ಎರಡನೆ ಟೆಸ್ಟ್: ದಕ್ಷಿಣ ಆಫ್ರಿಕಕ್ಕೆ 8 ವಿಕೆಟ್ ಜಯ
ಕೇಶವ್ ಮಹಾರಾಜ್ ಜೀವನಶ್ರೇಷ್ಠ ಸಾಧನೆ

ವೆಲ್ಲಿಂಗ್ಟನ್, ಮಾ.18: ಕೇಶವ್ ಮಹಾರಾಜ್ ಜೀವನಶ್ರೇಷ್ಠ ಬೌಲಿಂಗ್ ಬಲದಿಂದ ದಕ್ಷಿಣ ಆಫ್ರಿಕ ತಂಡ ನ್ಯೂಝಿಲೆಂಡ್ ವಿರುದ್ಧದ ಎರಡನೆ ಟೆಸ್ಟ್ ಪಂದ್ಯವನ್ನು 8 ವಿಕೆಟ್‌ಗಳ ಅಂತರದಿಂದ ಗೆದ್ದುಕೊಂಡಿತು.
ಮೂರು ದಿನದೊಳಗೆ 2ನೆ ಟೆಸ್ಟ್ ಪಂದ್ಯವನ್ನು ಜಯಿಸಿರುವ ಹರಿಣ ಪಡೆ ಮೂರು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿತು. ಮೊದಲ ಪಂದ್ಯ ಮಳೆಗಾಹುತಿಯಾಗಿತ್ತು. ಮೂರನೆ ಹಾಗೂ ಅಂತಿಮ ಟೆಸ್ಟ್ ಪಂದ್ಯ ಶನಿವಾರ ಹ್ಯಾಮಿಲ್ಟನ್‌ನಲ್ಲಿ ಆರಂಭವಾಗಲಿದೆ.
ಎಡಗೈ ಸ್ಪಿನ್ನರ್ ಮಹಾರಾಜ್ ಹಾಗೂ ವೇಗದ ಬೌಲರ್ ಮೊರ್ನೆ ಮೊರ್ಕೆಲ್ ದಾಳಿಗೆ ತತ್ತರಿಸಿದ ಕಿವೀಸ್ ಪಡೆ ಎರಡನೆ ಇನಿಂಗ್ಸ್‌ನಲ್ಲಿ ಕೇವಲ 171 ರನ್‌ಗೆ ಆಲೌಟಾಯಿತು. 40 ರನ್‌ಗೆ ಆರು ವಿಕೆಟ್‌ಗಳನ್ನು ಕಬಳಿಸಿದ ಮಹಾರಾಜ್ ಜೀವನಶ್ರೇಷ್ಠ ಬೌಲಿಂಗ್ ಮಾಡಿದರು. ತನ್ನ ಆರನೆ ಟೆಸ್ಟ್ ಪಂದ್ಯದಲ್ಲಿ 2ನೆ ಬಾರಿ ಐದು ವಿಕೆಟ್ ಗೊಂಚಲು ಪಡೆದರು. ವೇಗ ಹಾಗೂ ಬೌನ್ಸರ್‌ನ ಮೂಲಕ ಕಿವೀಸ್‌ನ್ನು ಕಾಡಿದ ಮೊರ್ಕೆಲ್ ನಾಯಕ ಕೇನ್ ವಿಲಿಯಮ್ಸನ್(1) ಸಹಿತ 50 ರನ್‌ಗೆ ಮೂರು ವಿಕೆಟ್‌ಗಳನ್ನು ಉರುಳಿಸಿದರು.
ಕಿವೀಸ್‌ನ್ನು ಕನಿಷ್ಠ ಮೊತ್ತಕ್ಕೆ ನಿಯಂತ್ರಿಸಿದ ದಕ್ಷಿಣ ಆಫ್ರಿಕ ತಂಡ ಗೆಲುವಿಗೆ 81 ರನ್ ಗುರಿ ಪಡೆದಿತ್ತು. 25 ಓವರ್‌ಗಳಲ್ಲಿ 2 ವಿಕೆಟ್‌ಗಳ ನಷ್ಟಕ್ಕೆ ಗುರಿ ತಲುಪಿತು. ಹಾಶಿಮ್ ಅಮ್ಲ(ಅಜೇಯ 38) ಹಾಗೂ ಜೆಪಿ ಡುಮಿನಿ(ಅಜೇಯ 15) ತಂಡಕ್ಕೆ ಸುಲಭ ಗೆಲುವು ತಂದರು. ಪಂದ್ಯದಲ್ಲಿ ಒಟ್ಟು 8 ವಿಕೆಟ್‌ಗಳನ್ನು ಪಡೆದ ಕೇಶವ ಮಹಾರಾಜ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
9 ವಿಕೆಟ್ ನಷ್ಟಕ್ಕೆ 349 ರನ್‌ನಿಂದ ಮೊದಲ ಇನಿಂಗ್ಸ್ ಮುಂದುವರಿಸಿದ ದಕ್ಷಿಣ ಆಫ್ರಿಕದ ಪರ ಮೊರ್ಕೆಲ್ ಹಾಗೂ ಫಿಲ್ಯಾಂಡರ್ ಇಂದು 10 ರನ್ ಸೇರಿಸಿದರು. ಮೊರ್ಕೆಲ್(40) ವಿಕೆಟ್ ಪಡೆದ ಜೀತನ್ ಪಟೇಲ್ ಅಂತಿಮ ವಿಕೆಟ್‌ನಲ್ಲಿ ದಾಖಲಾದ 57 ರನ್ ಜೊತೆಯಾಟಕ್ಕೆ ತೆರೆ ಎಳೆದರು.
ಎರಡನೆ ಇನಿಂಗ್ಸ್‌ನಲ್ಲಿ ನ್ಯೂಝಿಲೆಂಡ್ 63.2 ಓವರ್‌ಗಳಲ್ಲಿ 171ರನ್‌ಗೆ ಆಲೌಟಾಗಿದ್ದು, ತಂಡದ ಪರ ವಾಟ್ಲಿಂಗ್(29) ಅಗ್ರ ಸ್ಕೋರರ್ ಎನಿಸಿಕೊಂಡರು.
ಸಂಕ್ಷಿಪ್ತ ಸ್ಕೋರ್
ನ್ಯೂಝಿಲೆಂಡ್ ಮೊದಲ ಇನಿಂಗ್ಸ್: 268 ರನ್‌ಗೆ ಆಲೌಟ್
ದಕ್ಷಿಣ ಆಫ್ರಿಕ ಮೊದಲ ಇನಿಂಗ್ಸ್: 359 ರನ್‌ಗೆ ಆಲೌಟ್
ನ್ಯೂಝಿಲೆಂಡ್ ಎರಡನೆ ಇನಿಂಗ್ಸ್: 171 ರನ್‌ಗೆ ಆಲೌಟ್
ದಕ್ಷಿಣ ಆಫ್ರಿಕ ದ್ವಿತೀಯ ಇನಿಂಗ್ಸ್: 83/2







