ಪೂಜಾರ ದ್ವಿಶತಕ, ಸಹಾ ಶತಕ: ಆಸೀಸ್ ವಿರುದ್ಧ ಭಾರತ ಮೇಲುಗೈ

ರಾಂಚಿ, ಮಾ.19: ಚೇತೇಶ್ವರ ಪೂಜಾರ ದ್ವಿಶತಕ ಹಾಗೂ ವೃದ್ಧಿಮಾನ್ ಸಹಾ ಶತಕದ ನೆರವಿನಿಂದ ಭಾರತ ತಂಡ ಇಲ್ಲಿ ನಡೆಯುತ್ತಿರುವ ಮೂರನೆ ಟೆಸ್ಟ್‌ನಲ್ಲಿ ಆಸ್ಟ್ರೇಲಿಯ ವಿರುದ್ಧ ಮೇಲುಗೈ ಸಾಧಿಸಿದೆ.
6 ವಿಕೆಟ್‌ಗಳ ನಷ್ಟಕ್ಕೆ 360 ರನ್‌ನಿಂದ ನಾಲ್ಕನೆ ದಿನವಾದ ರವಿವಾರ ಮೊದಲ ಇನಿಂಗ್ಸ್ ಮುಂದುವರಿಸಿದ ಭಾರತ 194 ಓವರ್‌ಗಳಲ್ಲಿ 7 ವಿಕೆಟ್‌ಗಳ ನಷ್ಟಕ್ಕೆ 532 ರನ್ ಗಳಿಸಿದೆ.
ಪೂಜಾರ 3ನೆ ಬಾರಿ ದ್ವಿಶತಕ ಬಾರಿಸಿ ಗಮನ ಸೆಳೆದರು. 525 ಎಸೆತಗಳನ್ನು ಎದುರಿಸಿದ ಪೂಜಾರ 21 ಬೌಂಡರಿಗಳ ನೆರವಿನಿಂದ 202 ರನ್ ಗಳಿಸಿ ಸ್ಪಿನ್ನರ್ ಲಿಯೊನ್‌ಗೆ ವಿಕೆಟ್ ಒಪ್ಪಿಸಿದರು. ಪೂಜಾರ ಎರಡನೆ ಬಾರಿ ಆಸೀಸ್‌ನ ವಿರುದ್ಧ ದ್ವಿಶತಕ ಬಾರಿಸಿದ್ದಾರೆ. ಸಹಾ ಅವರೊಂದಿಗೆ 7ನೆ ವಿಕೆಟ್‌ಗೆ 199 ರನ್ ಜೊತೆಯಾಟ ನಡೆಸಿದ ಪೂಜಾರ ಭಾರತದ ಮುನ್ನಡೆಯನ್ನು 76 ರನ್‌ಗೆ ವಿಸ್ತರಿಸಿದರು.
ಟೆಸ್ಟ್ ಇನಿಂಗ್ಸ್‌ನಲ್ಲಿ 500ಕ್ಕೂ ಅಧಿಕ ಎಸೆತಗಳನ್ನು ಎದುರಿಸಿದ ಪೂಜಾರ 2004ರಲ್ಲಿ ರಾವಲ್ಪಿಂಡಿಯಲ್ಲಿ ಪಾಕಿಸ್ತಾನದ ವಿರುದ್ಧ 495 ಎಸೆತ ಎದುರಿಸಿದ್ದ ರಾಹುಲ್ ದ್ರಾವಿಡ್ ದಾಖಲೆಯನ್ನು ಮುರಿದರು.
219 ಎಸೆತಗಳಲ್ಲಿ 7 ಬೌಂಡರಿ, 1 ಸಿಕ್ಸರ್‌ಗಳ ಸಹಿತ ಅಜೇಯ 107 ರನ್ ಗಳಿಸಿದ ಸಹಾ ತಮ್ಮ ಹೋರಾಟವನ್ನು ಮುಂದುವರಿಸಿದ್ದಾರೆ.





