ತೆಪ್ಪ ಮಗುಚಿ ವ್ಯಕ್ತಿ ಮೃತ್ಯು
ಸಾಗರ, ಮಾ.18 : ತಾಲೂಕಿನ ಶರಾವತಿ ಹಿನ್ನೀರಿನ ಪ್ರದೇಶವಾದ ಚನ್ನಗೊಂಡ ಗ್ರಾಮ ಪಂಚಾಯತ್ ವ್ಯಾಪ್ತಿಯ ಸಿಗ್ಲು ಗ್ರಾಮದ ಪಾಪಣ್ಣ (38) ಎಂಬವರು ತೆಪ್ಪ ಮಗುಚಿ ನೀರು ಪಾಲಾದ ಘಟನೆ ಶುಕ್ರವಾರ ವರದಿಯಾಗಿದೆ.
ಪಾಪಣ್ಣ ಅವರು ಗುರುವಾರ ಬೆಳಗ್ಗೆ 11 ಗಂಟೆ ಸುಮಾರಿಗೆ ಮನೆಯಿಂದ ತೆಪ್ಪ ಮೂಲಕ ಚೆನ್ನಗೊಂಡ ಗ್ರಾಮ ಪಂಚಾಯತ್‌ಗೆ ಹೋಗಿ ಬರುವುದಾಗಿ ತಿಳಿಸಿ ಹೋಗಿದ್ದರು. ಆಶ್ರಯ ಮನೆಗೆ ಸಂಬಂಧಪಟ್ಟ ಹಣ ಮಂಜೂರಾಗಿರುವುದರಿಂದ ಪಂಚಾಯತ್‌ನಿಂದ ಅದರ ಆದೇಶ ಪಡೆದು, ಬ್ಯಾಂಕ್‌ಗೆ ಹೋಗಿ ಹಣ ತರುವುದಾಗಿ ತಿಳಿಸಿ ಹೋಗಿದ್ದ ಪಾಪಣ್ಣ ರಾತ್ರಿಯಾದರೂ ವಾಪಾಸ್ ಮನೆಗೆ ಬಂದಿರಲಿಲ್ಲ. ಗಾಬರಿಗೊಂಡ ಮನೆಯವರು ಅಕ್ಕಪಕ್ಕ ಹಾಗೂ ಪರಿಚಯಸ್ಥರ ಮನೆಗಳಲ್ಲಿ ವಿಚಾರಿಸಿದ್ದಾರೆ.
ಆದರೆ ಪಾಪಣ್ಣ ಅವರು ಪತ್ತೆಯಾಗಿರಲಿಲ್ಲ. ಶುಕ್ರವಾರ ಮಧ್ಯಾಹ್ನ 3 ಗಂಟೆ ಸುಮಾರಿಗೆ ಚಂಬಳ್ಳಿ ಬಳಿ ಅವರ ಮೃತದೇಹ ನೀರಿನಲ್ಲಿ ತೆಪ್ಪದ ಸಮೇತ ಪತ್ತೆಯಾಗಿದೆ ಎನ್ನಲಾಗಿದೆ. ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಕಾರ್ಗಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





