‘ದಲಿತ್ ವರ್ಲ್ಡ್’ ವೆಬ್‌ಸೈಟ್ ಲೋಕಾರ್ಪಣೆ

ಉಡುಪಿ, ಮಾ.19: ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಉಡುಪಿ ಜಿಲ್ಲಾ ಶಾಖೆಯ ವತಿಯಿಂದ ಆರಂಭಿಸಿರುವ ‘ದಲಿತ್ ವರ್ಲ್ಡ್’ ವೆಬ್‌ಸೈಟ್‌ಗೆ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ರವಿವಾರ ಉಡುಪಿ ಬ್ರಹ್ಮಗಿರಿಯ ಲಯನ್ಸ್ ಭವನದಲ್ಲಿ ಚಾಲನೆ ನೀಡಿದರು.
ಅಂಬೇಡ್ಕರ್ ಕೇವಲ ದಲಿತರಿಗೆ ಮಾತ್ರ ಸೀಮಿತರಾದ ನಾಯಕರಲ್ಲ. ಈಆಒಎ ಕಾನೂನು ಮಂತ್ರಿಯಾಗಿದ್ದಾಗ ಕಾರ್ಮಿಕರಿಗೆ ಶಕ್ತಿ ತುಂಬಿದ ಮತ್ತು ಮಹಿಳೆ ಯರ ಪರವಾದ ಹಿಂದು ಕೋಡ್ ಬಿಲ್ ಜಾರಿಯಾಗದ ಕಾರಣಕ್ಕೆ ತನ್ನ ಸ್ಥಾನವನ್ನೇ ತ್ಯಜಿಸಿದ ಮಹಾನ್ ನಾಯಕ. ಇವರು ದಲಿತರ ಪರ ಮಾತ್ರವಲ್ಲದೆ ಎಲ್ಲ ಸಮುದಾಯದ ಶೋಷಿತವರ್ಗದ ಪರ ಧ್ವನಿ ಎತ್ತಿದ ಚೇತನ ಎಂದು ಸಚಿವರು ನುಡಿದರು.
ಹಿರಿಯ ಚಿಂತಕ ಜಿ.ರಾಜ್‌ಶೇಖರ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಪ್ರಾಸ್ತಾವಿಕವಾಗಿ ಮಾತನಾಡಿದ ದಲಿತ ಹೋರಾಟಗಾರ ಜಯನ್ ಮಲ್ಪೆ, ಕರ್ನಾಟಕ ರಾಜ್ಯದಲ್ಲೆ ಪ್ರಥಮ ಎನ್ನಬಹುದಾದ ಈ ದಲಿತ್ ವರ್ಲ್ಡ್ ವೆಬ್‌ಸೈಟ್ ಮೂಲಕ ದಲಿತ ಯುವಕ, ಯುವತಿಯರನ್ನು ಅಂಬೇಡ್ಕರ್ ಚಿಂತನೆಗೆ ಒಳಡಿಸುವ ಮುಖ್ಯ ಉದ್ದೇಶದಿಂದ ಆರಂಭಿಸಲಾಗಿದೆ. ನಗರಸಭೆ ದಲಿತರಿಗೆ ಮೀಸಲಿರಿಸಿರುವ ಹಣವನ್ನು ಇದಕ್ಕೆ ಬಳಕೆ ಮಾಡಿದ್ದೇವೆಯೇ ಹೊರತು ನಯಾ ಪೈಸೆ ದುರ್ಬಳಕೆ ಮಾಡಿಲ್ಲ ಎಂದು ಸ್ಪಷ್ಟ ಪಡಿಸಿದರು.
ಮುಖ್ಯ ಅತಿಥಿಗಳಾಗಿ ಉಡುಪಿ ನಗರಸಭೆ ಅಧ್ಯಕ್ಷೆ ಮೀನಾಕ್ಷಿ ಮಾಧವ, ಉಪಾಧ್ಯಕ್ಷೆ ಸಂಧ್ಯಾ ತಿಲಕ್‌ರಾಜ್, ಮಾಜಿ ಅಧ್ಯಕ್ಷರಾದ ಯುವರಾಜ್, ದಿನಕರ್ ಶೆಟ್ಟಿ ಹೆರ್ಗ, ಸಾಮಾಜಿಕ ಹೋರಾಟಗಾರ ಶಿವಸುಂದರ್, ಚಿಂತಕ ಕೆ.ಫಣಿರಾಜ್, ಮೊಗವೀರ ಯುವ ಸಂಘಟನೆಯ ಸ್ಥಾಪಕಾಧ್ಯಕ್ಷ ಸತೀಶ್ ಅಮೀನ್ ಪಡುಕರೆ, ಉದ್ಯಮಿ ದಿನೇಶ್ ಪುತ್ರನ್, ದಲಿತ ನಾಯಕರಾದ ಗಣೇಶ್ ನೆರ್ಗಿ, ಸುಂದರ ಕಪ್ಪೆಟ್ಟು, ಧರ್ಮಗುರು ರೆ.ಫಾ.ವಿಲಿಯಂ ಮಾರ್ಟಿಸ್ ಉಪಸ್ಥಿತರಿದ್ದರು.
ಜಯನ್ ಮಲ್ಪೆ ಸ್ವಾಗತಿಸಿದರು. ದಸಂಸ ಮುಖಂಡ ಮಂಜುನಾಥ್ ಗಿಳಿಯಾರ್ ಕಾರ್ಯಕ್ರಮ ನಿರೂಪಿಸಿದರು.







