ಶೀಘ್ರವೇ ಪಡುಕೆರೆಗೆ ನರ್ಮ್ ಬಸ್ ಸಂಚಾರ: ಪ್ರಮೋದ್
ಮಲ್ಪೆ-ಪಡುಕೆರೆ ಸೇತುವೆ ಉದ್ಘಾಟನೆ

ಮಲ್ಪೆ, ಮಾ.18: ನದಿ ಹಾಗೂ ಸಮುದ್ರದ ಮಧ್ಯೆ ದ್ವೀಪದಂತಿದ್ದ ಪಡುಕೆರೆ ಜನತೆಯ ಹಲವು ದಶಕಗಳ ಸೇತುವೆ ಕನಸು ಇಂದು ನನಸಾಗಿದೆ. ಈ ಸೇತುವೆಯಿಂದ ಈ ಭಾಗದ ಜನರ ಭಾಗ್ಯದ ಬಾಗಿಲು ತೆರೆದಂತಾಗಿದೆ. ಶೀಘ್ರವೇ ಇಲ್ಲಿಗೆ ಮಲ್ಪೆಯಿಂದ ನರ್ಮ್ ಬಸ್‌ಗಳ ಓಡಾಟಕ್ಕೆ ಅನುಮತಿ ದೊರಕಿಸಿ ಕೊಡುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಹೇಳಿದ್ದಾರೆ.
ಉಡುಪಿ ನಗರಸಭೆ ವತಿಯಿಂದ, ಮಲ್ಪೆ ಪಡುಕೆರೆ ನಿವಾಸಿಗಳ ದಶಕಗಳ ಕಾಲದ ಕನಸಾದ ಮಲ್ಪೆ-ಪಡುಕೆರೆ ನಡುವೆ ಸಂಪರ್ಕ ಕಲ್ಪಿಸುವ 16.91 ಕೋಟಿ ರೂ.ವೆಚ್ಚದ ಸೇತುವೆ ಹಾಗೂ ಮಲ್ಪೆ ಮತ್ತು ಪಡುಕೆರೆ ಕಡೆಯಿಂದ ಸಂಪರ್ಕ ರಸ್ತೆ ಅಲ್ಲದೇ ದಾರಿದೀಪದ ವ್ಯವಸ್ಥೆಯನ್ನು ಇಂದು ಸಂಜೆ ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಈ ಸೇತುವೆಯ ನಿರ್ಮಾಣದೊಂದಿಗೆ ಪಡುಕೆರೆಯ ಪ್ರಾಕೃತಿಕ ಸೌಂದರ್ಯ ಹೊರಜಗತ್ತಿಗೆ ತಿಳಿಯಲಿದೆ. ಇಲ್ಲಿನ ಪ್ರವಾಸೋದ್ಯಮ ಚಟುವಟಿಕೆಗಳು ಹೆಚ್ಚಾಗಲಿದೆ. ಪಡುಕೆರೆ ಬೀಚ್‌ನ್ನು ದೇಶದ ಅತ್ಯಂತ ಸುಂದರ ಬೀಚ್ ಆಗಿ ಪರಿವರ್ತಿಸಲಾಗುವುದು. ಮಲ್ಪೆ ಬೀಚ್ ಅಭಿವೃದ್ದಿ ಸಮಿತಿ ಸುಪರ್ದಿಗೆ ಈ ಬೀಚ್‌ನ್ನು ಸೇರ್ಪಡೆಗೊಳಿಸಿ ಅಭಿವೃದ್ದಿಪಡಿಸಲಾಗುವುದು ಎಂದವರು ಭರವಸೆ ನೀಡಿದರು.
ಈ ಬಾರಿಯ ಬಜೆಟ್‌ನಲ್ಲಿ ಮೀನುಗಾರರ ಡೀಸೆಲ್ ಸಬ್ಸಿಡಿಗಾಗಿ 157 ಕೋಟಿ ರೂ. ಮಂಜೂರಾಗಿದೆ. ಎ.1ರಿಂದ ಮೀನುಗಾರಿಕಾ ಬೋಟ್‌ಗಳಿಗೆ ಹೊಸದಾಗಿ ಸಾಧ್ಯತಾ ಪತ್ರ ಪಡೆದ ಮೀನುಗಾರರಿಗೂ ಡೀಸೆಲ್ ಸಬ್ಸಿಡಿ ನೀಡಲಾಗುವುದು ಎಂದ ಮೀನುಗಾರಿಕಾ, ಯುವಸಬಲೀಕರಣ ಹಾಗೂ ಕ್ರೀಡಾ ಸಚಿವ ಪ್ರಮೋದ್, ಮೀನುಗಾರಿಕಾ ಇಲಾಖೆಗೆ ಈ ಬಾರಿಯ ಬಜೆಟ್ ನಲ್ಲಿ 337 ಕೋಟಿ ರೂ.ಗಳನ್ನು ಮೀಸಲಿರಿಸಲಾಗಿದೆ ಎಂದರು.
ತಮ್ಮ ಅಧಿಕಾರಾವಧಿಯಲ್ಲಿ ಜಿಲ್ಲೆಯಲ್ಲಿ ಇದುವರೆವಿಗೆ ಸೇತುವೆಗಳ ನಿರ್ಮಾಣಕ್ಕಾಗಿ 77.50 ಕೋಟಿ ರೂ. ಅನುದಾನ ಮಂಜೂರಾಗಿದೆ. ಮಲ್ಪೆಯಲ್ಲಿ ಒಳಚರಂಡಿ ಹಾಗೂ 24 ಗಂಟೆ ಕುಡಿಯುವ ನೀರು ವ್ಯವಸ್ಥೆಗಾಗಿ ಕುಡ್ಸೆಂಪ್‌ನಿಂದ 320 ಕೋಟಿ ರೂ.ಮಂಜೂರಾಗಿದೆ. ಅಲ್ಲದೇ ಮಲ್ಪೆಯಲ್ಲಿ ಅತ್ಯಾಧುನಿಕ ಹೈಟೆಕ್ ಬಸ್‌ನಿಲ್ದಾಣ ನಿರ್ಮಣಕ್ಕಾಗಿ 4.60 ಕೋಟಿ ರೂ. ಮಂಜೂರಾಗಿದೆ ಸಚಿವರು ತಿಳಿಸಿದರು.
ಕಾರ್ಯಕ್ರಮದಲ್ಲಿ ಪಡುಕೆರೆ ಜನತೆಯ ಪರವಾಗಿ ಸಚಿವ ಪ್ರಮೋದ್ ಮಧ್ವರಾಜ್ ಹಾಗೂ ಸೇತುವೆಯನ್ನು ನಿರ್ಮಿಸಿಕೊಟ್ಟ ಮಂಗಳೂರಿನ ಯೋಜಕಾ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಜಗದೀಶ್ ಬೋಳೂರು ಅವರನ್ನು ಸನ್ಮಾನಿಸಲಾಯಿತು.
ನಗರಸಭೆಯ ಅಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ಸಂಧ್ಯಾ ತಿಲಕರಾಜ್, ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ನರಸಿಂಹಮೂರ್ತಿ, ಜಿಪಂ ಸದಸ್ಯ ಜನಾರ್ಧನ ತೋನ್ಸೆ, ಮೀನುಗಾರರ ಮುಖಂಡರಾದ ಆನಂದ್ ಸಿ. ಕುಂದರ್, ಹಿರಿಯಣ್ಣ ಟಿ. ಕಿದಿಯೂರು, ತಹಶೀಲ್ದಾರ್ ಮಹೇಶ್ಚಂದ್ರ ಹಾಗೂ ನಗರಸಭೆಯ ಸದಸ್ಯರುಗಳು ಉಪಸ್ಥಿತ ರಿದ್ದರು.
ಉಡುಪಿ ನಗರಸಭೆಯ ಪೌರಾಯುಕ್ತ ಡಿ.ಮಂಜುನಾಥಯ್ಯ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು.ಮಲ್ಪೆ-ಪಡುಕೆರೆ ಸೇತುವೆ ಮೇಲುಸ್ತುವಾರಿ ಸಮಿತಿಯ ಅಧ್ಯಕ್ಷ ಸತೀಶ್ ಅಮೀನ್ ಪಡುಕೆರೆ ವಂದಿಸಿದರು.







