ಭೂ ಅಕ್ರಮದಲ್ಲಿ ಎಸ್.ಎಂ.ಕೃಷ್ಣ ಅಳಿಯ ಭಾಗಿ: ಎಸ್.ಆರ್.ಹಿರೇಮಠ್ ಆರೋಪ

ಹುಬ್ಬಳ್ಳಿ, ಮಾ.19: ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅಳಿಯ ವಿ.ಜಿ.ಸಿದ್ದಾರ್ಥ ಭೂ ಅಕ್ರಮ ಪ್ರಕರಣದಲ್ಲಿ ಭಾಗಿಯಾಗಿದ್ದು, ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿದೆ ಎಂದು ಸಮಾಜ ಪರಿವರ್ತನಾ ವೇದಿಕೆ ಅಧ್ಯಕ್ಷ ಎಸ್.ಆರ್. ಹಿರೇಮಠ್ ತಿಳಿಸಿದ್ದಾರೆ.
ರವಿವಾರ ನಗರದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನಲ್ಲಿ ಎಸ್.ಎಂ.ಕೃಷ್ಣ ಅಳಿಯ ಸಿದ್ದಾರ್ಥ 180 ಎಕರೆ ಅರಣ್ಯ ಭೂಮಿಯನ್ನು ಕಬಳಿಸಿದ್ದಾರೆ. ಅಳಿಯನನ್ನು ರಕ್ಷಣೆ ಮಾಡಲು ಕೃಷ್ಣ ಬಿಜೆಪಿಗೆ ಸೇರುತ್ತಿದ್ದಾರೆ. ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಯಾಗುತ್ತಿರುವುದು ಅಕ್ಷಮ್ಯ. ಭ್ರಷ್ಟಾಚಾರದಲ್ಲಿ ಭಾಗಿಯಾದ ಕೃಷ್ಣರನ್ನು ಪ್ರಧಾನಿ ಮೋದಿ ಪಕ್ಷಕ್ಕೆ ಸೇರಿಸಿ ೊಳ್ಳಬಾರದು ಎಂದು ಆಗ್ರಹಿಸಿದರು.
ಭ್ರಷ್ಟಾಚಾರ ವಿರುದ್ಧದ ಹೋರಾಟದಲ್ಲಿ ತೊಡಗಿರುವ ಸಂಘಟನೆಗಳು ಪ್ರಧಾನಿಗೆ ಪತ್ರ ಬರೆದು ಮನವಿ ಸಲ್ಲಿಸಲು ಚಿಂತನೆ ನಡೆದಿದೆ. ಕೃಷ್ಣ ಬಿಜೆಪಿ ಸೇರ್ಪಡೆ ಮೂಲಕ ಉನ್ನತ ಹುದ್ದೆಯ ಮೇಲೆ ಕಣ್ಣು ಇಟ್ಟಿದ್ದಾರೆ ಎಂದು ಆರೋಪಿಸಿದ ಅವರು, ಸಿದ್ದಾರ್ಥ ನಕಲಿ ಛಾಪಾ ಕಾಗದ ಹಗರಣದ ಆರೋಪಿ ತೆಲಗಿ ಹಗರಣದಲ್ಲಿ ಶಾಮೀಲಾಗಿದ್ದಾರೆ. ಹೀಗಾಗಿ ಸಿದ್ದಾರ್ಥ ಸಂರಕ್ಷಣೆಗೆ ಮಾವ ಕೃಷ್ಣ ಶತ ಪ್ರಯತ್ನ ಮಾಡುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.
ನಿವೃತ್ತ ಪೊಲೀಸ್ ಅಧಿಕಾರಿ ಸಂಗ್ರಾಮ್ ಸಿಂಗ್ ಬರೆದ ಪುಸ್ತಕದಲ್ಲಿ ಕಾಡುಗಳ್ಳ ವೀರಪ್ಪನ್ ಹಿರಿಯ ನಟ ಡಾ. ರಾಜ್‌ಕುಮಾರ್‌ರನ್ನು ಅಪಹರಿಸಿದ ಪ್ರಕರಣದ ಹಣಕಾಸು ವ್ಯವಹಾರದ ಮಧ್ಯಸ್ಥಿಕೆಯನ್ನು ಸಿದ್ದಾರ್ಥ ವಹಿಸಿಕೊಂಡಿದ್ದರು ಎಂದು ದಾಖಲು ಮಾಡಿದ್ದಾರೆ. ಡಾ.ರಾಜ್‌ಕುಮಾರ್ ಬಿಡುಗಡೆಯಲ್ಲಿ ಸಾಕಷ್ಟು ಹಣದ ಗೋಲ್‌ಮಾಲ್ ಸಿದ್ದಾರ್ಥ ಮಾಡಿದ್ದಾರೆ ಎಂದು ದೂರಿದರು.







