ಚೆನ್ನೈ ಜಲ ಪ್ರಳಯದಲ್ಲಿ ನೂರಾರು ಜನರ ಪ್ರಾಣ ಉಳಿಸಿದ ಐಟಿ ವಿದ್ಯಾರ್ಥಿ ಆತ್ಮಹತ್ಯೆ

ನಾಸಿಕ್, ಮಾ.19: ಮೊಬೈಲ್ ಆ್ಯಪ್ ‘ಹೆಲ್ಪಿಂಗ್ ಹ್ಯಾಂಡ್ಸ್’ನ್ನು ಕಂಡುಹಿಡಿದು 2015ರ ಚೆನ್ನೈ ಜಲಪ್ರಳಯದಲ್ಲಿ ಹಲವು ಜೀವಗಳನ್ನು ರಕ್ಷಿಸಿದ್ದ ಇಂಜಿನಿಯರಿಂಗ್ ವಿದ್ಯಾರ್ಥಿ ಕೌಶಲ್ ಬಾಗ್ ನಾಸಿಕ್‌ನಲ್ಲಿರುವ ತಮ್ಮ ನಿವಾಸದಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ತಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಆತ್ಮಹತ್ಯೆ ಪತ್ರವನ್ನು ವಿಡಿಯೋ ಮಾಡಿರುವ ಬಾಗ್ ಬುಧವಾರ ತಡರಾತ್ರಿ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ದ್ವಿತೀಯ ವರ್ಷದ ಮಾಹಿತಿ ತಂತ್ರಜ್ಞಾನ(ಐಟಿ) ವಿದ್ಯಾರ್ಥಿ ಕೌಶಲ್ ಬಾಗ್ ಅಭಿವೃದ್ಧಿ ಪಡಿಸಿದ ಹೆಲ್ಪಿಂಗ್ ಹ್ಯಾಂಡ್ ಆ್ಯಪ್ 2015ರಲ್ಲಿ ಚೆನ್ನೈ ಜಲಪ್ರಳಯದಲ್ಲಿ ನೂರಾರು ಜೀವಗಳನ್ನು ರಕ್ಷಿಸಲು ನೆರವಾಗುವ ಮೂಲಕ ಜನಪ್ರಿಯತೆ ಪಡೆದಿತ್ತು.
ಬಾಗ್ ಕಂಡುಹಿಡಿದ ಹೆಲ್ಪಿಂಗ್ ಹ್ಯಾಂಡ್ ಆ್ಯಪ್ ಉಚಿತವಾಗಿದ್ದು, 2015ರಲ್ಲಿ ಚೆನ್ನೈನಲ್ಲಿ ಜಲಪ್ರಳಯ ಸಂಭವಿಸಿದಾಗ ಸುಮಾರು 2 ಕೋಟಿಗೂ ಅಧಿಕ ಜನರು ಈ ಆ್ಯಪ್‌ನ್ನು ಡೌನ್‌ಲೋಡ್ ಮಾಡಿಕೊಂಡಿದ್ದರು.
ಜಲಪ್ರಳಯದ ವೇಳೆ ಜನರು ಸಿಲುಕಿಹಾಕಿದ್ದ ಸ್ಥಳವನ್ನು ಪತ್ತೆ ಹಚ್ಚಿದ್ದ ಬಾಗ್ ಘಟನಾ ಸ್ಥಳದಲ್ಲಿ ಕಾರ್ಯನಿರತ ಎನ್‌ಜಿಒಗಳಿಗೆ ಮಾಹಿತಿ ನೀಡಿದ್ದರು. ಬಾಗ್ ಪ್ರಯತ್ನಕ್ಕೆ ದೇಶ-ವಿದೇಶದೆಲ್ಲೆಡೆ ಶ್ಲಾಘನೆ ವ್ಯಕ್ತವಾಗಿತ್ತು.
ಬಾಗ್ ಅಭಿವೃದ್ಧಿಪಡಿಸಿದ್ದ ಆ್ಯಪ್‌ನ್ನು ನಾಸಿಕ್ ಹಾಗೂ ಉಜ್ಜೈನ್ ಕುಂಭಮೇಳ ಹಾಗೂ 2016ರ ನವೆಂಬರ್‌ನಲ್ಲಿ ಕರ್ನಾಟಕದ ಧರ್ಮಸ್ಥಳದಲ್ಲಿ ನಡೆದ ಲಕ್ಷ ದೀಪೋತ್ಸವದಲ್ಲಿ ನಾಪತ್ತೆಯಾಗಿದ್ದ ಜನರನ್ನು ಪತ್ತೆಹಚ್ಚಲು ಬಳಸಲಾಗಿತ್ತು.
‘‘ಬಾಗ್ ಶವದ ಬಳಿ ಆತ್ಮಹತ್ಯೆ ಪತ್ರ ಪತ್ತೆಯಾಗಿರಲಿಲ್ಲ. ಅವರ ಸ್ಮಾರ್ಟ್‌ಫೋನ್‌ನಲ್ಲಿ ರೆಕಾರ್ಡ್ ಆಗಿರುವ ವಿಡಿಯೋ ಕ್ಲಿಪ್‌ಗಳು ಪತ್ತೆಯಾಗಿವೆ. ವಿಡಿಯೋದಲ್ಲಿ ತನ್ನ ಸಾವಿಗೆ ತಾನೇ ಕಾರಣ. ಕುಟುಂಬ ಸದಸ್ಯರು ಹಾಗೂ ಸ್ನೇಹಿತರು ನನಗೆ ಕಿರುಕುಳ ನೀಡಿಲ್ಲ ಎಂದು ಬಾಗ್ ಹೇಳಿದ್ದಾರೆ’’ ಎಂದು ಪೊಲೀಸ್ ಕಮಿಶನರ್ ರವೀಂದ್ರ ಕುಮಾರ್ ತಿಳಿಸಿದ್ದಾರೆ.