448 ಕೋ.ರೂ.ತೆರಿಗೆ ಬಾಕಿದಾರರ ಹೆಸರುಗಳು ಬಹಿರಂಗ
ಹೊಸದಿಲ್ಲಿ,ಮಾ.18: 448.02 ಕೋ.ರೂ.ಗಳ ತೆರಿಗೆಯನ್ನು ಬಾಕಿಯುಳಿಸಿಕೊಂಡಿ ರುವ 29 ಸಂಸ್ಥೆಗಳ ಹೆಸರುಗಳನ್ನು ಆದಾಯ ತೆರಿಗೆ ಇಲಾಖೆಯು ಬಹಿರಂಗ ಗೊಳಿಸಿದೆ.
ಪ್ರಮುಖ ರಾಷ್ಟ್ಟ್ರೀಯ ದೈನಿಕಗಳಲ್ಲಿ ಪ್ರಕಟಗೊಂಡಿರುವ ಜಾಹೀರಾತುಗಳಲ್ಲಿ ಈ ತೆರಿಗೆ ಸುಸ್ತಿದಾರರ ಹೆಸರುಗಳನ್ನು ಪ್ರಕಟಿಸಿರುವ ಇಲಾಖೆಯು ತೆರಿಗೆ ಬಾಕಿಯನ್ನು ತಕ್ಷಣವೇ ಪಾವತಿಸುವಂತೆ ಸೂಚಿಸಿದೆ.
ಇಲಾಖೆಯು ಈ ಹಿಂದೆಯೂ ಭಾರೀ ಮೊತ್ತದ ತೆರಿಗೆಯನ್ನು ಬಾಕಿಯುಳಿಸಿಕೊಂಡಿ ರುವ 67 ಸಂಸ್ಥೆಗಳ ಹೆಸರುಗಳನ್ನು ಜಾಹೀರಾತುಗಳಲ್ಲಿ ಪ್ರಕಟಿಸಿತ್ತಾದರೂ ಅವುಗಳ ಪತ್ತೆಯೇ ಇಲ್ಲ ಅಥವಾ ತೆರಿಗೆ ಬಾಬ್ತು ಮುಟ್ಟುಗೋಲು ಹಾಕಿಕೊಳ್ಳಲು ಯಾವುದೇ ಆಸ್ತಿಯನ್ನು ತೋರಿಸಿಲ್ಲ.
ಬಾಕಿದಾರರ ಪಾನ್ ಸಂಖ್ಯೆ, ವಿಳಾಸ, ಬಾಕಿಯಿರುವ ತೆರಿಗೆ ಇತ್ಯಾದಿ ವಿವರಗಳನ್ನು ಜಾಹೀರಾತಿನಲ್ಲಿ ಪ್ರಕಟಿಸಲಾಗಿದೆ. ಬಾಕಿದಾರರಿಗೆ ಮುಖಭಂಗವನ್ನುಂಟು ಮಾಡುವ ಜೊತೆಗೆ ಅವರ ಬಗ್ಗೆ ಗೊತ್ತಿರುವ ಸಾರ್ವಜನಿಕರು ಇಲಾಖೆಗೆ ಮಾಹಿತಿ ನೀಡುವಂತೆ ಜಾಗೃತಿ ಮೂಡಿಸುವುದು ಸಹ ಈ ಕ್ರಮದ ಉದ್ದೇಶವಾಗಿದೆ ಎಂದು ಹಿರಿಯ ಅಧಿಕಾರಿಯೋರ್ವರು ತಿಳಿಸಿದರು.





