ಪೋಷಕರಿಗೆ ಆದಾಯ ತೆರಿಗೆ ವಿನಾಯಿತಿ ಬೇಡ: ಶಿಫಾರಸು
ಅಪ್ರಾಪ್ತರ ಹೆಸರಲ್ಲಿ ಇಟ್ಟಿರುವ ಠೇವಣಿ
ಹೊಸದಿಲ್ಲಿ, ಮಾ.19: ವಿಚ್ಛೇದನ ಒಪ್ಪಂದ ಪ್ರಕರಣದಲ್ಲಿ ಒಬ್ಬಂಟಿಯಾಗಿರುವ ಪೋಷಕರ ಖಾತೆಯಲ್ಲಿ ಅಪ್ರಾಪ್ತ ಮಕ್ಕಳ ಹೆಸರಲ್ಲಿ ನಿರ್ವಹಣಾ ಮೊತ್ತವಾಗಿ ಇಡಲಾಗಿರುವ ಮೊತ್ತದ ಮೇಲೆ ಆದಾಯ ತೆರಿಗೆ ವಿನಾಯಿತಿ ಬೇಡವೆಂದು ಶಿಫಾರಸು ಮಾಡಲು ಕಾನೂನು ಆಯೋಗ ನಿರ್ಧರಿಸಿದೆ ಎಂದು ತಿಳಿದುಬಂದಿದೆ. ಆಯೋಗವು ಸರಕಾರ ಹಾಗೂ ಪಂಜಾಬ್ ಮತ್ತು ಹರ್ಯಾಣ ಹೈಕೋರ್ಟ್‌ಗೆ ಸೋಮವಾರ ವರದಿ ಸಲ್ಲಿಸಲಿದೆ. ಹಾಲಿ ಆದಾಯ ತೆರಿಗೆ ನಿಯಮದಂತೆ ಅಪ್ರಾಪ್ತ ವಯಸ್ಕರ ಹೆಸರಲ್ಲಿ ನಿರ್ವಹಣಾ ಮೊತ್ತವಾಗಿ ಇಟ್ಟಿರುವ ಠೇವಣಿ ಮೇಲಿನ ಬಡ್ಡಿಯನ್ನು ಪೋಷಕರ ಆದಾಯದೊಂದಿಗೆ ಸೇರಿಸಲಾಗುತ್ತಿದೆ. ಒಂದು ವೇಳೆ ಇಂತಹ ಪೋಷಕರಿಗೆ ವಿನಾಯಿತಿ ನೀಡಿದರೆ ಇದೇ ರೀತಿಯ ಬೇಡಿಕೆ ಇನ್ನೂ ಕೆಲವು ಕ್ಷೇತ್ರಗಳಿಂದ ಮುಂದಾಗಬಹುದು ಎಂದು ಆಯೋಗ ಅಭಿಪ್ರಾಯಪಟ್ಟಿದೆ ಎಂದು ಮೂಲಗಳು ತಿಳಿಸಿವೆ.
ಈ ವಿಷಯದ ಬಗ್ಗೆ ಅಧ್ಯಯನ ನಡೆಸಿ , 1961ರ ಆದಾಯ ತೆರಿಗೆ ಕಾಯ್ದೆಗೆ ತಿದ್ದುಪಡಿಯ ಅಗತ್ಯವಿದೆಯೇ ಎಂಬ ಬಗ್ಗೆ ವರದಿ ಸಲ್ಲಿಸುವಂತೆ ಕಾನೂನು ಆಯೋಗಕ್ಕೆ ಪಂಜಾಬ್ ಮತ್ತು ಹರ್ಯಾಣ ಹೈಕೋರ್ಟ್ ಸೂಚಿಸಿತ್ತು.
ಅಪ್ರಾಪ್ತ ಮಕ್ಕಳ ಹೆಸರಲ್ಲಿ ಪೋಷಕರು ಯಾವುದಾದರೂ ವ್ಯವಹಾರ ಆರಂಭಿಸಿ ಅದರಿಂದ ದೊರಕುವ ಆದಾಯವನ್ನು ಆ ಮಕ್ಕಳಿಗೆ ನಿರ್ವಹಣಾ ಮೊತ್ತವಾಗಿ ನೀಡುವುದು ಅಥವಾ ವಿಚ್ಛೇದನ ಪಡೆದ ಪೋಷಕರು ಮತ್ತೊಮ್ಮೆ ವಿವಾಹವಾದಾಗ ಈ ಅಪ್ರಾಪ್ತ ಮಕ್ಕಳಿಗೆ ಕೆಲವೊಂದು ಉಡುಗೊರೆ ನೀಡುವುದು- ಹೀಗೆ ನಿರ್ವಹಣಾ ಮೊತ್ತ ವಿವಿಧ ರೂಪದಲ್ಲಿರುತ್ತವೆ ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ. ಈ ಹಿನ್ನೆಲೆಯಲ್ಲಿ , 1961ರ ಆದಾಯ ತೆರಿಗೆ ಕಾಯ್ದೆಗೆ ಸೂಕ್ತ ತಿದ್ದುಪಡಿ ಅಗತ್ಯವಿದೆಯೇ ಎಂದು ಕೇಳಿ ಕಾನೂನು ಆಯೋಗ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಪರಿಗಣನೆಗಾಗಿ ಕಳುಹಿಸಿಕೊಡಲಾಗಿತ್ತು. ಆಯೋಗದ ಶಿಫಾರಸುಗಳನ್ನು ಸರಕಾರ ಅಥವಾ ಕೋರ್ಟ್ ಒಪ್ಪಲೇಬೇಕು ಎಂಬ ಬದ್ದತೆ ಏನಿಲ್ಲ.