ಧೋನಿಯ ಮೂರು ಮೊಬೈಲ್ ಎಗರಿಸಿದ ಕಳ್ಳರು!

ಹೊಸದಿಲ್ಲಿ,ಮಾ.19: ಇತ್ತೀಚೆಗೆ ನಗರದ ಹೊಟೇಲ್‌ನಲ್ಲಿ ಸಂಭವಿಸಿದ ಅಗ್ನಿ ದುರಂತದ ವೇಳೆ ಭಾರತದ ಮಾಜಿ ಕ್ರಿಕೆಟ್ ನಾಯಕ ಎಂ.ಎಸ್. ಧೋನಿಗೆ ಸೇರಿದ ಬೆಲೆ ಬಾಳುವ ಮೂರು ಮೊಬೈಲ್ ಫೋನ್‌ಗಳು ಕಳವಾಗಿವೆ. ಈ ಬಗ್ಗೆ ಕ್ರಿಕೆಟಿಗ ಧೋನಿ ದಿಲ್ಲಿ ಪೊಲೀಸರಿಗೆ ದೂರು ನೀಡಿದ್ದು ಎಫ್‌ಐಆರ್ ದಾಖಲಿಸಲಾಗಿದೆ.
ವಿಜಯ್ ಹಝಾರೆ ಟ್ರೋಫಿ ಏಕದಿನ ಟೂರ್ನಮೆಂಟ್‌ನಲ್ಲಿ ಪಾಲ್ಗೊಳ್ಳಲು ಜಾರ್ಖಂಡ್ ಹಾಗೂ ತಮಿಳುನಾಡು ಆಟಗಾರರು ವಾಸ್ತವ್ಯ ಹೂಡಿದ್ದ ಪಂಚತಾರಾ ಹೊಟೇಲ್ ದ್ವಾರಕಾದಲ್ಲಿ ಶುಕ್ರವಾರ ಬೆಳಗ್ಗೆ ಅಗ್ನಿ ಆಕಸ್ಮಿಕ ಸಂಭವಿಸಿತ್ತು. ಧೋನಿ, ವಿಕೆಟ್‌ಕೀಪರ್-ಬ್ಯಾಟ್ಸ್‌ಮನ್ ದಿನೇಶ್ ಕಾರ್ತಿಕ್ ಸಹಿತ ಜಾರ್ಖಂಡ್ ಹಾಗೂ ತಮಿಳುನಾಡು ಆಟಗಾರರು ಭಾರೀ ಅಪಾಯದಿಂದ ಪಾರಾಗಿದ್ದರು.
ಹೊಟೇಲ್‌ನಲ್ಲಿ ದಟ್ಟ ಹೊಗೆ ಕಾಣಿಸಿಕೊಂಡಾಗ ಧೋನಿ ಬೆಳಗ್ಗಿನ ಉಪಹಾರ ಸೇವಿಸುತ್ತಿದ್ದರು. ಹೊಗೆ ಕಾಣಿಸಿಕೊಂಡ ತಕ್ಷಣ ಧೋನಿ ಸಹಿತ ಹೊಟೇಲ್‌ನಲ್ಲಿದ್ದ ಆಟಗಾರರು ಹಾಗೂ ಅತಿಥಿಗಳನ್ನು ತೆರವುಗೊಳಿಸಲಾಗಿತ್ತು. ಈ ವೇಳೆ ಕಳ್ಳರು ತಮ್ಮ ಕೈಚಳಕ ತೋರಿ ಧೋನಿಯ ಮೂರು ಮೊಬೈಲ್ ಫೋನ್‌ಗಳನ್ನು ಎಗರಿಸಿದ್ದಾರೆ ಎನ್ನಲಾಗಿದೆ.
ಕಳವಾಗಿದ್ದ ಧೋನಿಯ ಮೊಬೈಲ್‌ನಲ್ಲಿ ಟೀಮ್ ಇಂಡಿಯಾ ಹಾಗೂ ಬಿಸಿಸಿಐಗೆ ಸಂಬಂಧಿಸಿದ ಪ್ರಮುಖ ಮಾಹಿತಿಗಳು ಇದ್ದವು ಎನ್ನಲಾಗಿದೆ. ಬೆಂಕಿ ಅವಘಡದಲ್ಲಿ ಉಭಯ ತಂಡಗಳ ಆಟಗಾರರ ಕಿಟ್‌ಗಳು ಸುಟ್ಟು ಭಸ್ಮವಾಗಿದ್ದವು.
ಹೊಟೇಲ್‌ನ ತಳಮಾಳಿಗೆಯಲ್ಲಿ ಬೆಳಗ್ಗೆ 6 ಗಂಟೆಗೆ ಕಾಣಿಸಿಕೊಂಡ ಬೆಂಕಿಯನ್ನು 30 ಅಗ್ನಿ ಶಾಮಕ ದಳಗಳು ಎರಡು ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ತಹಬಂದಿಗೆ ತರುವಲ್ಲಿ ಯಶಸ್ವಿಯಾಗಿದ್ದವು.







