ಭ್ರಷ್ಟಾಚಾರಕ್ಕೆ ಕಡಿವಾಣ: ಪಂಜಾಬ್‌ನ ನೂತನ ಲೋಕೋಪಯೋಗಿ ಸಚಿವೆ ರಝಿಯಾ ಸುಲ್ತಾನಾ

ಪಂಜಾಬ್, ಮಾ.19: ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲು ಶ್ರಮಿಸುವುದಾಗಿ ಪಂಜಾಬ್‌ನ ನೂತನ ಲೋಕೋಪಯೋಗಿ ಹಾಗೂ ಸಾಮಾಜಿಕ ಭದ್ರತೆ ಮತ್ತು ಮಹಿಳಾ-ಮಕ್ಕಳ ಅಭಿವೃದ್ಧಿ ಸಚಿವೆ ರಝಿಯಾ ಸುಲ್ತಾನಾ ಹೇಳಿದ್ದಾರೆ.
ಅಮರೀಂದರ್ ಸಿಂಗ್ ನೇತೃತ್ವದ ಪಂಜಾಬ್‌ನ ನೂತನ ಕಾಂಗ್ರೆಸ್ ಸರಕಾರದಲ್ಲಿ ಸಚಿವೆಯಾಗಿ ಶುಕ್ರವಾರ ಅಧಿಕಾರ ಸ್ವೀಕರಿಸಿದ ಬಳಿಕ ಅವರು ಮಾತನಾಡುತ್ತಿದ್ದರು.
ಪಂಜಾಬ್‌ನ ನೂತನ ರಾಜ್ಯ ಸಚಿವ ಸಂಪುಟದಲ್ಲಿ 10 ಸಚಿವರುಗಳಿದ್ದು, ಈ ಪೈಕಿ ಇಬ್ಬರು ಮಹಿಳೆಯರಾಗಿದ್ದಾರೆ. ಈ ಪೈಕಿ ಪ್ರಸ್ತುತ ಪಂಜಾಬ್ ವಿಧಾನಸಭೆಗೆ ಏಕೈಕ ಶಾಸಕಿಯಾಗಿ ಆಯ್ಕೆಯಾಗಿರುವ ರಝಿಯಾ ಸುಲ್ತಾನಾ ಕೂಡಾ ಸೇರಿದ್ದಾರೆ. ಅವರು ಲೋಕೋಪಯೋಗಿ ಇಲಾಖೆ, ಸಾಮಾಜಿಕ ಭದ್ರತೆ ಮತ್ತು ಮಹಿಳಾ ಹಾಗು ಮಕ್ಕಳ ಅಭಿವೃದ್ಧಿ (ಸ್ವತಂತ್ರ ಖಾತೆ) ಸಚಿವೆಯಾಗಿದ್ದರೆ, ಇನ್ನೋರ್ವ ಶಾಸಕಿ ಅರುಣಾ ಚೌಧರಿ ಉನ್ನತ ಮತ್ತು ಶಾಲಾ ಶಿಕ್ಷಣ((ಸ್ವತಂತ್ರ ಖಾತೆ) ಸಚಿವೆಯಾಗಿದ್ದಾರೆ.
ಹಿರಿಯ ಪೊಲೀಸ್ ಅಧಿಕಾರಿಯ ಪತ್ನಿ ಹಾಗೂ ಮೂರನೇ ಬಾರಿಗೆ ಶಾಸಕಿಯಾಗಿ ಆಯ್ಕೆಯಾಗಿರುವ ರಝಿಯಾ ಸುಲ್ತಾನಾ117 ಸದಸ್ಯ ಬಲದ ಪಂಜಾಬ್ ವಿಧಾನಸಭೆಯಲ್ಲಿ ಏಕೈಕ ಮುಸ್ಲಿಂ ಸದಸ್ಯೆಯಾಗಿದ್ದಾರೆ.
ಇತ್ತೀಚಿಗೆ ನಡೆದ ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ ಮಲೇರ್‌ಕೋಟಲಾ ಕ್ಷೇತ್ರದಲ್ಲಿ ರಝಿಯಾ ತನ್ನ ನಿಕಟ ಪ್ರತಿಸ್ಪರ್ಧಿ ಅಕಾಲಿ ದಳದ ಮುಹಮ್ಮದ್ ಉವೈಸ್ ಅವರನ್ನು 12,000ಕ್ಕೂ ಅಧಿಕ ಮತಗಳ ಅಂತರದಿಂದ ಸೋಲಿಸಿದ್ದಾರೆ. ಆಪ್ ಕಣಕ್ಕಳಿಸಿದ್ದ ಏಕೈಕ ಮುಸ್ಲಿಂ ಅಭ್ಯರ್ಥಿ ಮುಹಮ್ಮದ್ ಅರ್ಷದ್ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ.
ರಝಿಯಾ ಐದು ಶೌರ್ಯ ಪ್ರಶಸ್ತಿಗಳನ್ನು ಪಡೆದಿರುವ ಪಂಜಾಬ್ ಡಿಜಿಪಿ ಮುಹಮ್ಮದ್ ಮುಸ್ತಫಾ ಅವರ ಪತ್ನಿಯಾಗಿದ್ದಾರೆ. 2002 ಮತ್ತು 2007ರಲ್ಲಿ ಮಲೇರ್‌ಕೋಟಲಾ ಕ್ಷೇತ್ರದಿಂದ ಗೆದ್ದಿದ್ದ ರಝಿಯಾ 2012ರ ಚುನಾವಣೆಯಲ್ಲಿ ಪರಾಭವಗೊಂಡಿದ್ದರು.