ವಿಮಾನ ಪ್ರಯಾಣ ದರಗಳ ಮೇಲೆ ಮಿತಿ ಹೇರಿಕೆ:ಕೇಂದ್ರಕ್ಕೆ ಸಂಸದೀಯ ಸಮಿತಿಯ ಸೂಚನೆ

ಹೊಸದಿಲ್ಲಿ,ಮಾ.19: ವಿಮಾನ ಪ್ರಯಾಣ ದರಗಳ ಮೇಲೆ ಮಿತಿ ಹೇರುವುದನ್ನು ಪರಿಶೀಲಿಸುವಂತೆ ಮತ್ತು ಕೊಲ್ಲಿ ವಿಭಾಗದಲ್ಲಿ ದುಬಾರಿ ದರಗಳನ್ನು ವಸೂಲು ಮಾಡುವುದನ್ನು ನಿಯಂತ್ರಿಸುವಂತೆ ಸಾರಿಗೆ,ಪ್ರವಾಸೋದ್ಯಮ ಮತ್ತು ಸಂಸ್ಕೃತಿ ಕುರಿತ ಸಂಸದೀಯ ಸ್ಥಾಯಿ ಸಮಿತಿಯು ಸರಕಾರಕ್ಕೆ ಸೂಚಿಸಿದೆ.
ವಿಮಾನ ಯಾನ ಸಂಸ್ಥೆಗಳು, ವಿಶೇಷವಾಗಿ ಹಬ್ಬಗಳ ಋತುಗಳಲ್ಲಿ ದುಬಾರಿ ದರಗಳನ್ನು ವಿಧಿಸುತ್ತಿರುವ ಬಗ್ಗೆ ಕಳವಳಗಳ ನಡುವೆಯೇ ಸಮಿತಿಯ ಈ ಸೂಚನೆ ಹೊರಬಿದ್ದಿದೆ.
ನಾವು ಅಭಿವೃದ್ಧಿಶೀಲ ರಾಷ್ಟ್ರವಾಗಿದ್ದೇವೆ. ಶ್ರೀಮಂತ ರಾಷ್ಟ್ರಗಳಲ್ಲಿ ಬೆಲೆ ನಿಗದಿಗೆ ಅನುಸರಿಸುವ ಹೆಚ್ಚಿನ ಸೂತ್ರಗಳು ಭಾರತೀಯರು ಮತ್ತು ಭಾರತೀಯ ಸ್ಥಿತಿಗತಿಗೆ ಸೂಕ್ತವಲ್ಲ ಎಂದು ಸಮಿತಿಯು ಕಳೆದ ವಾರ ಸಂಸತ್ತಿನಲ್ಲಿ ಮಂಡಿಸಿರುವ ನಾಗರಿಕ ವಾಯುಯಾನ ಸಚಿವಾಲಯದ ಅನುದಾನಗಳ ಬೇಡಿಕೆಗಳು (2017-18) ಕುರಿತ ತನ್ನ ವರದಿಯಲ್ಲಿ ಹೇಳಿದೆ.
ವಿಮಾನ ಪ್ರಯಾಣ ದರಗಳ ಮೇಲೆ ಮಿತಿ ವಿಧಿಸಬೇಕೆಂದು ಈ ಹಿಂದೆಯೂ ಬೇಡಿಕೆಗಳಿದ್ದವಾದರೂ, ವಿಮಾನಯಾನ ಟಿಕೆಟ್ ದರಗಳ ಮೇಲೆ ತನಗೆ ನಿಯಂತ್ರಣವಿಲ್ಲ ಮತ್ತು ಅದು ಬೇಡಿಕೆ ಹಾಗೂ ಪೂರೈಕೆಯ ಮಾರುಕಟ್ಟೆ ಶಕ್ತಿಗಳನ್ನು ಅವಲಂಬಿಸಿರುತ್ತದೆ ಎಂದು ಸಚಿವಾಲಯವು ಪ್ರತಿಪಾದಿಸಿತ್ತು.
ಕೊಲ್ಲಿ ವಿಭಾಗದಲ್ಲಿ ವಿಮಾನಯಾನಗಳಿಗೆ ದುಬಾರಿ ದರಗಳನ್ನು ವಿಧಿಸುತ್ತಿರುವುದನ್ನು ನಿಯಂತ್ರಿಸಲು ನಾಗರಿಕ ವಾಯುಯಾನ ಸಚಿವಾಲಯ ಮತ್ತು ನಾಗರಿಕ ವಾಯುಯಾನ ಮಹಾ ನಿರ್ದೇಶನಾಲಯ ಪರಿಣಾಮಕಾರಿ ಹಸ್ತಕ್ಷೇಪ ನಡೆಸಬೇಕು ಎಂದೂ ಸಮಿತಿಯು ಹೇಳಿದೆ.
ವಿದೇಶಿ ವಿಮಾನಯಾನ ಸಂಸ್ಥೆಗಳಿಗೆ ಹೋಲಿಸಿದರೆ ಕೇರಳದ ವಿಮಾನ ನಿಲ್ದಾಣಗಳಿಂದ ಕೊಲ್ಲಿ ರಾಷ್ಟ್ರಗಳಿಗೆ ಅತ್ಯಂತ ದುಬಾರಿ ಪ್ರಯಾಣ ದರಗಳನ್ನು ವಿಧಿಸಲಾಗುತ್ತಿದೆ ಎಂದು ಸಮಿತಿಯು ಬೆಟ್ಟು ಮಾಡಿದೆ.
ಕೊಲ್ಲಿ ರಾಷ್ಟ್ರಗಳಿಗೆ ವಿಮಾನಯಾನ ಸೌಲಭ್ಯಗಳನ್ನು ಬಳಸಿಕೊಳ್ಳುತ್ತಿರುವವರಲ್ಲಿ ಹೆಚ್ಚಿನವರು ವಲಸಿಗ ಕಾರ್ಮಿಕರಾಗಿದ್ದಾರೆ ಮತ್ತು ವಿಮಾನಯಾನ ಸಂಸ್ಥೆಗಳು ಅವರ ಅಸಹಾಯಕತೆಯನ್ನು ದುರುಪಯೋಗಿಸಿಕೊಳ್ಳಬಾರದು ಎಂದು ಸಮಿತಿಯು ತಿಳಿಸಿದೆ.