ಡ್ರೋನ್‌ನಲ್ಲಿ ಮೋಡ ಬಿತ್ತನೆ; ಇಂದು ಪ್ರಾತ್ಯಕ್ಷಿಕೆ
ಉಡುಪಿ, ಮಾ.18: ಮಾನವನ ನೆರವಿಲ್ಲದೆ ಹಾಗೂ ಮ್ಯಾನುವೆಲ್ ರಿಮೋಟ್ ಕಂಟ್ರೋಲ್ ಇಲ್ಲದೆ, ಸ್ವಯಂ ಚಾಲಿತ ಡ್ರೋನ್ ಮೂಲಕ ಹಾರಾಟ ನಡೆಸಿ ಮೋಡ ಬಿತ್ತನೆ ಕಾರ್ಯ ನಡೆಸುವ ತಂತ್ರಜ್ಞಾನವನ್ನು ತಾವು ಅಭಿವೃದ್ಧಿಪಡಿಸಿದ್ದು, ಇದರಿಂದ ತೀರಾ ಕಡಿಮೆ ಖರ್ಚಿನಲ್ಲಿ ಮೋಡದ ಬಿತ್ತನೆ ಮಾಡಲು ಸಾಧ್ಯವಿದೆ ಎಂದು ಮಾಡೆಲ್ ಒಂದನ್ನು ತಯಾರಿಸಿರುವ ಕರುಣಾಕರ ನಾಯಕ್ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.
ಈ ಡ್ರೋನ್ನ ಪ್ರಾತ್ಯಕ್ಷಿಕೆಯು ಮಾ.19ರಂದು ಸಂಜೆ 5:30ಕ್ಕೆ ಅಜ್ಜರಕಾಡು ಮೈದಾನದಲ್ಲಿ ಸಚಿವ ಪ್ರಮೋದ್ ಮಧ್ವರಾಜ್ ಎದುರು ನಡೆಯಲಿದೆ. ಸರಕಾರದಿಂದ ಸೂಕ್ತ ನೆರವು ಹಾಗೂ ಪ್ರೋತ್ಸಾಹ ದೊರೆತರೆ ಹಾಗೂ ಸರಕಾರಿ ಸಂಸ್ಥೆಗಳಿಂದ ಬೇಕಾದ ಎಲ್ಲ ಪರವಾನಿಗೆ, ಅನುಮೋದನೆಗಳು ದೊರೆತರೆ ಮುಂದೆ ಅದನ್ನು ಪ್ರಾಯೋಗಿಕವಾಗಿ ಅಭಿವೃದ್ಧಿಪಡಿಸುವುದಾಗಿ ತಿಳಿಸಿದ ಅವರು, ತನ್ನ ಯೋಜನೆ ಕಾರ್ಯಗತಗೊಳ್ಳಲು ಕನಿಷ್ಠ 1 ಕೋಟಿ ರೂ. ಅಗತ್ಯವಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಇಸ್ರೋದ ನಿವೃತ್ತ ವಿಜ್ಞಾನಿ ಜನಾರ್ದನ ರಾವ್, ಆ್ಯರೋನಾಟಿಕಲ್ ಇಂಜಿನಿಯರ್ ಪ್ರಜ್ವಲ್ ಹೆಗ್ಡೆ ಬೈಲೂರು ಹಾಗೂ ದಿವಾಕರ್ ಕಾರ್ಕಳ ಉಪಸ್ಥಿತರಿದ್ದರು.





