ಆರ್‌ಟಿಐ ಅರ್ಜಿ ಸಲ್ಲಿಸಿದ್ದಕ್ಕಾಗಿ ಬಹಿಷ್ಕಾರ!
ಹೈದರಾಬಾದ್,ಮಾ.18: ತನ್ನ ಗ್ರಾಮದಲ್ಲಿ ಅಳವಡಿಸಲಾಗಿರುವ ವಿದ್ಯುತ್ ಪರಿವರ್ತಕಗಳಲ್ಲಿ ಶಂಕಿತ ಅವ್ಯವಹಾರಗಳನ್ನು ಬಯಲಿಗೆಳೆಯಲು ಆರ್‌ಟಿಐ ಕಾಯ್ದೆಯಡಿ ಅರ್ಜಿ ಸಲ್ಲಿಸಿದ್ದಕ್ಕಾಗಿ ಯುವಕನೋರ್ವನಿಗೆ 60,000 ರೂ.ದಂಡ ವಿಧಿಸಿ,ಆತನ ಕುಟುಂಬಕ್ಕೆ ಬಹಿಷ್ಕಾರ ಹಾಕಿರುವ ಘಟನೆ ನಿಜಾಮಾಬಾದ್ ಜಿಲ್ಲೆಯ ಜಿ.ಜಿ.ನಡಿಕುಡ ಗ್ರಾಮದಲ್ಲಿ ನಡೆದಿದೆ.
ಗ್ರಾಮದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಅನುಷ್ಠಾನದ ಉಸ್ತುವಾರಿ ಹೊಂದಿರುವ ಗ್ರಾಮಾಭಿವೃದ್ಧಿ ಸಮಿತಿಯು ಶೇಂದಿ ಮೂರ್ತೆದಾರ ಬಿ.ರಾಜು ಗೌಡ(31) ಮತ್ತು ಅವರ ಕುಟುಂಬವನ್ನು ಬಹಿಷ್ಕರಿಸಿ ಆದೇಶ ಹೊರಡಿಸಿದೆ.
ಗೌಡ ಮತ್ತು ಅವರ ಕುಟುಂಬ ಸದಸ್ಯರೊಂದಿಗೆ ಮಾತನಾಡಲೂ ಗ್ರಾಮಸ್ಥರು ನಿರಾಕರಿಸುತ್ತಿದ್ದಾರೆ. ಅವರೊಂದಿಗೆ ಮಾತನಾಡುವವರಿಗೆ 30,000 ರೂ.ದಂಡ ವಿಧಿಸುವುದಾಗಿ ಸಮಿತಿಯು ಎಚ್ಚರಿಕೆ ನೀಡಿದೆ.
ನಮ್ಮ ಮನೆಗೆ ನೀರು,ಹಾಲು ಪೂರೈಕೆಯಾಗುತ್ತಿಲ್ಲ. ನಮ್ಮಿಂದ ಶೇಂದಿಯನ್ನು ಯಾರೂ ಖರೀದಿಸುತ್ತಿಲ್ಲ. ಯಾವುದೇ ಅಂಗಡಿಯಲ್ಲಿಯೂ ನಮಗೆ ಸಾಮಾನು, ತರಕಾರಿ ಮಾರುತ್ತಿಲ್ಲ ಎಂದು ಗೌಡ ಸುದ್ದಿಗಾರರಿಗೆ ತಿಳಿಸಿದರು. ಸದ್ಯ ಅವರು ನೆರೆಯ ಗಡಪಲ್ಲಿ ಗ್ರಾಮದಿಂದ ಅಗತ್ಯ ಸಾಮಗ್ರಿಗಳನ್ನು ಖರೀದಿಸುತ್ತಿದ್ದಾರೆ.
ನೆರೆಯ ಗ್ರಾಮದ ಇಬ್ಬರು ಸ್ನೇಹಿತರು ಹೊರತುಪಡಿಸಿದರೆ ನಮ್ಮ ಕಷ್ಟ ಕೇಳುವವರೇ ಇಲ್ಲ. ನಾವು ಕಳೆದ 50 ವರ್ಷಗಳಿಂದಲೂ ಇಲ್ಲಿ ವಾಸವಾಗಿದ್ದು, ಇದೀಗ ನಮ್ಮನ್ನು ಗ್ರಾಮದಿಂದಲೇ ಹೊರದಬ್ಬಲು ಸಮಿತಿಯು ಹುನ್ನಾರ ನಡೆಸುತ್ತಿದೆ ಎಂದು ಗೌಡ್ ಆರೋಪಿಸಿದರು.