ಜಾಸ್ತಿ ವೇತನ ಪಡೆಯುವ ಅಧಿಕಾರಿಗಳ ಪಟ್ಟಿಯಲ್ಲಿ ಭಾರತೀಯ ಮೂಲದ ಸಿಇಓ

ಹ್ಯೂಸ್ಟನ್,ಮಾ.19: ಚಿಕಾಗೋ ಮೂಲದ ರಿಯಲ್‌ಎಸ್ಟೇಟ್ ಸಂಸ್ಥೆಯೊಂದರ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿರುವ ಭಾರತೀಯ ಮೂಲದ ಸಂದೀಪ್ ಮಾತ್ರಾನಿ, ಅಮೆರಿಕದ, 25 ಮಂದಿ ಅತಿಯಾದ ವೇತನ ಪಡೆಯುತ್ತಿರುವ ಅಧಿಕಾರಿಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.
ಜನರಲ್ ಗ್ರೋತ್ ಪ್ರಾಪರ್ಟಿಸ್ ಸಂಸ್ಥೆಯ ಸಿಇಓ ಆಗಿರುವ ಸಂದೀಪ್ ಮಾತ್ರಾನಿ 2016ರಲ್ಲಿ ಒಟ್ಟು 39.2 ದಶಲಕ್ಷ ಪರಿಹಾರದ ಜೊತೆಗೆ, 26 ದಶಲಕ್ಷ ಡಾಲರ್ ಅಧಿಕ ವೇತನವನ್ನು ಪಡೆದಿದ್ದರು ಎಂದು ಪರಿಸರ ಹಾಗೂ ಕಾರ್ಪೊರೇಟ್ ಸಂಸ್ಥೆಗಳ ಸಾಮಾಜಿಕ ಜವಾಬ್ದಾರಿಯ ಕುರಿತು ಜಾಗೃತಿ ಮೂಡಿಸುವ ಸಂಸ್ಥೆ ‘ಆ್ಯಸ್ ಯು ಸೋ’ ವರದಿ ಮಾಡಿದೆ.
ಸಿಬಿಎಸ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾದ ಲೆಸ್ಲಿ ಮೂನ್‌ವೆಸ್, ಅಮೆರಿಕದಲ್ಲಿ ಅತಿಯಾದ ವೇತನವನ್ನು ಪಡೆಯುತ್ತಿರುವ ಅಧಿಕಾರಿಗಳ ಪಟ್ಟಿಯಲ್ಲಿ ಮೊದಲ ಸ್ಥಾನವನ್ನು ಆಲಂಕರಿಸಿದ್ದಾರೆ. 2016ಲ್ಲಿ ಮೂನ್‌ವೆಸ್ ಅವರು 56.7 ದಶಲಕ್ಷ ಡಾಲರ್ ವೌಲ್ಯದ ಅಧಿಕ ವೇತನವನ್ನು ಪಡೆದಿದ್ದಾರೆಂದು ಅದು ಹೇಳಿದೆ. ಸೇಲ್ಸ್‌ಫೋಸ್ ಕಂಪೆನಿಯ ಮಾರ್ಕ್ ಬೆನಿಯೊಫ್ 33.4 ದಶಲಕ್ಷ ಡಾಲರ್ ವೇತನದೊಂದಿಗೆ ಪಟ್ಟಿಯಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ. ಡಿಸ್ಕವರಿ ಕಮ್ಯೂನಿಕೇಶನ್ ಸಂಸ್ಥೆಯ ಡೇವಿಡ್ ಝಾಸ್ಲಾವ್ 32.4 ದಶಲಕ್ಷ ಡಾಲರ್ ಅತಿಯಾದ ವೇತನದೊಂದಿಗೆ ತೃತೀಯ ಸ್ಥಾನ ಪಡೆದಿದ್ದಾರೆ.
ಅತಿಯಾದ ವೇತನವನ್ನು ಪಡೆಯುತ್ತಿರುವ ಈ ಸಿಇಓಗಳ ಕಂಪೆನಿಗಳ ಕಾರ್ಯನಿರ್ವಹಣೆಯು ನಿರೀಕ್ಷಿತ ಮಟ್ಟದಲ್ಲಿಲ್ಲವೆಂದು ವರದಿ ಗಮನಸೆಳೆದಿದೆ. ಪಟ್ಟಿಯಲ್ಲಿರುವ 25 ಮಂದಿ ‘ಓವರ್‌ಪೇಯ್ಡಿ’ ಸಿಇಓಗಳ ಪೈಕಿ 15 ಮಂದಿ ಎರಡನೆ ಬಾರಿಗೆ ಪಟ್ಟಿಯನ್ನು ಅಲಂಕರಿಸಿದ್ದರೆ, 10 ಮಂದಿ ಮೂರನೆ ಬಾರಿಗೆ ಕಾಣಿಸಿಕೊಂಡಿದ್ದಾರೆ.
ಸಂದೀಪ್ ಮಾತ್ರಾನಿ ಸಿಇಓ ಆಗಿರುವ ಜನರಲ್ ಗ್ರೋತ್ ಪ್ರಾಪರ್ಟಿಸ್ 2010ರಲ್ಲಿ ದಿವಾಳಿಯೆದ್ದ ಬಳಿಕ, ಶಾಪ್ಪಿಂಗ್ ಮಾಲ್ ಕ್ಷೇತ್ರದಲ್ಲಿ ಹೆಚ್ಚಿನ ಹೂಡಿಕೆಯನ್ನು ಮಾಡಲಾರಂಭಿಸಿದೆ.







