ರಾಕ್ ಆ್ಯಂಡ್ ರೋಲ್ ಸಂಗೀತದ ದಂತಕತೆ ಚಕ್ ಬೆರ್ರಿ ಇನ್ನಿಲ್ಲ

ವಾಶಿಂಗ್ಟನ್,ಮಾ.19: ವಿಶ್ವಪ್ರಸಿದ್ಧ ರಾಕ್ ಆ್ಯಂಡ್ ರೋಲ್ ಗೀತರಚನಕಾರ, ಗಾಯಕ ಚಕ್ ಬೆರ್ರಿ ಶನಿವಾರ, ಅಮೆರಿಕದ ಸೈಂಟಿಲೂಯಿಸ್ ಕೌಂಟಿಯಲ್ಲಿರುವ ತನ್ನ ಮನೆಯಲ್ಲಿ ನಿಧನರಾಗಿದ್ದಾರೆ. ಅವರಿಗೆ 90 ವರ್ಷ ವಯಸ್ಸಾಗಿತ್ತು.
ಅನಾರೋಗ್ಯದ ಸಮಸ್ಯೆಯಿಂದ ಬಳಲುತ್ತಿದ್ದ ಅವರಿಗೆ ಶನಿವಾರ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿತ್ತು.ವೈದ್ಯರು ಚಿಕಿತ್ಸೆ ನೀಜಡುತ್ತಿರುವಾಗಲೇ ಅವರು ಕೊನೆಯುಸಿರೆಳೆದರು.
ಕರಿಯ ಜನಾಂಗೀಯರಾದ ಚಾರ್ಲ್ಸ್ ಎಡ್ವರ್ಡ್ ಆ್ಯಂಡರ್ಸನ್ ಬೆರಿಯವರು ರಾಕ್ ಆ್ಯಂಡ್ ರಾಲ್ ಸಂಗೀತ ಪ್ರಕಾರದ ಜನಕರಲ್ಲೊಬ್ಬರೆಂದೇ ಪರಿಗಣಿಸಲಿದ್ದಾರೆ. 1950ರ ದಶಕದಲ್ಲಿ ರಾಕ್ ಆ್ಯಂಡ್ ರೋಲ್ ಸಂಗೀತ ಶೈಶವಾಸ್ಥೆಯಲ್ಲಿದ್ದ ಕಾಲದಲ್ಲಿ, ಗಿಟಾರ್ ವಾದಕರಾಗಿ ಹಾಗೂ ಗೀತರಚನೆಕಾರರಾಗಿ ಸಂಗೀತಪ್ರಿಯರನ್ನು ಸಮ್ಮೋಹನಗೊಳಿಸಿದ್ದರು. ವಿಶ್ವ ವಿಖ್ಯಾತ ರಾಕ್ ಆ್ಯಂಡ್ ರಾಲ್ ಗಾಯಕರಾದ ಎಲ್ವಿಸ್ ಪ್ರೆಸ್ಲಿಯ ಸಮಕಾಲೀನರಾಗಿದ್ದ ಬೆರ್ರಿಯವರ ‘ಜಾನ್ ಬಿ ಗೂಡ್’, ‘ರೋಲ್ ಓವರ್ ಬಿಥೋವನ್’ ಸ್ವೀಟ್ ಲಿಟ್ಲ್ ಸಿಕ್ಸ್‌ಟೀನ್’ ಹಾಗೂ ‘ಮೆಂಫೀಸ್’ನಂತಹ ಅವಿಸ್ಮರಣೀಯ ಮಧುರ ಸಂಗೀತಮಯ ಪಾಪ್ ಹಾಡುಗಳಿಂದ ಅವರು ಗಾನರಸಿಕರ ಮನಸೂರೆಗೊಂಡಿದ್ದರು.
ಅಮೆರಿಕದ ಖ್ಯಾತ ಪಾಪ್ ಗಾಯಕ ಬಾಬ್ ಡಿಲಾನ್ ಅವರು,ತನ್ನ ಹಾಡುಗಳಿಗೆ ತಾನೇ ಸಾಹಿತ್ಯ ಬರೆಯುತ್ತಿದ್ದ ಬೆರ್ರಿಯವರನ್ನು, ‘‘ ರಾಕ್ ಆ್ಯಂಡ್ ರಾಲ್‌ನ ಶೇಕ್ಸ್‌ಪಿಯರ್’ ಎಂದು ಬಣ್ಣಿಸಿದ್ದರು, 50ರ ದಶಕದ ಖ್ಯಾತ ಪಾಪ್ ಗಾನತಂಡಗಳಾದ ರೋಲಿಂಗ್ ಸ್ಟೋನ್ಸ್, ಬೀಚ್ ಬಾಯ್ಸ್, ಬೀಟ್ಲ್ಸ್ ಮಾತ್ರವಲ್ಲ ಎಲ್ವಿಸ್ ಪ್ರಿಸ್ಲಿ ಕೂಡಾ ಬೆರ್ರಿ ಸಾಹಿತ್ಯದ ಹಾಡುಗಳನ್ನು ಹಾಡಿ ಜನಪ್ರಿಯತೆ ಗಳಿಸಿದ್ದರು.





