ವಿಟ್ಲ: ಯುವಕನ ಅಪಹರಣ

ಬಂಟ್ವಾಳ, ಮಾ. 19: ತಂಡವೊಂದು ಯುವಕನೋರ್ವನನ್ನು ಅಪಹರಿಸಿ ಬಂಧನದಲ್ಲಿರಿಸಿರುವ ಘಟನೆ ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯ ಕಂಬಳಬೆಟ್ಟು ಎಂಬಲ್ಲಿ ರವಿವಾರ ಸಂಜೆ ನಡೆದಿದೆ.
ಇಲ್ಲಿನ ಕಂಬಳಬೆಟ್ಟು ದರ್ಗಾ ಸಮೀಪದ ನಿವಾಸಿ ಮೋನು ಯಾನೆ ರಝಾಕ್(30)ಅಪಹರಣಗೊಂಡ ಯುವಕ. ವಿಟ್ಲ ಪೊಲೀಸ್ ಠಾಣೆಯಲ್ಲಿ ರೌಡಿಶೀಟರ್ ಹನೀಫ್ ಯಾನೆ ಜೋಗಿ ಹನೀಫ್ ಮತ್ತು ನಾಲ್ವರ ತಂಡ ಈಕೃತ್ಯ ಎಸಗಿದೆ ಎನ್ನಲಾಗಿದ್ದು ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಶುಕ್ರವಾರ ರಾತ್ರಿ ವಿಟ್ಲದ ಹೊಟೇಲ್ ಒಂದರ ಬಳಿ ಎರಡು ತಂಡಗಳ ನಡುವೆ ನಡೆದ ಹೊಡೆದಾಟದಲ್ಲಿ ಜೋಗಿ ಹನೀಫ್ ಮೇಲೆ ಹಲ್ಲೆ ನಡೆದಿದೆ. ಇದಕ್ಕೆ ಪ್ರತಿಕಾರವೆಂಬಂತೆ ಈ ಅಪಹರಣ ನಡೆದಿದೆ ಎಂದು ಶಂಕಿಸಲಾಗಿದೆ. ರಝಾಕ್ ತನ್ನ ಸ್ನೇಹಿತರೊಂದಿಗೆ ಬೈಕಿನಲ್ಲಿದ್ದ ಸಂದರ್ಭದಲ್ಲಿ ಕಾರಿನಲ್ಲಿ ಬಂದ ತಂಡ ರಝಾಕ್‌ನನ್ನು ಅಪಹರಿಸಿಕೊಂಡು ಪರಾರಿಯಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಬೈಕಿನಲ್ಲಿದ್ದ ಸ್ನೇಹಿತ ನೀಡಿದ ದೂರಿನಂತೆ ಪ್ರಕರಣ ದಾಖಲಿಸಲಾಗಿದೆ ಎಂದು ವಿಟ್ಲ ಠಾಣಾಧಿಕಾರಿ ನಾಗರಾಜ್ ತಿಳಿಸಿದ್ದಾರೆ. ಘಟನೆ ಮಾಹಿತಿ ತಿಳಿಯುತ್ತಿದ್ದಂತೆಯೇ ವಿಟ್ಲ ಪೊಲೀಸರು ಅಪಹರಣಕೀಡಾದ ರಝಾಕ್‌ನ ಪತ್ತೆ ಕಾರ್ಯಾಚರಣೆ ಬಿರುಸುಗೊಳಿಸಿದ್ದು, ಮಂಗಳೂರು ಆಸುಪಾಸಿನಲ್ಲಿ ತನಿಖೆ ಚುರುಕುಗೊಳಿಸಿದ್ದಾರೆ.
ರೌಡಿ ಶೀಟರ್ ಜೋಗಿ ಹನೀಫ್:
ರಝಾಕ್ ಅಪಹರಣ ಪ್ರಮುಖ ರೂವಾರಿ ಎನ್ನಲಾದ ಹನೀಫ್ ಯಾನೆ ಜೋಗಿ ಹನೀಫ್ ವಿರುದ್ಧ ವಿಟ್ಲ ಠಾಣೆ ಸಹಿತ ದ.ಕ. ಮತ್ತು ಕಾಸರಗೋಡು ಜಿಲ್ಲೆಯ ವಿವಿಧ ಪೊಲೀಸ್ ಠಾಣೆಯಲ್ಲಿ ಹಲವು ಪ್ರಕರಣಗಳು ದಾಖಲಾಗಿವೆ. ವಿಟ್ಲ ಪರಿಸರದಲ್ಲಿ ಗಾಂಜಾ ದಂಧೆಯಲ್ಲಿ ತೊಡಗಿರುವ ಈತ ಗಾಂಜಾ ಮಾರಾಟ ಹಾಗೂ ಸೇವನೆಯ ಆರೋಪದಲ್ಲಿ ಹಲವಾರು ಬಾರಿ ಪೊಲೀಸರಿಂದ ಬಂಧಿತನಾಗಿ ಜಾಮೀನಿನಲ್ಲಿ ಬಿಡುಗಡೆಗೊಂಡಿದ್ದಾನೆ.
ಈತನೊಂದಿಗೆ ಇನ್ನೂ ಹಲವಾರು ಮಂದಿ ತಂಡ ಕಟ್ಟಿ ಗಾಂಜಾ ದಂಧೆಯಲ್ಲಿ ತೊಡಗಿದ್ದು ಈ ತಂಡದಿಂದ ವಿಟ್ಲ ಪರಿಸರದಲ್ಲಿ ಪದೇ ಪದೇ ಅಶಾಂತಿ ಘಟನೆಗಳು ನಡೆಯುತ್ತಲೇ ಇರುತ್ತದೆ. ಆ ತಂಡದ ವಿರುದ್ಧ ಸೂಕ್ತ ಕಾನೂನು ಕ್ರಮ ಜರಗಿಸಬೇಕೆಂಬ ಆಗ್ರಹ ಇಲ್ಲಿನ ಜನರಿಂದ ಕೇಳಿ ಬರುತ್ತಿವೆ.







