ಉ.ಕೊರಿಯದಿಂದ ಅತ್ಯಾಧುನಿಕ ತಂತ್ರಜ್ಞಾನದ ರಾಕೆಟ್ ಪರೀಕ್ಷೆ: ಅಮೆರಿಕದಿಂದ ತೀವ್ರ ಪ್ರತಿಭಟನೆ

ಸೋಲ್,ಮಾ.18: ಅಮೆರಿಕದ ವಿದೇಶಾಂಗ ಸಚಿವರ ದಕ್ಷಿಣ ಕೊರಿಯ ಭೇಟಿಯ ಸಂದರ್ಭದಲ್ಲಿಯೇ, ನೆರೆಯ ರಾಷ್ಟ್ರವಾದ ಉತ್ತರ ಕೊರಿಯ ಅತ್ಯುನ್ನತ ಕಾರ್ಯನಿರ್ವಹಣೆಯ ರಾಕೆಟ್ ಎಂಜಿನ್‌ನ್ನು ರವಿವಾರ ಪರೀಕ್ಷಿಸಿರುವುದಗಿ ಕೊರಿಯದ ಸುದ್ದಿಸಂಸ್ಥೆಗಳು ವರದಿ ಮಾಡಿದೆ. ಈ ಪರೀಕ್ಷೆಯು ದೇಶದ ರಾಕೆಟ್ ಉದ್ಯಮದಲ್ಲಿ ಇದೊಂದು ಹೊಸ ಮುನ್ನಡೆಯೆಂದು ಉತ್ತರ ಕೊರಿಯದ ಸರ್ವೋಚ್ಚ ನಾಯಕ ಕಿಂಮ್ ಜಾಂಗ್ ಉನ್ ಹೇಳಿದ್ದಾರೆ.
ಉತ್ತರಕೊರಿಯವು ಸದ್ಯದಲ್ಲೇ ನೂತನ ಉಪಗ್ರಹ ರಾಕೆಟ್ ದ ಉಡಾವಣೆಗೆ ಸಿದ್ಧತೆ ನಡೆಸುತ್ತಿದೆಯೆಂಬ ಸುಳಿವನ್ನು ಕೂಡಾ ಅವರು ನೀಡಿದ್ದಾರೆ.
ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ರೆಕ್ಸ್ ಟಿಲ್ಲರ್ಸ್ ಅವರ ದಕ್ಷಿಣ ಕೊರಿಯ ಭೇಟಿಯ ಸಂದರ್ಭದಲ್ಲೇ ಉ.ಕೊರಿಯ ರಾಕೆಟ್ ಪರೀಕ್ಷೆ ನಡೆಸಿರುವುದು ಗಮನಾರ್ಹವಾಗಿದೆ.
ಈ ಅತ್ಯುನ್ನತ ತಂತ್ರಜ್ಞಾನದ ಎಂಜಿನ್‌ನ್ನು ಅಭಿವೃದ್ಧಿಪಡಿಸುವ ಮೂಲಕ ಉತ್ತರ ಕೊರಿಯ ಬಾಹ್ಯಾಕಾಶ ಕ್ಷೇತ್ರದಲ್ಲಿ ಜಾಗತಿಕ ಮಟ್ಟದ ಸಾಧನೆಯನ್ನು ಪ್ರದರ್ಶಿಸಿದೆ ಎಂದು ಅವರು ಹೇಳಿರುವುದಾಗಿ ಉ.ಕೊರಿಯದ ಸುದ್ದಿಸಂಸ್ಥೆ ಕೆಸಿಎನ್‌ಎ ತಿಳಿಸಿದೆ.
ಮಿತ್ರ ರಾಷ್ಟ್ರಗಳಾದ ಜಪಾನ್ ಹಾಗೂ ದಕ್ಷಿಣ ಕೊರಿಯ ಪ್ರವಾಸ ಕೈಗೊಂಡ ಬಳಿಕ ಇಂದು ಚೀನಾಕ್ಕೆ ಆಗಮಿಸಿದ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ರೆಕ್ಸ್ ಟಿಲ್ಲರ್ಸ್‌ನ ಅವರು,ಅಮೆರಿಕವು ತಾಳ್ಮೆಯ ರಾಜತಾಂತ್ರಿಕತೆಗೆ ಉ.ಕೊರಿಯ ಸ್ಪಂದಿಸುವಲ್ಲಿ ವಿಫಲವಾಗಿದೆಯೆಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಉತ್ತರ ಕೊರಿಯದ ವಿರುದ್ಧ ಅಮೆರಿಕವು ಮಿಲಿಟರಿ ಕಾರ್ಯಾಚರಣೆ ನಡೆಸುವ ಪರಿಶೀಲನೆಯಲ್ಲಿರುವ ಆಯ್ಕೆಯಾಗಿದೆ ಎಂದರು. ಕಳೆದ ವರ್ಷ ತಾನು ನಡೆಸಿದ ಪರಮಾಣು ಪರೀಕ್ಷೆ ಹಾಗೂ ಇದೀಗ ನಡೆಸಿರುವ ಕ್ಷಿಪಣಿ ಉಡಾವಣೆಗಳು, ಜಪಾನ್‌ನಲ್ಲಿರುವ ಅಮೆರಿಕ ನೆಲೆಗಳ ಮೇಲೆ ದಾಳಿಗೆ ನಡೆಸುವ ತಾಲೀಮೆಂದು ಉತ್ತರ ಕೊರಿಯ ಬಣ್ಣಿಸಿರುವ ಹಿನ್ನೆಲೆಯಲ್ಲಿ ಅಮೆರಿಕ ಈ ರೀತಿ ಕಟುವಾಗಿ ಪ್ರತಿಕ್ರಿಯಿಸಿದೆ.







