ಜಾರ್ಖಂಡ್‌ನ್ನು ಮಣಿಸಿದ ಬಂಗಾಳ ಫೈನಲ್‌ಗೆ
ವಿಜಯ್ ಹಝಾರೆ ಟ್ರೋಫಿ

ಹೊಸದಿಲ್ಲಿ, ಮಾ.18: ಆರಂಭಿಕ ಬ್ಯಾಟ್ಸ್‌ಮನ್‌ಗಳಾದ ಶ್ರೀವಾಸ್ತವ ಗೋಸ್ವಾಮಿ(101) ಹಾಗೂ ಈಶ್ವರನ್(101) ಸಿಡಿಸಿದ ಆಕರ್ಷಕ ಶತಕ, ನಾಯಕ ಮನೋಜ್ ತಿವಾರಿ(75) ಬಾರಿಸಿದ ಅರ್ಧಶತಕದ ಸಹಾಯದಿಂದ ಬಂಗಾಳ ತಂಡ ಜಾರ್ಖಂಡ್ ತಂಡವನ್ನು 41 ರನ್‌ಗಳ ಅಂತರದಿಂದ ಮಣಿಸುವುದರೊಂದಿಗೆ ಫೈನಲ್‌ಗೆ ಲಗ್ಗೆ ಇಟ್ಟಿದೆ.
ರವಿವಾರ ನಡೆಯಲಿರುವ ಫೈನಲ್‌ನಲ್ಲಿ ತಮಿಳುನಾಡು ತಂಡವನ್ನು ಎದುರಿಸಲಿದೆ.
ಮೊದಲು ಬ್ಯಾಟಿಂಗ್ ಮಾಡಿದ ಬಂಗಾಳ ತಂಡ ನಿಗದಿತ 50 ಓವರ್‌ಗಳಲ್ಲಿ 4 ವಿಕೆಟ್‌ಗಳ ನಷ್ಟಕ್ಕೆ 329 ರನ್ ಗಳಿಸಿತು. ಗೆಲ್ಲಲು ಕಠಿಣ ಗುರಿ ಪಡೆದ ಜಾರ್ಖಂಡ್ ತಂಡ ನಾಯಕ ಎ.ಂಎಸ್. ಧೋನಿ(70 ರನ್, 62 ಎಸೆತ, 2 ಬೌಂಡರಿ, 4 ಸಿಕ್ಸರ್) ಹಾಗೂ ಇಶಾನ್ ಜಗ್ಗಿ(59, 43 ಎಸೆತ, 3 ಬೌಂಡರಿ,3 ಸಿಕ್ಸರ್) ಹೋರಾಟದ ಹೊರತಾಗಿಯೂ 50 ಓವರ್‌ಗಳಲ್ಲಿ 288 ರನ್‌ಗೆ ಆಲೌಟಾಯಿತು.
ಎಡಗೈ ಸ್ಪಿನ್ನರ್ ಪ್ರಗ್ಯಾನ್ ಓಜಾ(5-71), ಸೇತ್(2-48) ಹಾಗೂ ಘೋಷ್(2-52) ಜಾರ್ಖಂಡ್ ತಂಡ ಫೈನಲ್‌ಗೆ ತಲುಪದಂತೆ ತಡೆಯಾದರು. ಧೋನಿ ಎರಡು ಮುಖ್ಯ ಜೊತೆಯಾಟದಿಂದ ತಂಡವನ್ನು ಗೆಲುವಿನತ್ತ ಕೊಂಡೊಯ್ಯಲು ವಿಫಲ ಯತ್ನ ನಡೆಸಿದರು. 4ನೆ ವಿಕೆಟ್‌ಗೆ ಸೌರಭ್ ತಿವಾರಿಯೊಂದಿಗೆ 54 ರನ್ ಹಾಗೂ 5ನೆ ವಿಕೆಟ್‌ಗೆ ಜಗ್ಗಿಯೊಂದಿಗೆ 97 ರನ್ ಸೇರಿಸಿದರು.
ಇದಕ್ಕೆ ಮೊದಲು ಟಾಸ್ ಸೋತು ಬ್ಯಾಟಿಂಗ್‌ಗೆ ಆಹ್ವಾನಿಸಲ್ಪಟ್ಟ ಬಂಗಾಳ ತಂಡಕ್ಕೆ ಗೋಸ್ವಾಮಿ(101 ರನ್,99 ಎಸೆತ, 11ಬೌಂಡರಿ, 1 ಸಿಕ್ಸರ್) ಹಾಗೂ ಈಶ್ವರ(101 ರನ್, 121 ಎಸೆತ, 7 ಬೌಂಡರಿ, 1 ಸಿಕ್ಸರ್) ಮೊದಲ ವಿಕೆಟ್‌ಗೆ 198 ರನ್ ಸೇರಿಸಿ ಉತ್ತಮ ಆರಂಭ ಒದಗಿಸಿದರು. ಔಟಾಗದೆ 75 ರನ್ ಗಳಿಸಿದ ನಾಯಕ ಮನೋಜ್ ತಿವಾರಿ ಬಂಗಾಳದ ಮೊತ್ತವನ್ನು 329ಕ್ಕೆ ತಲುಪಿಸಿದರು.







