ಮಲ್ಲಳ್ಳಿ ಜಲಪಾತದಲ್ಲಿ ಯುವಕನ ಸಾವು

ಮಡಿಕೇರಿ ಮಾ.19 : ಪ್ರವಾಸಿ ತಾಣ ಮಲ್ಲಳ್ಳಿ ಜಲಪಾತದಲ್ಲಿ ಮುಳುಗಿ ಯುವಕನೋರ್ವ ಸಾವನ್ನಪ್ಪಿರುವ ಘಟನೆ ರವಿವಾರ ಮಧ್ಯಾಹ್ನ ನಡೆದಿದೆ.
ಮೂಲತಃ ಬೆಂಗಳೂರಿನ ಮಹಾಲಕ್ಷ್ಮೀ ಲೇಔಟ್ ನಿವಾಸಿಯಾಗಿದ್ದು, ಪ್ರಸ್ತುತ ಮಡಿಕೇರಿಯ ಟಿ.ಜಾನ್ ಎಸ್ಟೇಟ್‌ನಲ್ಲಿ ಅಕೌಂಟೆಂಟ್ ಆಗಿ ಕೆಲಸ ಮಾಡುತ್ತಿದ್ದ ನವೀನ್(25) ಎಂಬಾತನೇ ಜಲಪಾತದಲ್ಲಿ ಮುಳುಗಿ ಮೃತಪಟ್ಟ ದುರ್ದೈವಿಯಾಗಿದ್ದಾನೆ. ಸಂಜೆ ಮೃತದೇಹವನ್ನು ನೀರಿನಿಂದ ಹೊರತೆಗೆಯಲಾಗಿದೆ.
ಅದೇ ಎಸ್ಟೇಟ್‌ನಲ್ಲಿ ಚಾಲಕನಾಗಿರುವ ವೆಂಕಟೇಶ್ ಎಂಬಾತನೊಂದಿಗೆ ಬೈಕ್‌ನಲ್ಲಿ ಇಂದು ಮಧ್ಯಾಹ್ನ ಮಲ್ಲಳ್ಳಿ ಜಲಪಾತಕ್ಕೆ ತೆರಳಿದ್ದಾರೆ. 12.30ರ ಸುಮಾರಿಗೆ ಈರ್ವರೂ ನೀರಿಗಿಳಿದಿದ್ದಾರೆ. ಈ ಸಂದರ್ಭ ನವೀನ್ ಅಪಾಯಕಾರಿ ಸ್ಥಳಕ್ಕೆ ತೆರಳಿದ್ದು, ಕ್ಷಣಮಾತ್ರದಲ್ಲಿ ನೀರಿನಲ್ಲಿ ಕಣ್ಮರೆಯಾಗಿದ್ದಾರೆ.
ತಕ್ಷಣ ಸ್ಥಳೀಯರಿಗೆ ವಿಷಯ ತಿಳಿಸಿದ್ದು, ನಂತರ ಸೋಮವಾರಪೇಟೆ ಪೊಲೀಸ್ ಠಾಣೆಗೆ ಮಾಹಿತಿ ನೀಡಲಾಗಿದೆ. ಸ್ಥಳಕ್ಕೆ ತೆರಳಿದ ಪೊಲೀಸರು ಸ್ಥಳೀಯರಾದ ವೆಂಕಟೇಶ್, ಉಲ್ಲಾಸ್ ಸೇರಿದಂತೆ ಗ್ರಾಮಸ್ಥರು ಹಾಗೂ ಸೋಮವಾರಪೇಟೆಯ ಆಟೋ ಚಾಲಕ ಹಸನಬ್ಬ, ಪ್ರಕಾಶ್,ಮೂರ್ತಿ ಅವರುಗಳ ಸಹಕಾರದಿಂದ ಮೃತದೇಹವನ್ನು ನೀರಿನಿಂದ ಹೊರತೆಗೆದು ಶವಾಗಾರಕ್ಕೆ ಸಾಗಿಸಿದರು.
ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.





