ಉತ್ತರ ಪ್ರದೇಶದ ನೂತನ ಮುಖ್ಯಮಂತ್ರಿಯಾಗಿ ಯೋಗಿ ಆದಿತ್ಯನಾಥ ಪ್ರಮಾಣ ವಚನ ಸ್ವೀಕಾರ

ಲಕ್ನೋ,ಮಾ.19: ಐದು ಬಾರಿಯ ಸಂಸದ ಹಾಗೂ ಕಟ್ಟರ್ ಹಿಂದುತ್ವವಾದಿ ಯೋಗಿ ಆದಿತ್ಯನಾಥ ಅವರು ರವಿವಾರ ಮಧ್ಯಾಹ್ನ ಉತ್ತರ ಪ್ರದೇಶದ 21ನೇ ಹಾಗೂ ಬಿಜೆಪಿಯ ನಾಲ್ಕನೇ ಮುಖ್ಯಮಂತ್ರಿಯಾಗಿ ಇಲ್ಲಿ ಅಧಿಕಾರ ಸ್ವೀಕರಿಸಿದರು. ಇಬ್ಬರು ಉಪ ಮುಖ್ಯಮಂತ್ರಿಗಳು ಸೇರಿದಂತೆ 49 ಸಚಿವರೂ ಇದೇ ವೇಳೆ ಪ್ರಮಾಣ ವಚನ ಕೈಗೊಂಡರು. ಪ್ರಧಾನಿ ನರೇಂದ್ರ ಮೋದಿ,ಹಿರಿಯ ಪ್ರತಿಪಕ್ಷ ನಾಯಕರು ಮತ್ತು ಸಾಧು-ಸಂತರು ಹಾಗೂ ಸನ್ಯಾಸಿನಿಯರ ಗಡಣವೇ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಸಾಕ್ಷಿಯಾಗಿದ್ದರು.
ಉ.ಪ್ರದೇಶ ಬಿಜೆಪಿ ಘಟಕದ ಅಧ್ಯಕ್ಷ ಕೇಶವ ಪ್ರಸಾದ ವೌರ್ಯ ಮತ್ತು ಲಕ್ನೋ ಮಹಾನಗರ ಪಾಲಿಕೆ ಮೇಯರ್ ದಿನೇಶ ಶರ್ಮಾಅವರು ನೂತನ ಸರಕಾರದಲ್ಲಿ ಉಪ ಮುಖ್ಯಮಂತ್ರಿಗಳಾಗಿದ್ದಾರೆ.
ಇಲ್ಲಿಯ ಕಾನ್ಶಿರಾಮ ಸ್ಮತಿ ಉಪವನದಲ್ಲಿ ನಡೆದ ಸಮಾರಂಭದಲ್ಲಿ ರಾಜ್ಯಪಾಲ ರಾಮ ನಾಯ್ಕಿ ಅವರು ಆದಿತ್ಯನಾಥ (44) ಮತ್ತು ಅವರ ಸಂಪುಟ ಸದಸ್ಯರಿಗೆ ಪ್ರಮಾಣ ವಚನಗಳನ್ನು ಬೋಧಿಸಿದರು.
ಪ್ರಮಾಣ ವಚನ ಸ್ವೀಕರಿಸಿದವರ ಪೈಕಿ 22 ಜನರು ಸಂಪುಟ ದರ್ಜೆಯನ್ನು ಹೊಂದಿದ್ದರೆ ಕ್ರಿಕೆಟಿಗ ಪರಿವರ್ತಿತ ಬಿಜೆಪಿ ರಾಜಕಾರಣಿ ಮೊಹ್ಸಿನ್ ರಝಾ ಅವರು ಸಂಪುಟದಲ್ಲಿ ಏಕಮೇವ ಮುಸ್ಲಿಂ ಪ್ರತಿನಿಧಿಯಾಗಿದ್ದಾರೆ. ಸಂಪುಟವು ಆರು ಮಹಿಳಾ ಸಚಿವರನ್ನೂ ಒಳಗೊಂಡಿದೆ.
ಕುತೂಹಲದ ವಿಷಯವೆಂದರೆ ಮುಖ್ಯಮಂತ್ರಿ ಮತ್ತು ಇಬ್ಬರು ಉಪಮುಖ್ಯಮಂತ್ರಿ ಗಳೂ ಶಾಸಕರಲ್ಲ.
ಗೋರಖಪುರದಿಂದ ಐದು ಬಾರಿ ಸಂಸದರಾಗಿರುವ, ಆಡಳಿತಾತ್ಮಕವಾಗಿ ಅನನುಭವಿ ಯಾಗಿರುವ ಆದಿತ್ಯನಾಥ ಅವರು ಶನಿವಾರ ನಡೆದ ನೂತನ ಶಾಸಕರ ಸಭೆಯಲ್ಲಿ ಬಿಜೆಪಿ ಶಾಸಕಾಂಗ ಪಕ್ಷದ ನಾಯಕರಾಗಿ ಸರ್ವಾನುಮತದಿಮದ ಆಯ್ಕೆಯಾಗಿದ್ದು ಹಲವರನ್ನು ಅಚ್ಚರಿಯಲ್ಲಿ ಕೆಡವಿತ್ತು. ಇದರಲ್ಲಿ ಆರೆಸ್ಸೆಸ್ ಕೈವಾಡವಿದೆ ಎಂಬ ಮಾತುಗಳೂ ಕೇಳಿ ಬಂದಿದ್ದವು.
ಬಿಜೆಪಿಯ ಹಿರಿಯ ನಾಯಕರಾದ ಅಮಿತ್ ಶಾ, ಎಲ್.ಕೆ.ಆಡ್ವಾಣಿ,ರಾಜನಾಥ ಸಿಂಗ್, ವೆಂಕಯ್ಯ ನಾಯ್ಡು, ಮುರಳಿ ಮನೋಹರ ಜೋಶಿ ಮತ್ತು ನಿತಿನ್ ಗಡ್ಕರಿ, ನಿರ್ಗಮಿಸುತ್ತಿರುವ ಮುಖ್ಯಮಂತ್ರಿ ಅಖಿಲೇಶ್ ಯಾದವ, ಅವರ ತಂದೆ ಹಾಗೂ ಎಸ್‌ಪಿ ಸ್ಥಾಪಕ ಮುಲಾಯಂ ಸಿಂಗ್ ಯಾದವ, ಹೆಚ್ಚಿನ ಬಿಜೆಪಿ ಮುಖ್ಯಮಂತ್ರಿಗಳು ಸೇರಿದಂತೆ ಹಲವರು ಗಣಮಾನ್ಯರು ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಉಪಸ್ಥಿತರಿದ್ದರು. ಸಮಾರಂಭದಲ್ಲಿ ಭಾಗವಹಿಸಲೆಂದೇ ವಿವಿಧ ಸಾಧುಗಳು,ಸನ್ಯಾಸಿಗಳು ಮತ್ತು ಸನ್ಯಾಸಿನಿಯರು ರವಿವಾರ ಬೆಳಿಗ್ಗೆ ಡಬಲ್ ಡೆಕ್ಕರ್ ಬೋಯಿಂಗ್ 747 ವಿಮಾನದಲಿ ಲಕ್ನೋಕ್ಕೆ ಆಗಮಿಸಿದ್ದರು.







