ಮಸೀದಿಗೆ ಸೇರಿದ ಜಾಗ ಸ್ವಾಧೀನವಿಲ್ಲ: ಆಯುಕ್ತ ಕರಭೀಮಣ್ಣರವರ್
ಶಿವಮೊಗ್ಗ, ಮಾ.18: ಊರುಗಡೂರು ಗ್ರಾಮದ ಪ್ರಾಧಿಕಾರ ಸ್ವಾಧೀನಪಡಿಸಿಕೊಂಡಿರುವ 67 ಎಕರೆ ಜಾಗದಲ್ಲಿ ಮಸೀದಿಗೆ ಸೇರಿರುವ ಜಾಗವನ್ನು ಭೂ ಸ್ವಾಧೀನ ಪ್ರಕ್ರಿಯೆಯಿಂದ ಕೈಬಿಡಲು ಈಗಾಗಲೇ ಪ್ರಾಧಿಕಾರ ತೀರ್ಮಾನಿಸಿದ್ದು, ಡಿನೋಟಿಫೈ ಮಾಡಲು ಸರಕಾರಕ್ಕೆ ಮನವಿ ಮಾಡಿದೆ ಎಂದು ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಮೂಕಪ್ಪಕರಭೀಮಣ್ಣರವರ್ ಸ್ಪಷ್ಟಪಡಿಸಿದ್ದಾರೆ.
ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಟ್ಟು 67 ಎಕರೆ ಪ್ರದೇಶದಲ್ಲಿ 7 ಎಕರೆ ಮಸೀದಿಯ ಜಾಗ ಹೊರತು ಪಡಿಸಿ ಉಳಿದ ಸುಮಾರು 60 ಎಕರೆ ಪ್ರದೇಶದಲ್ಲಿ ನಿವೇಶನ-ಅಪಾರ್ಟ್‌ಮೆಂಟ್ ನಿರ್ಮಾಣ ಮಾಡಲಾಗುವುದು. ನ್ಯಾಯಾಲಯದ ಆದೇಶದಂತೆ ಭೂ ಮಾಲಕರಿಗೆ ಪ್ರತೀ ಎಕರೆಗೆ 60್ಡ40 ಅಳತೆ ವಿಸ್ತೀರ್ಣದ ನಿವೇಶನ ನೀಡುವ ನಿರ್ಧಾರ ಕೈಗೊಳ್ಳಲಾಗಿದೆ. ಭೂ ಪರಿಹಾರ ಮೊತ್ತವನ್ನು ನ್ಯಾಯಾಲಯದಲ್ಲಿ ಈಗಾಗಲೇ ಡಿಪಾಸಿಟ್ ಮಾಡಲಾಗಿದೆ. ನಿಯಾಮಾನುಸಾರ ಬಡಾವಣೆ ರಚನೆಗೂ ಮುನ್ನ ನಡೆಸಬೇಕಾದ ಪೂರ್ವಭಾವಿ ಪ್ರಕ್ರಿಯೆಯನ್ನು ಪ್ರಾಧಿಕಾರ ಆಡಳಿತ ಆರಂಭಿಸಿದೆ ಎಂದು ಮಾಹಿತಿ ನೀಡಿದ್ದಾರೆ.
ಒಟ್ಟಾರೆ ಸುಮಾರು 600 ನಿವೇಶನ ಹಾಗೂ ಅಪಾರ್ಟ್‌ಮೆಂಟ್‌ನಲ್ಲಿ 300 ಮನೆಗಳು ಹಂಚಿಕೆಗೆ ಲಭ್ಯವಾಗಲಿದ್ದು, ಕಾನೂನುಬದ್ಧ್ದವಾಗಿ ಸಿ.ಎ. ನಿವೇಶನ, ಪಾರ್ಕ್, ರಸ್ತೆ, ಒಳಚರಂಡಿ, ಬೀದಿ ದೀಪ, ಸ್ಮಶಾನಕ್ಕೆ ಜಾಗ, ಆಟದ ಮೈದಾನ ಸೇರಿದಂತೆ ಸಕಲ ಮೂಲಸೌಕರ್ಯಗಳನ್ನು ಒಳಗೊಂಡ ಸುಸಜ್ಜಿತ ಬಡಾವಣೆ ರಚನೆ ಮಾಡಲಾಗುವುದು ಎಂದು ಹೇಳಿದರು.
ಉದ್ದೇಶಿತ ಬಡಾವಣೆ ನಿರ್ಮಾಣದ ಮಣ್ಣು ಪರೀಕ್ಷೆ ನಡೆಸಿ, ಅದರ ವರದಿಯನ್ನು ಸರಕಾರಕ್ಕೆ ಸಲ್ಲಿಸುವುದು ಕಡ್ಡಾಯವಾಗಿದೆ. ಇತ್ತೀಚೆಗೆ ಮಣ್ಣು ಮಾದರಿ ಸಂಗ್ರಹಕ್ಕೆ ಕೆಲವರು ಅಡ್ಡಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆಯ ಸಹಕಾರದೊಂದಿಗೆ ಮಣ್ಣಿನ ಮಾದರಿ ಸಂಗ್ರಹಿಸಿ, ಪರೀಕ್ಷೆಗೆ ಕಳುಹಿಸಿಕೊಡಲಾಗುತ್ತಿದೆ. ಸರಕಾರದಿಂದ ಆಡಳಿತಾತ್ಮಕ ಅನುಮತಿ ದೊರಕುವುದು ಮಾತ್ರ ಬಾಕಿಯಿದ್ದು, ಈ ಅನುಮತಿ ಸಿಗುತ್ತಿದ್ದಂತೆ ಬಡಾವಣೆ ರಚನೆ ಪ್ರಕ್ರಿಯೆ ಆರಂಭಿಸಲಾಗುವುದು ಎಂದು ಮೂಕಪ್ಪ ಕರಭೀಮಣ್ಣರವರು ಸ್ಪಷ್ಟಪಡಿಸಿದ್ದಾರೆ. 36 ವರ್ಷಗಳ ಹಿಂದೆ ಭೂ ಸ್ವಾಧೀನ ಪಡಿಸಿಕೊಳ್ಳಲಾಗಿತ್ತು...!
ಊರುಗಡೂರು ಗ್ರಾಮದಲ್ಲಿ ಬಡಾವಣೆ ರಚನೆ ಮಾಡುವ ಉದ್ದೇಶದಿಂದ 1984-85ರ ಸಾಲಿನಲ್ಲಿ ನಗರಾಭಿವೃದ್ಧಿ ಪ್ರಾಧಿಕಾರವು 67 ಎಕರೆ ಪ್ರದೇಶವನ್ನು ಭೂ ಸ್ವಾಧೀನ ಪಡಿಸಿಕೊಂಡಿತ್ತು. ಭೂಮಿಗೆ ಪ್ರಾಧಿಕಾರ ನಿಗದಿಪಡಿಸಿದ್ದ ದರದ ವಿರುದ್ಧ ಭೂ ಮಾಲಕರು ನ್ಯಾಯಾಲಯದ ಮೊರೆ ಹೋಗಿದ್ದರು. ಜೊತೆಗೆ ಭೂ ಸ್ವಾಧೀನ ಪ್ರಕ್ರಿಯೆ ರದ್ದುಪಡಿಸುವಂತೆಯೂ ನ್ಯಾಯಾಲಯಕ್ಕೆ ಕೋರಿದ್ದರು. ಆದರೆ, ನ್ಯಾಯಾಲಯವು ಬಡಾವಣೆ ರಚನೆಯಾದ ನಂತರ ನಿವೇಶನ ನೀಡಲು ಕ್ರಮ ಜರಗಿಸುವಂತೆ ಸೂಚಿಸಿ, ಭೂ ಸ್ವಾಧೀನ ಪ್ರಕ್ರಿಯೆ ರದ್ದುಪಡಿಸಲು ನಿರಾಕರಿಸಿತ್ತು. ಅದರಂತೆ ಪ್ರಾಧಿಕಾರ ಆಡಳಿತವು ಪ್ರತೀ ಎಕರೆಗೆ 40*60 ಅಳತೆಯ ನಿವೇಶನವನ್ನು ಭೂ ಮಾಲಕರಿಗೆ ನೀಡುವ ನಿರ್ಧಾರ ಮಾಡಿತ್ತು.
ಈಗಾಗಲೇ ನ್ಯಾಯಾಲಯದ ತೀರ್ಪಿನಂತೆ ಭೂ ಮಾಲಕರಿಗೆ ನಿವೇಶನ ನೀಡುವ ತೀರ್ಮಾನ ಕೈಗೊಳ್ಳಲಾಗಿದೆ. ಇದೀಗ ಪ್ರಾಧಿಕಾರವು ನಿಯಮಾನುಸಾರ ಬಡಾವಣೆ ರಚನೆ ಪ್ರಕ್ರಿಯೆ ಆರಂಭಿಸಿದೆ. ಇದಕ್ಕೆ ಭೂ ಮಾಲಕರು ಅವಕಾಶ ನೀಡಬೇಕು. ವಸತಿ ರಹಿತ ನಗರದ ನಾಗರಿಕರಿಗೆ ರಿಯಾಯಿತಿ ದರದಲ್ಲಿ ನಿವೇಶನ ಹಾಗೂ ಅಪಾರ್ಟ್‌ಮೆಂಟ್ ಕಲ್ಪಿಸುವ ಪ್ರಾಧಿಕಾರದ ಮಹತ್ತರ ಧ್ಯೇಯೋದ್ದೇಶಕ್ಕೆ ಸಹಕಾರ ನೀಡಬೇಕು. ಸರಕಾರದಿಮದ ಅನುಮತಿ ಸಿಗುತ್ತಿದ್ದಂತೆ ನಿಯಾಮಾನುಸಾರ ಬಡಾವಣೆ ರಚನೆ ಪ್ರಕ್ರಿಯೆಗೆ ಚಾಲನೆ ನೀಡಲಾಗುವುದು.
ಕೆ.ಎ.ಉಸ್ಮಾನ್










