ಉ.ಪ್ರದೇಶದ ನೂತನ ಮುಖ್ಯಮಂತ್ರಿಗೆ ಸ್ವಂತ ಮನೆಯಿಲ್ಲ, ಆದರೆ 36 ಲ.ರೂ. ಮೌಲ್ಯದ ಮೂರು ಕಾರುಗಳಿವೆ

ಲಕ್ನೋ,ಮಾ.19: ಉತ್ತರ ಪ್ರದೇಶದ ನೂತನ ಮುಖ್ಯಮಂತ್ರಿಯಾಗಿ ರವಿವಾರ ಪ್ರಮಾಣ ವಚನ ಸ್ವೀಕರಿಸಿರುವ ಯೋಗಿ ಆದಿತ್ಯನಾಥ ಅವರು ಸ್ವಂತ ಮನೆಯನ್ನು ಹೊಂದಿಲ್ಲ. ಇದು ಸತ್ಯ....ಕಳೆದ ಲೋಕಸಭಾ ಚುನಾವಣೆ ಸಂದರ್ಭ ಅವರು ಸಲ್ಲಿಸಿದ್ದ ಪ್ರಮಾಣಪತ್ರ ಇದನ್ನು ಸ್ಪಷ್ಟಪಡಿಸಿದೆ. ಟಾಟಾ ಸಫಾರಿ(3 ಲ.ರೂ.),ಇನೋವಾ(12 ಲ.ರೂ.) ಮತ್ತು ನ್ಯೂ ಫಾರ್ಚ್ಯೂನರ್(21ಲ.ರೂ.)....ಹೀಗೆ 35 ಲ.ರೂ.ವೌಲ್ಯದ ಮೂರು ಕಾರುಗಳು ಸೇರಿದಂತೆ ಅವರ ಆಸ್ತಿಯ ಒಟ್ಟೂ ವೌಲ್ಯ 72 ಲ.ರೂ.ಗಳಾಗಿವೆ.
45ರ ಹರೆಯದ ಮಹಂತ-ರಾಜಕಾರಣಿ ಆದಿತ್ಯನಾಥ ಯಾವುದೇ ಸಾಲಬಾಧ್ಯತೆ ಯಿಲ್ಲದ, ಅವಲಂಬಿತರಿಲ್ಲದ ಮತ್ತು ಸಂಸತ್ತಿನಿಂದ ದೊರೆಯುತ್ತಿರುವ ವೇತನ ಹಾಗೂ ಭತ್ಯೆಗಳನ್ನೇ ಆದಾಯದ ಏಕೈಕ ಮೂಲವನ್ನಾಗಿ ಘೋಷಿಸಿರುವ ಕೆಲವೇ ಸಂಸದರ ಪೈಕಿ ಓರ್ವರಾಗಿದ್ದಾರೆ.
1998ರಲ್ಲಿ ಗೋರಖಪುರದಿಂದ ಮೊದಲ ಬಾರಿಗೆ ಲೋಕಸಭೆಗೆ ಆಯ್ಕೆಯಾಗಿದ್ದ ಅವರು 1999,2004,2009 ಮತ್ತು 2014ರ ಚುನಾವಣೆಗಳಲ್ಲಿ ತನ್ನ ಸ್ಥಾನವನ್ನು ಉಳಿಸಿಕೊಂಡಿದ್ದಾರೆ.
ಅವರು ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ಪ್ರಮಾಣಪತ್ರಗಳಂತೆ 2004ರಿಂದ ಪ್ರತಿ ಐದು ವರ್ಷಗಳಿಗೆ ಅವರ ಸಂಪತ್ತು ಸರಿಸುಮಾರು ಮೂರು ಪಟ್ಟು ಹೆಚ್ಚಳ ಗೊಂಡಿದೆ. 2004ರ ಚುನಾವಣೆಯಲ್ಲಿ ಅವರು 9 ಲ.ರೂ.ವೌಲ್ಯದ ಆಸ್ತಿಗಳನ್ನು ಘೋಷಿಸಿದ್ದು, 2009ರ ಚುನಾವಣೆಯ ವೇಳೆ ಇದು 21 ಲ.ರೂ.ಗೇರಿತ್ತು. 2014ರ ಲೋಕಸಭಾ ಚುನಾವಣೆಯಲ್ಲಿ ತನ್ನ ಒಟ್ಟು ಆಸ್ತಿಯ ವೌಲ್ಯ 72 ಲ.ರೂ.ಗಳೆಂದು ಅವರು ಘೋಷಿಸಿಕೊಂಡಿದ್ದು, ಇದರಲ್ಲಿ ಅರ್ಧ ಅವರ ಬಳಿಯಿರುವ ಕಾರುಗಳ ವೌಲ್ಯವಾಗಿದೆ.
ಉತ್ತರಾಖಂಡದ ಎಚ್.ಎನ್.ಬಹುಗುಣ ಗಡ್ವಾಲ್ ವಿವಿಯಿಂದ ವಿಜ್ಞಾನ ಪದವಿ ಪಡೆದಿರುವ ಆದಿತ್ಯನಾಥ ಅವರು ವಸತಿ ಕಟ್ಟಡ,ವಾಣಿಜ್ಯ ಕಟ್ಟಡ,ಕೃಷಿ ಅಥವಾ ಕೃಷಿಯೇತರ ಭೂಮಿ...ಇವ್ಯಾವುದನ್ನೂ ಹೊಂದಿಲ್ಲ.
ತನ್ನ ವಿರುದ್ಧ ನ್ಯಾಯಾಲಯಗಳಲ್ಲಿ ಮೂರು ಕ್ರಿಮಿನಲ್ ಪ್ರಕರಣಗಳು ಬಾಕಿಯಿವೆ ಎಂದು 2014ರ ಲೋಕಸಭಾ ಚುನಾವಣೆ ಸಂದರ್ಭ ಸಲ್ಲಿಸಿದ್ದ ಪ್ರಮಾಣಪತ್ರದಲ್ಲಿ ಅವರು ಘೋಷಿಸಿದ್ದರು.
ಆದಿತ್ಯನಾಥ ಅವರು ಈವರೆಗೆ ತನ್ನ ಪ್ರಚೋದನಕಾರಿ ಮತ್ತು ದ್ವೇಷಪೂರ್ಣ ಹೇಳಿಕೆಗಳಿಂದಾಗಿ ಸುದ್ದಿಯಲ್ಲಿದ್ದರು. ಇದೀಗ ಅವರು ರಾಜ್ಯವೊಂದರ ಮುಖ್ಯಮಂತ್ರಿ ಯಾಗಿದ್ದು, ಅವರು ಹೇಗೆ ಬದಲಾಗುತ್ತಾರೆ ಮತ್ತು ರಾಜ್ಯದ ಅಭಿವೃದ್ಧಿಗಾಗಿ ಹೇಗೆ ಕಾರ್ಯ ನಿರ್ವಹಿಸುತ್ತಾರೆ ಎನ್ನುವುದನ್ನು ಕಾದು ನೋಡಬೇಕಾಗಿದೆ.







