‘ಉರಿನಾಲಗೆ’ಯ ಯೋಗಿಗೆ ವಿವಾದಗಳೇ ಅಸ್ತ್ರ

ಲಕ್ನೋ,ಮಾ.18: ಉತ್ತರಪ್ರದೇಶದ 21ನೇ ಮುಖ್ಯಮಂತ್ರಿಯಾಗಿ ರವಿವಾರ ಅಧಿಕಾರ ಸ್ವೀಕರಿಸಲಿರುವ ಯೋಗಿ ಆದಿತ್ಯನಾಥ್ ತನ್ನ ಪ್ರಚೋದನಕಾರಿ ಭಾಷಣಗಳಿಂದಾಗಿ ಹಲವು ಸಲ ವಿವಾದಗಳ ಸುಳಿಗೆ ಸಿಲುಕಿದ ರಾಜಕಾರಣಿ. ಗೋರಖ್‌ಪುರ ಲೋಕಸಭಾ ಕ್ಷೇತ್ರದ ಸದಸ್ಯರಾದ 43 ವರ್ಷದ ಆದಿತ್ಯನಾಥ್ 1998ರಿಂದೀಚೆಗೆ ಸತತವಾಗಿ ಈ ಕ್ಷೇತ್ರದಿಂದ ಆಯ್ಕೆಯಾಗುತ್ತಾ ಬಂದಿದ್ದಾರೆ. ಇದಕ್ಕೂ ಮೊದಲು ಆ ಕ್ಷೇತ್ರವನ್ನು ಅವರ ‘ಆಧ್ಯಾತ್ಮಿಕ ತಂದೆ’ಯೆಂದೇ ಗುರುತಿಸಲ್ಪಟ್ಟಿರುವ ಪರಮಹಂತ್ ಅವೈದ್ಯನಾಥ್ ಪ್ರತಿನಿಧಿಸಿದ್ದರು.
1998ರ ಲೋಕಸಭಾ ಚುನಾವಣೆಯಲ್ಲಿ ಗೋರಖ್‌ಪುರ ಕ್ಷೇತ್ರದಿಂದ ಆದಿತ್ಯನಾಥ್ ಮೊದಲ ಬಾರಿಗೆ ಆಯ್ಕೆಯಾದಾಗ ಅವರಿಗೆ ಕೇವಲ 26 ವರ್ಷ ವಯಸ್ಸಾಗಿದ್ದು, 12ನೆ ಲೋಕಸಭೆಯ ಅತ್ಯಂತ ಕಿರಿಯ ವಯಸ್ಸಿನ ಸಂಸದರೆನಿಸಿದ್ದರು. 2005ರಲ್ಲಿ ಗೋರಖ್‌ಪುರದಲ್ಲಿ ನಡೆದ ಕೆಲವು ಮುಸ್ಲಿಮರು ಹಾಗೂ ಕ್ರೈಸ್ತರ ಬಲವಂತದ ಮತಾಂತರದಲ್ಲಿ ಆದಿತ್ಯನಾಥ್ ಅವರ ಪಾತ್ರವಿತ್ತೆನ್ನಲಾಗಿದೆ. ಗೋರಖ್‌ಪುರದ ಗೋರಖ್‌ನಾಥ್ ಮಠದ ವರಿಷ್ಠರೂ ಆಗಿರುವ ಅವರು ಉತ್ತರಪ್ರದೇಶಾದ್ಯಂತ ಅಪಾರ ಬೆಂಬಲಿಗರನ್ನು ಹೊಂದಿದ್ದಾರೆ.
ಬಿಎಸ್ಸಿ ಪದವೀಧರರಾದ ಆದಿತ್ಯನಾಥ್, ರಜಪೂತ್ ಸಮುದಾಯದವರಾಗಿದ್ದು ಅವರ ಪೂರ್ವಾಶ್ರಮದ ಹೆಸರು ಅಜಯ್ ಸಿಂಗ್ ಬಿಷ್ಟ್ ಎಂದಾಗಿದೆ.
2014ರಲ್ಲಿ ಮೋದಿ ನೇತೃತ್ವದ ಸರಕಾರ ಕೇಂದ್ರದಲ್ಲಿ ಅಧಿಕಾರಕ್ಕೇರಿದ ಬಳಿಕ, ಘರ್‌ವಾಪಸಿಯ ಹೆಸರಿನಲ್ಲಿ ಮತ್ತೆ ಸಂಘಪರಿವಾರದಿಂದ ಮತಾಂತರ ಚಟುವಟಿಕೆಗಳು ತೀವ್ರಗೊಂಡಿದ್ದವು. 2007ರಲ್ಲಿ ನಡೆದ ಉತ್ತರಪ್ರದೇಶ ಕೋಮುಗಲಭೆಯಲ್ಲೂ ಆದಿತ್ಯನಾಥ್ ಅವರ ಹೆಸರು ಕೇಳಿಬಂದಿತ್ತು. ಅವರು ಮಾಡಿದ ಪ್ರಚೋದನಾಕಾರಿ ಭಾಷಣವು ರಾಜ್ಯದಲ್ಲಿ ಕೋಮುಗಲಭೆಗೆ ಎಡೆಮಾಡಿಕೊಟ್ಟಿತ್ತು. ಕೋಮುದ್ವೇಷದ ಭಾಷಣ ಮಾಡಿದ ಆರೋಪದಲ್ಲಿ ಆದಿತ್ಯನಾಥ್‌ರ ಬಂಧನವಾದ ಬೆನ್ನಲ್ಲೇ ಅವರ ಬೆಂಬಲಿಗರು ಹಿಂಸಾಚಾರಕ್ಕಿಳಿದಿದ್ದರು ಹಾಗೂ ಮುಂಬೈಗೆ ತೆರಳುತ್ತಿದ್ದ ಮುಂಬೈ-ಗೋರಖ್‌ಪುರ್ ಗೋದಾನ್ ಎಕ್ಸ್‌ಪ್ರೆಸ್‌ಗೆ ಬೆಂಕಿ ಹಚ್ಚಿದ್ದರು.
ಉರಿನಾಲಗೆಯ ರಾಜಕಾರಣಿಯೆಂದೇ ಹೆಸರಾದ ಯೋಗಿ ಆದಿತ್ಯನಾಥ್, ಪ್ರಸ್ತಾಪಿಸುತ್ತಾ‘‘ಕಾಶ್ಮೀರದಲ್ಲಿ 27 ವರ್ಷಗಳ ಹಿಂದೆ ಇದ್ದಂತಹ ಪರಿಸ್ಥಿತಿ ಈಗ ಪಶ್ಚಿಮ ಉತ್ತರಪ್ರದೇಶದಲ್ಲಿದೆ ’’ಎಂದು ಹೇಳಿದ್ದರು. ಈ ವರ್ಷದ ಜನವರಿಯಲ್ಲಿ ಸಾಹಿಬಾಬಾದ್‌ನಲ್ಲಿ ನಡೆದ ರ್ಯಾಲಿಯಲ್ಲಿ ಪ್ರಚೋದನಾಕಾರಿ ಭಾಷಣ ಮಾಡಿದ್ದ ಆದಿತ್ಯನಾಥ್ 1990ರಲ್ಲಿ ಕಾಶ್ಮೀರದಿಂದ ಹಿಂದೂಗಳು ಸಾಮೂಹಿಕವಾಗಿ ವಲಸೆ ಹೋದಂತೆ, ಪಶ್ಚಿಮ ಉತ್ತರಪ್ರದೇಶದ ಖೈರಾನಾದಿಂದ .ಹಿಂದೂಗಳು ಈಗ ಗುಳೆ ಎದ್ದುಹೋಗುತ್ತಿದ್ದಾರೆ ಎಂದಿದ್ದರು.
ಯೋಗಿ ಆದಿತ್ಯನಾಥ್ ಬಿಜೆಪಿ ಸಂಸದರಾದರೂ, ಅವರು ಸ್ಥಾಪಿಸಿದ ಹಿಂದೂಯುವವಾಹಿನಿ ಹಲವು ಬಾರಿ ಬಿಜೆಪಿ ವಿರೋಧಿ ನಿಲುವನ್ನು ಪ್ರದರ್ಶಿಸಿತ್ತು. ಹಿಂದೂ ಯುವವಾಹಿನಿಯ ರಾಜ್ಯ ಘಟಕದ ಅಧ್ಯಕ್ಷ ಸುನೀಲ್‌ಸಿಂಗ್ ಅವರು ಉತ್ತರಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಹಿಂದೂ ಯುವವಾಹಿನಿಯು ಬಿಜೆಪಿ ಅಭ್ಯರ್ಥಿಗಳ ವಿರುದ್ಧ ಸ್ಪರ್ಧಿಸುವುದೆಂದು ಘೋಷಿಸಿದ್ದ ಸಂಘಟನೆಯ ಅಧ್ಯಕ್ಷ ಸುನೀಲ್‌ಸಿಂಗ್ ಅವರನ್ನು ಯೋಗಿ ಉಚ್ಚಾಟಿಸಿದ್ದರು. ಆಗಾಗ್ಗೆ ತಾನು ಮಾಡುವ ತೀವ್ರವಾದಿ ಭಾಷಣಗಳನ್ನು ಸಮರ್ಥಿಸಿಕೊಳ್ಳುವ ಆದಿತ್ಯನಾಥ್, ‘‘ಹಿಂದುತ್ವವನ್ನು ತೊರೆಯಲು ನನಗೆ ಸಾಧ್ಯವಿಲ್ಲ. ಹಿಂದುತ್ವ ಹಾಗೂ ಅಭಿವೃದ್ಧಿ ನಮ್ಮ ಮುಖ್ಯವಿಷಯಗಳಾಗಿವೆ’’ ಎಂದವರು ಹೇಳಿದ್ದರು.
ಹಿಂದೂಗಳು ಹಲವೆಡೆ ಸಂತ್ರಸ್ತರಾಗಿದ್ದಾರೆ. ಅವರು ತಮ್ಮ ತಾಯ್ನಾಡಿನಿಂದಲೇ ಪಲಾಯನಗೈಯುತ್ತಿದ್ದಾರೆ. ಅವರ ಪರವಾಗಿ ಧ್ವನಿಯೆತ್ತುವುದು ಅನಿವಾರ್ಯವೆಂದು ಅವರು ಗುಡುಗಿದ್ದರು.
ತೀರಾ ಇತ್ತೀಚೆಗೆ ಅವರು ಬಾಲಿವುಡ್ ನಟ ಶಾರುಖ್ ಖಾನ್ ಅವರನ್ನು ಪಾಕ್ ಮೂಲದ ಉಗ್ರಗಾಮಿ ಹಾಫಿಝ್ ಸಯೀದ್‌ಗೆ ಹೋಲಿಸುವ ಮೂಲಕ ಹೊಸ ವಿವಾದವನ್ನು ಸೃಷ್ಟಿಸಿದ್ದರು. 2017ರ ವಿಧಾನಸಭಾ ಚುನಾವಣೆಯಲ್ಲಿ ಮೋದಿ ಬಳಿಕ ಆದಿತ್ಯನಾಥ್ ಬಿಜೆಪಿಯ ಸ್ಟಾರ್ ಪ್ರಚಾರಕರೆನಿಸಿದ್ದರು.







