ಶಾಲಾ ಶುಲ್ಕ ಪಾವತಿಸಿಲ್ಲ ಎಂದು 19 ಮಕ್ಕಳನ್ನು ಅಕ್ರಮವಾಗಿ ಕೋಣೆಯಲ್ಲಿ ಕೂಡಿ ಹಾಕಿದರು!

ಹೈದರಾಬಾದ್,ಮಾ.19: ಸಕಾಲಕ್ಕೆ ಶಾಲಾ ಶುಲ್ಕ ಪಾವತಿಸದ್ದಕ್ಕಾಗಿ 19 ಮಕ್ಕಳನ್ನು ಕೋಣೆಯೊಂದರಲ್ಲಿ ಎರಡು ಗಂಟೆಗಳ ಕಾಲ ಅಕ್ರಮ ಬಂಧನದಲ್ಲಿರಿಸಿದ ಘಟನೆ ಇಲ್ಲಿಯ ಹಯಾತ್‌ನಗರದ ಸರಿತಾ ವಿದ್ಯಾನಿಕೇತನದಲ್ಲಿ ನಡೆದಿದೆ. ಅಲ್ಲದೇ ಈ ಮಕ್ಕಳು ಶನಿವಾರ ಆರಂಭಗೊಂಡ ತಮ್ಮ ವಾರ್ಷಿಕ ಪರೀಕ್ಷೆಗೆ ಹಾಜರಾಗದಂತೆ ತಡೆ ಹಿಡಿಯಲಾಗಿತ್ತು.
ಅಕ್ರಮ ಬಂಧನದಲ್ಲಿರಿಸಲಾಗಿದ್ದ ವಿದ್ಯಾರ್ಥಿನಿಯೋರ್ವಳು ತನ್ನ ಪುತ್ರನ ಶುಲ್ಕವನ್ನು ಕಟ್ಟಲು ಶಾಲೆಗೆ ಬಂದಿದ್ದ ಮಹಿಳೆಯೋರ್ವರ ಮೊಬೈಲ್‌ನ್ನು ಕಿಟಕಿಯ ನೂಲಕ ಪಡೆದುಕೊಂಡು ತನ್ನ ತಂದೆಗೆ ಕರೆ ಮಾಡಿದ್ದಳು. ಅವರು ಪೋಲೀಸರು,ಮಾನವ ಹಕ್ಕು ಕಾರ್ಯಕರ್ತರು ಮತ್ತು ಮಾಧ್ಯಮಗಳಿಗೆ ಮಾಹಿತಿ ನೀಡಿದ ನಂತರ ಈ ದೌರ್ಜನ್ಯ ಬೆಳಕಿಗೆ ಬಂದಿದೆ.
ತಕ್ಷಣ ಶಾಲೆಗೆ ಧಾವಿಸಿದ ಪೊಲೀಸರು ಅಕ್ರಮವಾಗಿ ಬಂಧನದಲ್ಲಿರಿಸಿದ್ದ ಮಕ್ಕಳನ್ನು ವಿಮೋಚನೆಗೊಳಿಸಿ ಅವರು ಪರೀಕ್ಷೆಗೆ ಹಾಜರಾಗುವಂತೆ ಮಾಡಿದ್ದಾರೆ.
ಮಕ್ಕಳ ಮೇಲೆ ದೌರ್ಜನ್ಯವೆಸಗಿದ ಶಾಲಾ ಅಧಿಕಾರಿಗಳ ವಿರುದ್ಧ ಕ್ರಮವನ್ನು ಕೈಗೊಳ್ಳುವಂತೆ ಮಾನವ ಹಕ್ಕುಗಳ ಕಾರ್ಯಕರ್ತರು ಆಗ್ರಹಿಸಿದ್ದಾರೆ.
ಶಾಲಾಡಳಿತದ ವಿರುದ್ಧ ಬಾಲ ನ್ಯಾಯ ಕಾಯ್ದೆಯಡಿ ಪ್ರಕರಣವನ್ನು ದಾಖಲಿಸಿಕೊಂಡಿರುವ ಹಯಾತ್‌ನಗರ ಪೊಲೀಸರು ತನಿಖೆಯನ್ನು ನಡೆಸುತ್ತಿದ್ದಾರೆ.





