1 ಲಕ್ಷ ಮದ್ರಸಗಳಲ್ಲಿ ಕೇಂದ್ರದಿಂದ ಶೌಚಗೃಹ ನಿರ್ಮಾಣ
ಹೊಸದಿಲ್ಲಿ, ಮಾ.18: ದೇಶಾದ್ಯಂತದ ಸುಮಾರು ಒಂದು ಲಕ್ಷ ಮದ್ರಸಾಗಳಲ್ಲಿ ಶೌಚಗೃಹಗಳನ್ನು ನಿರ್ಮಿಸಲು ಕೇಂದ್ರ ಸರಕಾರವು ಯೋಜನೆಯನ್ನು ಹಮ್ಮಿಕೊಂಡಿದೆ.
ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಹಾಯಕ ಸಚಿವ ಮುಖ್ತರ್ ಅಬ್ಬಾಸ್ ನಖ್ವಿ ಶನಿವಾರ ಈ ವಿಷಯ ತಿಳಿಸಿದ್ದು, ಕೇಂದ್ರ ಸರಕಾರವು ‘ ಟೀಚರ್, ಟಿಫಿನ್ ಹಾಗೂ ಟಾಯ್ಲೆಟ್’ ಎಂಬ 3ಟಿ ಸೂತ್ರದ ಭಾಗವಾಗಿ ಮದ್ರಸಾಗಳಲ್ಲಿ ಮಧ್ಯಾಹ್ನದೂಟ ಯೋಜನೆಯನ್ನು ಜಾರಿಗೆ ತರಲಿದೆ ಹಾಗೂ ಶಿಕ್ಷಕರ ಬೋಧನಾ ನೈಪುಣ್ಯವನ್ನು ಮೇಲ್ದರ್ಜೆಗೇರಿಸಲಿದೆಯೆಂದು ಹೇಳಿದ್ದಾರೆ.
ವೌಲಾನಾ ಆಝಾದ್ ಶಿಕ್ಷಣ ಪ್ರತಿಷ್ಠಾನದ ಆಡಳಿತ ಮಂಡಳಿ ಹಾಗೂ ಮಹಾಮಂಡಳಿಗಳ ಸಭೆಯಲ್ಲಿ ಪಾಲ್ಗೊಂಡ ಬಳಿಕ ಅವರು ಹೊಸದಿಲ್ಲಿಯ ತನ್ನ ಕಾರ್ಯಾಲಯದಲ್ಲಿ ಸುದ್ದಿಗಾರರ ಜೊತೆ ಮಾತನಾಡುತ್ತಿದ್ದರು. ವೌಲಾನಾ ಆಝಾದ್ ಶಿಕ್ಷಣ ಪ್ರತಿಷ್ಠಾನವು ಕೇಂದ್ರ ಅಲ್ಪಸಂಖ್ಯಾತ ವ್ಯವಹಾರ ಸಚಿವಾಲಯದಡಿ ಕಾರ್ಯನಿರ್ವಹಿಸುವ ಸ್ವಾಯತ್ತ ಸಂಸ್ಥೆಯಾಗಿದೆ.
ಮುಖ್ಯವಾಹಿನಿಯ ಶಿಕ್ಷಣವನ್ನು ನೀಡುವ ಅಥವಾ ಅಂತಹ ಶಿಕ್ಷಣ ನೀಡಬಯಸುತ್ತಿರುವ ಮದ್ರಸಾಗಳಿಗೆ ದೊಡ್ಡ ಮಟ್ಟದಲ್ಲಿ ನೆರವಾಗಲು ಸರಕಾರ ಬಯಸುತ್ತಿದೆ ಎಂದವರು ಹೇಳಿದರು.
ಮುಂದಿನ ವಿತ್ತ ವರ್ಷದ ಅಂತ್ಯದೊಳಗೆ ಇಂತಹ ಒಂದು ಲಕ್ಷ ಮದ್ರಸಾಗಳಲ್ಲಿ ಸ್ವಚ್ಛ ಭಾರತ ಯೋಜನೆಯಡಿ ಶೌಚಗೃಹಗಳನ್ನು ನಿರ್ಮಿಸುವ ಗುರಿಯನ್ನು ಹೊಂದಲಾಗಿದೆಯೆಂದು ನಖ್ವಿ ತಿಳಿಸಿದರು.
ವಿಜ್ಞಾನ ಹಾಗೂ ತಂತ್ರಜ್ಞಾನ ಶಿಕ್ಷಣವನ್ನು ಅಳವಡಿಸುವ ಮೂಲಕ ಕೆಲವು ಮದ್ರಸಾಗಳನ್ನು ಆಧುನೀಕರಿಸುವ ಉದ್ದೇಶವನ್ನು ಕೂಡಾ ಸರಕಾರ ಹೊಂದಿದೆ. ಸರಕಾರದ ಈ ಯೋಜನೆಯಲ್ಲಿ ಕೈಜೋಡಿಸಲು ಬಯಸಿರುವವರನ್ನು ಕಂಡುಹಿಡಿಯಲು ಪ್ರತಿಷ್ಠಾನದ ಕೆಲವು ಸದಸ್ಯರು ವಿವಿಧ ರಾಜ್ಯಗಳಿಗೆ ಪ್ರಯಾಣಿಸಲಿದ್ದಾರೆಂದು ಕೇಂದ್ರ ಸಚಿವರು ತಿಳಿಸಿದರು.
ಬೇಗಂ ಹಝ್ರತ್ ರಾಷ್ಟ್ರೀಯ ಬಾಲಕಿಯರ ವಿದ್ಯಾರ್ಥಿವೇತನ ಯೋಜನೆ ಹಾಗೂ ಗರೀಬ್ ನವಾಝ್ ಪರಿಣತಿ ಅಭಿವೃದ್ಧಿ ಯೋಜನೆಯ ಫಲಾನುಭವಿಗಳ ಸಂಖ್ಯೆಯನ್ನು ಹೆಚ್ಚಿಸಲು ಪ್ರತಿಷ್ಠಾನ ಬಯಸಿದೆ ಎಂದರು. ಬೇಗಂ ಹಝ್ರತ್ ಯೋಜನೆಯಿಂದ ಈವರೆಗೆ 20 ಸಾವಿರ ವಿದ್ಯಾರ್ಥಿನಿಯರು ಪ್ರಯೋಜನ ಪಡೆದಿದ್ದು, ಹಾಲಿ ಹಣಕಾಸು ವರ್ಷದ ಅಂತ್ಯದೊಳಗೆ ಈ ಸಂಖ್ಯೆಯನ್ನು 45 ಸಾವಿರಕ್ಕೆ ವಿಸ್ತರಿಸಲಾಗುವುದು. ಮುಂದಿನ ವರ್ಷ ಐದು ಲಕ್ಷ ವಿದ್ಯಾರ್ಥಿಗಳಿಗೆ ಇದರ ಪ್ರಯೋಜನವನ್ನು ಒದಗಿಸುವ ಗುರಿ ಹೊಂದಲಾಗಿದೆಯೆಂದು ನಖ್ವಿ ಮಾಹಿತಿ ನೀಡಿದರು.