ಹಗಲು ಕೂಲಿ, ಸಂಜೆ ಹೆರಿಗೆ!
ಅಸಂಘಟಿತ ಕಾರ್ಮಿಕರಿಗೆ ಸಿಗುತ್ತಿಲ್ಲ ಸರ್ಕಾರಿ ಸೌಲಭ್ಯ

ಹೊಸದಿಲ್ಲಿ, ಮಾ.19: ಲೋಕಸಭೆ ಕಳೆದ ವಾರ ಹೆರಿಗೆ ಪ್ರಯೋಜನ (ತಿದ್ದುಪಡಿ) ಮಸೂದೆ- 2016ಕ್ಕೆ ಅನುಮೋದನೆ ನೀಡಿದೆ. ಇದರ ಅನ್ವಯ ಸಂಘಟಿತ ವಲಯದ ಮಹಿಳಾ ಉದ್ಯೋಗಿಗಳು 12 ವಾರದ ಬದಲಾಗಿ 26 ವಾರಗಳ ಹೆರಿಗೆ ರಜೆ ಪಡೆಯಲಿದ್ದಾರೆ. 18 ಲಕ್ಷ ಮಹಿಳೆಯರು ಇದರ ಪ್ರಯೋಜನ ಪಡೆಯಲಿದ್ದಾರೆ. ಆದರೆ ನಿರ್ಮಾಣ ಕಾಮಗಾರಿಯಂಥ ಕಠಿಣ ಶ್ರಮದ ಕೆಲಸಗಳಲ್ಲಿ ತೊಡಗಿರುವ ಸಂಘಟಿತ ವಲಯವನ್ನು ಈ ಕಾಯ್ದೆ ಸಂಪೂರ್ಣವಾಗಿ ನಿರ್ಲಕ್ಷಿಸಿದೆ.
ಪೂರ್ವ ದಿಲ್ಲಿಯ ವಿನೋದ್ ನಗರದಲ್ಲಿ ಕಟ್ಟಡ ನಿರ್ಮಾಣ ಕೆಲಸದಲ್ಲಿ ತೊಡಗಿರುವ ಲಕ್ಷ್ಮಿಯ ಕತೆ ಕೇಳಿ. ದಿನಕ್ಕೆ 200 ರೂಪಾಯಿ ವೇತನ. ಈಕೆ ಸುಮಾರು 10 ತಿಂಗಳ ಹಿಂದೆ ಕೃಷ್ಣ ಎಂಬ ಗಂಡುಮಗುವಿಗೆ ಜನ್ಮಕೊಟ್ಟಿದ್ದಾಳೆ. ಈಕೆಗೆ 3 ಹಾಗೂ 5 ವರ್ಷದ ಇತರ ಇಬ್ಬರು ಮಕ್ಕಳಿದ್ದಾರೆ. "ಹೆರಿಗೆಗಿಂತ ಕೆಲ ದಿನಗಳ ಮುನ್ನ ಕೂಡಾ ಕೂಲಿ ಕೆಲಸ ಮಾಡುತ್ತಿದ್ದೆ. ಹೆರಿಗೆ ಬಳಿಕ ಒಂದು ತಿಂಗಳಲ್ಲಿ ಮತ್ತೆ ಕೂಲಿಗೆ ಬರುತ್ತಿದ್ದೆ. ನಮ್ಮಲ್ಲೇ ಕೆಲ ಮಹಿಳೆಯರು ಬೆಳಗ್ಗೆ ಕೂಡಾ ಕೂಲಿ ಕೆಲಸ ಮಾಡಿ, ಸಂಜೆ ಹೆರಿಗೆಯಾದ ನಿದರ್ಶನವೂ ಇದೆ" ಎಂದು ಅವರು ಹೇಳುತ್ತಾರೆ.
"ಗರ್ಭಿಣಿಯಾಗಿದ್ದ ಅವಧಿಯಲ್ಲಿ ಬೇಗ ದಣಿಯುತ್ತೇವೆ. ಆದರೆ ಕೆಲಸ ಮಾಡದೇ ಪರ್ಯಾಯವೇ ಇಲ್ಲ. ತಿಂಗಳು ತುಂಬುತ್ತಿದ್ದಂತೆ ಭಾರ ಎತ್ತುವುದು ಕಷ್ಟವಾಗುತ್ತದೆ. ಆದರೆ ನಮ್ಮನ್ನು ನೇಮಿಸಿಕೊಂಡವರು, ಗುಡಿಸುವುದು, ಸ್ವಚ್ಛತೆಯಂಥ ಲಘು ಕೆಲಸಗಳನ್ನು ನೀಡುವ ಕರುಣೆಯನ್ನೂ ತೋರುವುದಿಲ್ಲ" ಎಂದು ಕಷ್ಟ ತೋಡಿಕೊಳ್ಳುತ್ತಾರೆ.
"ಇನ್ನೂ ಕಷ್ಟದ ಕೆಲಸವೆಂದರೆ ಇಂಥ ಕಾರ್ಮಿಕರು ಕೆಲಸ ಮಾಡುವ ಪಕ್ಕದಲ್ಲೇ ನೆರಳಲ್ಲಿ ಹಸುಗೂಸುಗಳನ್ನು ಮಲಗಿಸಿ, ಹಸಿವಿನಿಂದ ಮಗು ಅತ್ತಾಗ ಅಲ್ಲೇ ಮೊಲೆಯುಣಿಸಿ ಮತ್ತೆ ಕೆಲಸಕ್ಕೆ ಸೇರಿಕೊಳ್ಳುವ ಅಮಾನವೀಯ ಸ್ಥಿತಿ ಇದೆ. ಆದರೆ ಈಗ ಸಮಸ್ಯೆಗೆ ಪರಿಹಾರ ಸಿಕ್ಕಿದೆ. ಐದು ವರ್ಷದ ಊರ್ಮಿಳಾ ಹಾಗೂ ಮೂರು ವರ್ಷದ ದಶರಥ್, ಪುಟ್ಟ ಮಗು ಕೃಷ್ಣನ ಬಗ್ಗೆ ಕಾಳಜಿ ವಹಿಸುತ್ತಾರೆ" ಎಂದು ಹೇಳಿದರು.
ವಾರಕ್ಕೊಂದು ದಿನ ಬಿಡುವೂ ಇಲ್ಲದಂತೆ ಬಾಣಂತಿಯರ ಕೆಲಸ ಸಾಗುತ್ತದೆ. ಇಂಥ ಅನಕ್ಷರಸ್ಥ ಮಹಿಳೆಯರಿಗೆ ಹೆರಿಗೆ ರಜೆಯಂಥ ಸೌಲಭ್ಯಗಳು, ಚಿಕ್ಕಮಕ್ಕಳ ಆರೈಕೆಗೆ ಸೂಕ್ತ ವಾತಾವರಣ ಕಲ್ಪಿಸಬೇಕು ಎನ್ನುವುದು ಅವರ ಬೇಡಿಕೆ.