ಯೋಗಿ ಆದಿತ್ಯನಾಥ ಸಂಪುಟದ ಏಕೈಕ ಮುಸ್ಲಿಂ ಸಚಿವ ಮೊಹ್ಸಿನ್ ರಝಾ

ಲಕ್ನೋ,ಮಾ.19: ಇತ್ತೀಚಿನ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಯಾವುದೇ ಮುಸ್ಲಿಂ ಅಭ್ಯರ್ಥಿಯನ್ನು ಬಿಜೆಪಿ ಕಣಕ್ಕಿಳಿಸಿರಲಿಲ್ಲ. ಇದು ಭಾರೀ ಟೀಕೆಗೆ ಗುರಿಯಾಗಿತ್ತು. ರಾಜ್ಯದ ಜನಸಂಖ್ಯೆಯಲ್ಲಿ ಶೇ.20 ರಷ್ಟಿರುವ ಸಮುದಾಯದ ಕುರಿತು ಬಿಜೆಪಿ ತಾರತಮ್ಯ ಪ್ರದರ್ಶಿಸಿದೆ ಎಂದು ಪ್ರತಿಪಕ್ಷಗಳು ಬೆಟ್ಟು ಮಾಡಿದ್ದವು.
ರವಿವಾರ ಯೋಗಿ ಆದಿತ್ಯನಾಥ ಅವರು ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದಾಗ ಈ ಬಾರಿ ಸಂಪುಟದಲ್ಲಿ ಯಾವುದೇ ಮುಸ್ಲಿಂ ಮುಖ ಇರುವುದಿಲ್ಲ ಎಂದೇ ಪ್ರತಿಯೊಬ್ಬರೂ ಭಾವಿಸಿದ್ದರು. ಆದರೆ ಸಚಿವರ ಪಟ್ಟಿಯಲ್ಲಿ ಇತ್ತೀಚಿಗಷ್ಟೇ ಬಿಜೆಪಿಗೆ ಸೇರ್ಪಡೆಗೊಂಡ ಮಾಜಿ ಕ್ರಿಕೆಟಿಗ ಮೊಹ್ಸಿನ್ ರಝಾ ಅವರ ಹೆಸರಿತ್ತು ಮತ್ತು ಇದು ಪ್ರತಿಯೊಬ್ಬರನ್ನೂ ಅಚ್ಚರಿಯಲ್ಲಿ ಕೆಡವಿತ್ತು.
40ರ ಹರೆಯದ ರಝಾ ರಾಜ್ಯದಲ್ಲಿ ಪಕ್ಷದ ವಕ್ತಾರರಾಗಿ ನೇಮಕಗೊಂಡಿದ್ದರು.
ರಝಾ ಅವರು ಸಚಿವ ಹುದ್ದೆ ಪಡೆದಿರುವುದು ಹಲವರ ಹುಬ್ಬುಗಳನ್ನು ಮೇಲೇರಿಸಿದೆ. ಆದರೆ ಉತ್ತರ ಪ್ರದೇಶದಲ್ಲಿ ಮುಸ್ಲಿಂ ಅಭ್ಯರ್ಥಿ ಮಾತ್ರ ನಿರ್ವಹಿಸಬಹುದಾದ ಹಲವಾರು ಇಲಾಖೆಗಳಿದ್ದು, ರಝಾ ಅವರನ್ನು ಸಚಿವರನ್ನಾಗಿ ಮಾಡುವುದು ಬಿಜೆಪಿಗೆ ಅನಿವಾರ್ಯವಾಗಿತ್ತು. ರಝಾ ಅವರಿಗೆ ಅಲ್ಪಸಂಖ್ಯಾತ ವ್ಯವಹಾರಗಳ ಖಾತೆಯನ್ನು ನೀಡುವ ಸಾಧ್ಯತೆಯಿದ್ದು, ಇದು ರಾಜ್ಯದಲ್ಲಿಯ ಮುಸ್ಲಿಮರ ಅಭಿವೃದ್ಧಿಗಾಗಿ ಕಾರ್ಯ ನಿರ್ವಹಿಸುತ್ತಿರುವ ಹಲವಾರು ಇಲಾಖೆಗಳನ್ನು ಒಳಗೊಂಡಿದೆ.
ಲಕ್ನೋ ನಿವಾಸಿಯಾಗಿರುವ ರಝಾ ನಗರದ ಜ್ಯುಬಿಲಿ ಇಂಟರ್ ಕಾಲೇಜಿನಿಂದ ಪದವೀಧರರಾಗಿದ್ದಾರೆ. ಅವರು ವಿಧಾನ ಮಂಡಲದ ಯಾವುದೇ ಸದನದ ಸದಸ್ಯರಲ್ಲ. ನಿಯಮದಂತೆ ಅವರು ಆರು ತಿಂಗಳೊಳಗೆ ಯಾವುದಾದರೂ ಸದನದ ಸದಸ್ಯರಾಗ ಬೇಕಾಗಿದೆ.