ದೇಶದ ಎಲ್ಲ ಬಿಕ್ಕಟ್ಟಿಗೆ ಪ್ರಭುತ್ವ ಸಮಾಜವಾದ ಪರಿಹಾರ: ಶಿವಸುಂದರ್

ಉಡುಪಿ, ಮಾ.19: ದೇಶದಲ್ಲಿನ ಕೃಷಿ, ಕೈಗಾರಿಕೆ ಸೇರಿದಂತೆ ಎಲ್ಲ ರೀತಿಯ ಬಿಕ್ಕಟ್ಟಿಗೆ ಅಂಬೇಡ್ಕರ್‌ರ ಪ್ರತಿಪಾದಿಸಿದ ಪ್ರಭುತ್ವ ಸಮಾಜವಾದವೇ ಪರಿಹಾರ ಎಂದು ಹೋರಾಟಗಾರ, ಲೇಖಕ ಶಿವಸುಂದರ್ ಅಭಿಪ್ರಾಯ ಪಟ್ಟಿದ್ದಾರೆ.
ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ಡಾ.ಬಿ.ಆರ್.ಅಂಬೇಡ್ಕರ್‌ರ 125ನೆ ಜಯಂತಿ ವರ್ಷಾಚರಣೆ ಪ್ರಯುಕ್ತ ಱಅಂಬೇಡ್ಕರ್ ಜ್ಞಾನ ದರ್ಶನ ಅಭಿಯಾನೞಅಂತಾರಾಷ್ಟ್ರೀಯ ಸಮ್ಮೇಳನದ ಅಂಗವಾಗಿ ಉತ್ತರ ಕನ್ನಡ, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಸಾಮಾಜಿಕ ಕಾರ್ಯಕರ್ತರಿಗೆ ಆದಿಉಡುಪಿ ಅಂಬೇಡ್ಕರ್ ಭವನದಲ್ಲಿ ರವಿವಾರ ನಡೆದ ವಿಭಾಗೀಯ ಮಟ್ಟದ ಕಾರ್ಯಾಗಾರದ ಗೋಷ್ಠಿಯಲ್ಲಿ ರೈತ ಕಾರ್ಮಿಕ ಚಳವಳಿ ಕುರಿತು ಅವರು ಮಾತನಾಡುತಿದ್ದರು.
ಬ್ರಾಹ್ಮಣವಾದ ಮತ್ತು ಬಂಡವಾಳಶಾಹಿ ವಾದವು ಅಂಬೇಡ್ಕರ್ ವಾದಿಗಳ ಬಹಳ ದೊಡ್ಡ ಶತ್ರು. ಬ್ರಾಹ್ಮಣ ಶಾಹಿಯು ಪ್ರಸ್ತುತ ಹೊಸ ವೇಷದಲ್ಲಿ ನಮಗೆ ಸಿಗಬೇಕಾದ ಎಲ್ಲವನ್ನು ಲೂಟಿ ಮಾಡುತ್ತಿದೆ. ಇಂದು ನಾವು ವಿಕೃತ, ಕ್ರೂರ ವಾದ ಬಂಡವಾಳಶಾಹಿ ಅಭಿವೃದ್ಧಿ ಮಾದರಿಯನ್ನು ನೋಡುವಂತಾಗಿದೆ ಎಂದು ಅವರು ಟೀಕಿಸಿದರು.
ಮೊದಲು ಪ್ರಭುತ್ವ ಸುಲಭ ದರದಲ್ಲಿ ನೀಡುತ್ತಿದ್ದ ವಿದ್ಯುತ್, ಬೀಜ, ಗೊಬ್ಬರ ಸೇರಿದಂತೆ ವಿವಿಧ ಹೂಡಿಕೆಗಳು, 1991ರ ನಂತರ ಉದಾರೀಕಣದ ಪ್ರಕ್ರಿಯೆಯಲ್ಲಿ ಲಾಭಕ್ಕಾಗಿ ಉತ್ಪಾದನೆ ಮಾಡುವ ಮಾರುಕಟ್ಟೆ ಎನಿಸಿ ಕೊಂಡಿತ್ತು. ಇದರಿಂದ ಕೃಷಿ ಹೂಡಿಕೆಯು ಸುಲಭ ದರದಲ್ಲಿ ಸಿಗದ ಕಾರಣ ರೈತರು ಸಾಲ ಮಾಡುವಂತಾಯಿತು. ಪ್ರಸ್ತುತ ಅಂತಾರಾಷ್ಟ್ರೀಯ ಮಾರುಕಟ್ಟೆ ಯೊಂದಿಗೆ ನಮ್ಮ ಕೃಷಿಕರ ಜೀವನ ಬೆಸೆದು ಕೊಂಡಿರುವುದು ಕೃಷಿ ಬಿಕ್ಕಟ್ಟಿನ ಪ್ರಧಾನ ಸ್ವರೂಪ ಆಗಿದೆ.
ಭಾರತದಲ್ಲಿ 45ಕೋಟಿ ಕೆಲಸ ಮಾಡುವಂತಹ ಯುವಕರಿದ್ದಾರೆ. ಪ್ರತಿ ವರ್ಷ 2.5ಕೋಟಿ ಜನ ಕೆಲಸ ಮಾಡುವಂತಹ ಯುವಕರ ಪಡೆಗೆ ಸೇರು ತ್ತಿದ್ದಾರೆ. ಆದರೆ ಕಳೆದ ವರ್ಷ ನಮ್ಮ ವ್ಯವಸ್ಥೆ ಸೃಷ್ಠಿಸಿರುವುದು ಕೇವಲ 1.5 ಲಕ್ಷ ಉದ್ಯೋಗ ಮಾತ್ರ. ಸಾರ್ವಜನಿಕ ವಲಯದ ಎಲ್ಲ ರೀತಿಯ ಹೂಡಿಕೆ ಯನ್ನು ಹಿಂದಕ್ಕೆ ತೆಗೆದುಕೊಳ್ಳಲಾಗುತ್ತಿದೆ. ಜಾಗತೀಕರಣದ ನಂತರ ಬಂಡವಾಳ ಮತ್ತು ಪ್ರಭುತ್ವವು ಜನರು, ಕಾರ್ಮಿಕರ ಕುರಿತ ತಮ್ಮ ಎಲ್ಲ ಜವಾಬ್ದಾರಿಯನ್ನು ಸಂವಿಧಾನ ಬದ್ಧವಾಗಿ ಹಿಂತೆಗೆದುಕೊಂಡಿದೆ ಎಂದರು.
ಈ ಕಾರಣದಿಂದ ಸಾರ್ವಜನಿಕ ಕ್ಷೇತ್ರದ ಸಂಘಟಿತ ಉದ್ಯೋಗದ ಪ್ರಮಾಣ ಕೇವಲ 2ಕೋಟಿ ಮತ್ತು ಖಾಸಗಿ ಕ್ಷೇತ್ರದ ಉದ್ಯೋಗ ಪ್ರಮಾಣ ಏಳು ಕೋಟಿ. ಉಳಿದ 42ಕೋಟಿಯಷ್ಟು ಉದ್ಯೋಗಗಳು ಯಾವುದೇ ಸಾಮಾಜಿಕ ಭದ್ರತೆಗಳಿಲ್ಲದ ಅಸಂಘಟಿತ ವಲಯದಲ್ಲಿ ನಿರ್ಮಾಣ ವಾಗುತ್ತದೆ. ಕಾರ್ಮಿಕರ ಈ ಎಲ್ಲ ಬಿಕ್ಕಟ್ಟಿಗೆ ನಮ್ಮ ದೇಶದ ಕೈಗಾರಿಕಾ ಅಭಿವೃದ್ಧಿ ಸ್ವರೂಪವೇ ಕಾರಣ ಎಂದು ಅವರು ತಿಳಿಸಿದರು.
ಇಂದಿನ ನಮ್ಮ ದೇಶದ ಅಭಿವೃದ್ಧಿಯ ಮಾದರಿಯಲ್ಲಿ ಕೃಷಿ, ಕೈಗಾರಿಕೆ, ಕೃಷಿಕೂಲಿ, ಸಣ್ಣ ರೈತರ, ಕಾರ್ಮಿಕರ ಬಿಕ್ಕಟ್ಟು ಅಡಗಿದೆ. ಈ ಅಭಿವೃದ್ಧಿ ಮಾದರಿಯೇ ನಮ್ಮ ದೇಶದ ಸಕಲ ಬಿಕ್ಕಟ್ಟಿಗೆ ಕಾರಣ. ಹಿಂದೆ ನಡೆಸುತ್ತಿದ್ದ ಮಿಕ್ಸೆಡ್ ಎಕಾನಮಿ ಇಂದು ಪಬ್ಲಿಕ್ ಪ್ರೈವೆಟ್ ಪಾಟ್ನರ್‌ಶಿಪ್ ಹೆಸರಿನಲ್ಲಿ ನಡೆಯುತ್ತಿದೆ. ಇದು ಸಾರ್ವಜನಿಕ ಸಂಪತ್ತನ್ನು ಖಾಸಗಿಯವರು ಕಬಳಿಸುವ ಆರ್ಥಿಕ ವಿಧಾನ ಎಂದು ಅವರು ದೂರಿದರು.
ಬೆಂಗಳೂರಿನ ಪತ್ರಕರ್ತ ಸುರೇಶ್ ಪಿ.ಬಿ. ಱಕರಾವಳಿಯ ಚಳವಳಿಗಳು, ಅಂಬೇಡ್ಕರ್ ಚಿಂತನೆಯಲ್ಲಿ ನಿಷ್ಕರ್ಷೆೞಕುರಿತು ಮಾತನಾಡಿ ಕರಾವಳಿ ಭಾಗದಲ್ಲಿ ಹಿಂದೆ ನಡೆಯುತ್ತಿದ್ದ ಶೋಷಣೆ, ದೌರ್ಜನ್ಯ, ದಬ್ಬಾಳಿಕೆಗಳು ಮರುಕಳಿಸದಂತೆ ಮಾಡಲು ನಾವು ನಮ್ಮ ಶಕ್ತಿಯನ್ನು ಮೀರಿ ದಲಿತ, ಅಂಬೇಡ್ಕರ್ ಚಳವಳಿ ಕಟ್ಟಲು ಮುಂದಾಗಬೇಕಾಗಿದೆ ಎಂದು ತಿಳಿಸಿದರು. ಅಧ್ಯಕ್ಷತೆ ಯನ್ನು ಉಡುಪಿ ಜಿಲ್ಲಾ ಬೌದ್ಧ ಮಹಾಸಭಾದ ಶಂಭು ಸುವರ್ಣ ವಹಿಸಿದ್ದರು.
ದಲಿತ ರೈತರ ಆತ್ಮಹತ್ಯೆ ಸರಣಿ:
2015-16ನೆ ಸಾಲಿನಲ್ಲಿ ರಾಜ್ಯದಲ್ಲಿ 1410 ರೈತರು ಆತ್ಮಹತ್ಯೆ ಮಾಡಿ ಕೊಂಡಿದ್ದಾರೆ. ಇದು 1996ರಿಂದ ದಾಖಲಾಗುತ್ತಿರುವ ಆತ್ಮಹತ್ಯೆ ಪ್ರಕರಣ ಗಳಲ್ಲಿ ಅತಿ ಹೆಚ್ಚು. ಇವರಲ್ಲಿ ಮೊಟ್ಟ ಮೊದಲ ಬಾರಿಗೆ 14 ಮಂದಿ ದಲಿತ ರೈತರು ಇದ್ದಾರೆ. ಹಿಂದೆ ಒಕ್ಕಲುತನ ಮಾಡುತ್ತಿದ್ದ ಹಿಂದುಳಿದವರ್ಗದ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದರೆ ಇಂದು ಹೊಸದಾಗಿ ಭೂಮಿ ಪಡೆದ ದಲಿತ ರೈತರು ಆತ್ಮಹತ್ಯೆ ಮಾಡಿಕೊಳ್ಳುವಂತಾಗಿದೆ. ಇದರ ಅರ್ಥ ಭೂಹೀನ ರೈತರಿಗೆ ಭೂಮಿ ಕೊಡುವುದು ಅವರನ್ನು ಆತ್ಮಹತ್ಯೆ ದೂಡಿದಂತೆ. ಇದು ಕೃಷಿ ಬಿಕ್ಕಟ್ಟಿನ ಕಣ್ಣಿಗೆ ಕಾಣುವ ಭೂಮಿಯ ಪ್ರಶ್ನೆ ಎಂದು ಶಿವಸುಂದರ್ ಹೇಳಿದರು.
ಭೂಮಿಯ ಹಂಚಿಕೆಯಲ್ಲ ರಾಷ್ಟ್ರೀಕರಣ:
ಆರ್ಥಿಕ ಪರಾವಲಂಬನೆಯು ನಮ್ಮ ರಾಜಕೀಯ ಸ್ವಾತಂತ್ರ ಕಸಿದುಕೊಳ್ಳುತ್ತದೆ. ಆದುದರಿಂದ ರಾಜಕೀಯ ಮಾತ್ರವಲ್ಲದೆ ಆರ್ಥಿಕ ಸಾಮಾಜಿಕ ಸ್ವಾತಂತ್ರ ಕೂಡ ಮುಖ್ಯ. ಸಾಮಾಜಿಕ, ಆರ್ಥಿಕ ಸಮಾನತೆಯನ್ನು ಸಾಧಿಸ ದಿದ್ದರೆ ಈ ರಾಜಕೀಯ ಸ್ವಾತಂತ್ರಕ್ಕೆ ಅರ್ಥ ಇಲ್ಲ ಎಂಬುದಾಗಿ ಅಂಬೇಡ್ಕರ್ ಪ್ರತಿಪಾದಿಸಿದ್ದರು.
ಸಮಾನತೆ ಹಾಗೂ ಸ್ವಾತಂತ್ರ ಒಟ್ಟಿಗೆ ಸಿಗಬೇಕಾದರೆ ಸಮಾನತೆಯನ್ನು ಮೂಲಭೂತ ಹಕ್ಕುಗಳನ್ನಾಗಿ ಮಾಡಬೇಕು ಎಂಬುದು ಅಂಬೇಡ್ಕರ್ ವಾದ. ಭೂಮಿಯು ಕೇವಲ ಆರ್ಥಿಕ ಪ್ರಶ್ನೆ ಮಾತ್ರವಲ್ಲ ಈ ದೇಶದ ರಾಜಕೀಯ, ಸಾಮಾಜಿಕ, ಸಾಂಸ್ಕೃತಿಕ ಪ್ರಶ್ನೆಯೂ ಹೌದು. ಆದುದರಿಂದ ಭೂಮಿ ಹಂಚಿಕೆಯ ಬದಲು ರಾಷ್ಟ್ರೀಕರಣ ಆಗಬೇಕೆಂದು ಅಂಬೇಡ್ಕರ್ ಪ್ರತಿಪಾದಿಸಿ ದ್ದರು. ಇದೇ ನಮ್ಮ ದೇಶದ ಎಲ್ಲ ಬಿಕ್ಕಟ್ಟಿಗೆ ಪರಿಹಾರ ಎಂದು ಶಿವಸುಂದರ್ ಅಭಿಪ್ರಾಯ ಪಟ್ಟರು.







