ಬಿಎಸ್‌ಎಫ್ ಯೋಧರಿಂದ ಬುಡಕಟ್ಟು ಜನರ ಹತ್ಯೆಗೆ ಪ್ರತಿಭಟನೆ
ತ್ರಿಪುರ ಬಂದ್; ಜನಜೀವನ ಅಸ್ತವ್ಯಸ್ತ
ಅಗರ್ತಲಾ,ಮಾ.18: ಬಿಎಸ್‌ಎಫ್ ಯೋಧರ ಗುಂಡೇಟಿಗೆ ಮೂವರು ಬುಡಕಟ್ಟು ಜನರು ಬಲಿಯಾದ ಘಟನೆಯನ್ನು ಪ್ರತಿಭಟಿಸಿದ ತ್ರಿಪುರದ ಆಡಳಿತಾರೂಢ ಸಿಪಿಎಂ ಶನಿವಾರ ಮುಂಜಾನೆಯಿಂದ ಸಂಜೆಯವರೆಗೆ ಬಂದ್‌ಗೆ ಕರೆ ನೀಡಿದ್ದು, ರಾಜ್ಯದ ಹಲವೆಡೆ ಜನಜೀವನ ಅಸ್ತವ್ಯಸ್ತ ಗೊಂಡಿದೆ.
ಕೆಲವು ಬಿಎಸ್‌ಎಫ್ ಯೋಧರು ಬುಡಕಟ್ಟು ಮಹಿಳೆಯ ಮೇಲೆ ಅತ್ಯಾಚಾರವೆಸಗಲು ಯತ್ನಿಸಿದ್ದರೆಂದು ಆರೋಪಿಸಿ, ದುರ್ಗಮ ಹಳ್ಳಿಯಾದ ಚಿತಬಾರಿಯ ಗ್ರಾಮಸ್ಥರು, ಭದ್ರತಾಪಡೆಗಳ ಜೊತೆ ಘರ್ಷಣೆಗಿಳಿಗಿದ್ದರು. ಈ ಸಂದರ್ಭದಲ್ಲಿ ಬಿಎಸ್‌ಎಫ್ ಯೋಧರು ನಡೆಸಿದ ಗುಂಡಿನ ದಾಳಿಯಿಂದ ಓರ್ವ ಮಹಿಳೆ ಸೇರಿದಂತೆ ಮೂವರು ಮೃತಪಟ್ಟಿದ್ದು, ಇನ್ನಿಬ್ಬರು ಗಾಯಗೊಂಡಿದ್ದಾರೆ.
ಈ ಮಧ್ಯೆ ತನ್ನ ಯೋಧರು ಬುಡಕಟ್ಟು ಮಹಿಳೆಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದರೆಂಬ ಆರೋಪವನ್ನು ಗಡಿಭದ್ರತಾ ಪಡೆ ಶನಿವಾರ ನಿರಾಕರಿಸಿದೆ. ತಮ್ಮ ಮೇಲೆ ದಾಳಿಗೆ ಯತ್ನಿಸಿದ ಅಕ್ರಮ ದನಸಾಗಾಟಗಾರರ ಮೇಲೆ ತನ್ನ ಯೋಧರು ಗುಂಡುಹಾರಿಸಿದ್ದಾರೆಂದು ಅದು ಸ್ಪಷ್ಟೀಕರಣ ನೀಡಿದೆ.
ಬಿಎಸ್‌ಎಫ್ ಯೋಧರಿಂದ ಬುಡಕಟ್ಟು ಜನರ ಹತ್ಯೆಯನ್ನು ಪ್ರತಿಭಟಿಸಿ ಸಿಪಿಎಂ ಇಂದು ನೀಡಿದ ಬಂದ್ ಕರೆಯ ಹಿನ್ನೆಲೆಯಲ್ಲಿ ರಾಜಧಾನಿ ಅಗರ್ತಲಾ ಸೇರಿದಂತೆ ರಾಜ್ಯದ ಬಹುತೇಕ ಕಡೆಗಳಲ್ಲಿ ಅಂಗಡಿ, ಮುಂಗಟ್ಟೆಗಳು ಮುಚ್ಚಿದ್ದವು ಹಾಗೂ ವಾಹನಗಳು ಬೀದಿಗಿಳಿಯಲಿಲ್ಲವೆಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಸರಕಾರಿ ಕಚೇರಿಗಳು, ಬ್ಯಾಂಕುಗಳಲ್ಲಿ ವಿರಳ ಹಾಜರಾತಿಯಿತ್ತು. ಶಾಲಾ,ಕಾಲೇಜುಗಳು ಕೂಡಾ ಮುಚ್ಚಿದ್ದವು ಎಂದು ಅವರು ಹೇಳಿದ್ದಾರೆ.
ರಬ್ಬರ್ ತೋಟವೊಂದರಲ್ಲಿ ದುಡಿಯುತ್ತಿರುವ ಮಹಿಳೆ ಸಂಜೆ ಚಿತ್‌ಬಾರಿಯಲ್ಲಿರುವ ತನ್ನ ಮನೆಗೆ ವಾಪಸಾಗುತ್ತಿದ್ದಾಗ, ಬಿಎಸ್‌ಎಫ್ ಯೋಧರು ಆಕೆಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದರೆಂದು ಗ್ರಾಮಸ್ಥರು ಎಫ್‌ಐಆರ್‌ನಲ್ಲಿ ದೂರಿದ್ದಾರೆಂದು ಪೊಲೀಸ್ ಅಧೀಕ್ಷಕ ಭಾನುಪಾದ ಚಕ್ರವರ್ತಿ ತಿಳಿಸಿದ್ದಾರೆ. ಆಕೆ ಜೋರಾಗಿ ಕಿರುಚಿದಾಗ ಗ್ರಾಮಸ್ಥರು ಸ್ಥಳಕ್ಕೆ ಧಾವಿಸಿ, ಯೋಧರೊಂದಿಗೆ ಘರ್ಷಣೆಗಿಳಿದರು. ಈ ಸಂದರ್ಭದಲ್ಲಿ ಬಿಎಸ್‌ಎಫ್ ಯೋಧರು ಗುಂಡುಹಾರಿಸಿದಾಗ ಮಹಿಳೆ ಹಾಗೂ ಇಬ್ಬರು ಗ್ರಾಮಸ್ಥರು ಸ್ಥಳದಲ್ಲೇ ಮೃತಪಟ್ಟರು ಹಾಗೂ ಇನ್ನಿಬ್ಬರು ಗಾಯಗೊಂಡಿದ್ದಾರೆ.







