಷವಾಗಿ ದೂರಿದ್ದಾರೆ.
ಮುಖ್ಯಮಂತ್ರಿ ಹುದ್ದೆಗಾಗಿ ಗೋವಾದ ಕಾಂಗ್ರೆಸ್ ನಾಯಕರ ನಡುವಿನ ಕಚ್ಚಾಟ ಸರಕಾರ ರಚನೆ ಹಕ್ಕು ಮಂಡಿಸುವಲ್ಲಿ ವಿಳಂಬಕ್ಕೆ ಕಾರಣವಾಗಿತ್ತು ಎಂಬ ವರದಿಗಳನ್ನು ತಳ್ಳಿ ಹಾಕಿದ ಅವರು, ಸರಕಾರ ರಚನೆಗೆ ಅಗತ್ಯವಾಗಿದ್ದ 21 ಶಾಸಕರ ಬೆಂಬಲವನ್ನು ಕಾಂಗ್ರೆಸ್ ಹೊಂದಿತ್ತು. ರಾಜ್ಯಪಾಲೆ ಮೃದುಲಾ ಸಿನ್ಹಾ ಅವರು ಸರಕಾರ ರಚನೆಗೆ ಆಹ್ವಾನಿಸುವವರೆಗೆ ಕಾಯುವಂತೆ ದಿಗ್ವಿಜಯ್ ಸೂಚಿಸಿದ್ದರು. ಸರಕಾರ ರಚನೆಗೆ ಹಕ್ಕು ಕೋರಿ ರಾಜ್ಯಪಾಲರಿಗೆ ಸಲ್ಲಿಸಲು ಪತ್ರವೊಂದನ್ನು ನಾನು ಸಿದ್ಧಗೊಳಿಸಿದ್ದೆ. ಆದರೆ ಸಂಪ್ರದಾಯದಂತೆ ರಾಜ್ಯಪಾಲರು ದೊಡ್ಡ ಪಕ್ಷವಾದ ಕಾಂಗ್ರೆಸ್‌ಗೆ ಆಹ್ವಾನ ನೀಡುತ್ತಾರೆ ಎಂದು ಅವರು ಹೇಳಿದ್ದರು. ಹೀಗಾಗಿ ರಾಜ್ಯಪಾಲರಿಂದ ಆಹ್ವಾನಕ್ಕಾಗಿ ಕಾಯುತ್ತಿದ್ದೆವು ಎಂದರು.
ಫಲಿತಾಂಶ ಪ್ರಕಟಗೊಂಡ ಮಾ.11ರ ರಾತ್ರಿಯೇ ನಾವು 21 ಶಾಸಕರ ಬೆಂಬಲ ಗಳಿಸಿದ್ದೆವು, ಆದರೆ ಕಾಂಗ್ರೆಸೇತರ ಶಾಸಕರ ಬೆಂಬಲ ಪತ್ರ ನಮ್ಮ ಬಳಿಯಿರಲಿಲ್ಲ. ದಿಗ್ವಿಜಯ್ ಮತ್ತು ವೇಣುಗೋಪಾಲ್ ಅವರಿಗೆ ಚರ್ಚೆ ನಡೆಸುವ ಮತ್ತು ನಿರ್ಧಾರಗಳನ್ನು ತೆಗೆದುಕೊಳ್ಳುವ ಎಲ್ಲ ಅಧಿಕಾರಗಳಿದ್ದವು. ನಾನು ಯಾರನ್ನೂ ದೂರಲು ಬಯಸುವುದಿಲ್ಲ, ಆದರೆ ಅಂದೇ ರಾತ್ರಿ ನಾವು ಸರಕಾರ ರಚನೆಗೆ ಹಕ್ಕು ಮಂಡಿಸಲು ನಿರ್ಧಾರ ಕೈಗೊಳ್ಳಬೇಕಾಗಿತ್ತು ಎನ್ನುವುದು ನನ್ನ ಅಭಿಪ್ರಾಯವಾಗಿದೆ ಎಂದು ಅವರು ಹೇಳಿದರು.





