ಕನಡ ಉಳಿಸಲು ಕನ್ನಡ ಮನಸ್ಸುಗಳು ಒಂದಾಗಲಿ: ರಾಜೇಂದ್ರ ನಾಯ್ಕ

ಅಂಕೋಲಾ, ಮಾ.19: ಇತ್ತೀಚಿನ ದಿನಗಳಲ್ಲಿ ಇಂಗ್ಲಿಷ್ ವ್ಯಾಮೋಹದ ಪರಿಣಾಮವಾಗಿ ಕನ್ನಡ ಭಾಷೆಗೆ ತೀವ್ರ ಹಿನ್ನಡೆಯಾಗುತ್ತಿದ್ದು, ಗ್ರಾಮೀಣ ಭಾಗದಲ್ಲಿ ಮಾತ್ರ ಕನ್ನಡ ಭಾಷೆ ಜೀವಂತವಾಗಿದೆ. ಕನ್ನಡವನ್ನು ಉಳಿಸುವ ನಿಟ್ಟಿನಲ್ಲಿ ಕನ್ನಡ ಮನಸ್ಸುಗಳು ಒಂದಾಗಬೇಕು. ಎಂದು ರಾಜ್ಯ ಮೀನುಗಾರಿಕಾ ನಿಗಮ ಅಧ್ಯಕ್ಷ ರಾಜೇಂದ್ರ ವಿ. ನಾಯ್ಕ ಅಭಿಪ್ರಾಯಪಟ್ಟರು. ತಾಲೂಕಿನ ಅಚವೆ ಗ್ರಾ.ಪಂ. ವ್ಯಾಪ್ತಿಯ ಚನಗಾರ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಉತ್ತರ ಕನ್ನಡ, ಅಂಕೋಲಾ ತಾಲೂಕು ಸಾಹಿತ್ಯ ಪರಿಷತ್ ಹಾಗೂ ಸ್ವಾಗತ ಸಮಿತಿ ಇವುಗಳ ಸಂಯುಕ್ತಾಶ್ರಯದಲ್ಲಿ ರವಿವಾರ ಹಮ್ಮಿಕೊಳ್ಳಲಾಗಿದ್ದ 6ನೆ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಮುಂದಿನ ಯುವ ಜನಾಂಗಕ್ಕೆ ಸಾಹಿತ್ಯ ಅಭಿರುಚಿಯನ್ನು ಮೂಡಿಸುವುದಕ್ಕಾಗಿ ಸಾಹಿತಿಗಳು ಇನ್ನಷ್ಟು ಸದೃಢರಾಗಬೇಕಿದೆ. ಮಕ್ಕಳಲ್ಲಿ ಎಳವೆಯಲ್ಲಿಯೇ ಕನ್ನಡ ಭಾಷೆ, ನುಡಿಯ ಕುರಿತು ಅರಿವು ಮೂಡಿಸುವ ಕಾರ್ಯ ಪಾಲಕರಿಂದ ಆಗಬೇಕು. ಆಗ ಮಾತ್ರ ಕನ್ನಡದ ಉಳಿವು ಸಾಧ್ಯ ಎಂದರು. ನಾವು ಕರಾವಳಿ ಭಾಗದಲ್ಲಿ ವಾಸಿಸುವ ಜನ. ಅದರಲ್ಲೂ ಅಂಕೋಲಾಕ್ಕೆ ವಿಶಿಷ್ಟ ಪ್ರಾಧಾನ್ಯತೆ ಇದೆ. ಈ ಭಾಗದ ಜನರು ಹೆಚ್ಚಾಗಿ ಆಹಾರಕ್ಕಾಗಿ ಮೀನು ಉತ್ಪನ್ನವನ್ನು ಬಳಸುತ್ತೇವೆ. ಹೀಗಾಗಿ ಬುದ್ಧಿವಂತಿಕೆಯಲ್ಲಿ ಹೆಚ್ಚಿನ ಪ್ರಾಮುಖ್ಯತೆ ಪಡೆಯುತ್ತೇವೆ ಎಂದ ಅವರು, ಶಾಖಾಹಾರಿಗಳು ಬುದ್ಧಿವಂ ತರಲ್ಲಾ ಎಂದು ತಿಳಿಯಬಾರದು ಎಂದು ನಾಯ್ಕ ಹೇಳಿದರು.
ನೂತನವಾಗಿ ನಿರ್ಮಿಸಲಾದ ಸಮ್ಮೇಳನದ ವೇದಿಕೆ ಉದ್ಘಾಟಿಸಿ ಮಾತನಾಡಿದ ಶಾಸಕ ಸತೀಶ ಸೈಲ್, ಸಾಹಿತ್ಯ ಸಮ್ಮೇಳನವನ್ನು ಗ್ರಾಮೀಣ ಭಾಗದಲ್ಲಿ ಆಯೋಜಿಸುತ್ತಿರುವುದರಿಂದ ಕನ್ನಡ ಭಾಷೆಯ ಉಳಿವಿಗೆ ಹೆಚ್ಚಿನ ಪ್ರಾಧಾನ್ಯತೆ ದೊರೆಯಲಿದೆ. ಕನ್ನಡ ಭಾಷೆಯ ಕುರಿತು ಕೀಳರಿಮೆ ಸಲ್ಲದ್ದು. ಕನ್ನಡ ರಕ್ಷಣೆಗೆ ಸರ್ವರೂ ಕಂಕಣ ಬದ್ಧರಾಗಬೇಕು ಎಂದರು. ಕಸಾಪ ಜಿಲ್ಲಾಧ್ಯಕ್ಷ ಅರವಿಂದ ಕರ್ಕಿಕೋಡಿ ಮಾತನಾಡಿ, ಸಾಹಿತ್ಯ ಪರಿಷತ್ ಜಾತಿಯ ಕೂಟವಾಗಬಾರದು. ಎಲ್ಲರ ಸಹಕಾರ ಪಡೆಯುವುದರ ಮೂಲಕ ಪರಿಷತ್ ಬಳಗ ಇನ್ನಷ್ಟು ಬೆಳೆಯಬೇಕು. ಅಕ್ಷರ ಪ್ರೇಮಿಗಳಾಗಿ ಬೆಳಕಿನ ಬೀಜಗಳಂತೆ ಮುಂದಿನ ಜನರಿಗೆ ಕನ್ನಡ ಪರಿಚಯಿಸಬೇಕು. ಸರಕಾರದ ಯೋಜನೆಗಳು ಜನರಿಗೆ ಸರ್ಮಪಕವಾಗಿ ತಲುಪುವಂತಾಗಬೇಕು. ಮುಂದಿನ ದಿನಗಳಲ್ಲಿ ಹಳಿಯಾಳದ ತೆರಗಾಂವ ನಲ್ಲಿ ನಡೆಯುವ ಜಿಲ್ಲಾ ಸಾಹಿತ್ಯ ಸಮ್ಮೇಳನದಲ್ಲಿ ನಾಲ್ಕು ಸಾವಿರದಷ್ಟು ಸಾಹಿತ್ಯ ಪ್ರೇಮಿಗಳು ಭಾಗವಹಿಸಲಿದ್ದಾರೆ ಎಂದರು. ಎನ್.ಆರ್.ನಾಯಕ ಅವರ ‘ವಿಮೋಚನೆ ಮತ್ತು ಖ್ಯಾತಿ ವೃಕ’್ಷ, ಡಾ.ಪ್ರಕಾಶ ನಾಯಕ ಅವರ ‘ಜನಪದ ಪ್ರಣಯಗೀತೆಗಳು’ ಹಾಗೂ ಡಾ.ಪ್ರಕಾಶ ನಾಯಕ ಮತ್ತು ಮಂಜುನಾಥ ಗಾಂವಕರ್ ಬರ್ಗಿ ಅವರ ‘ಅಂಕೋಲಿಗರ ಕವಿತೆಗಳು’ ಕೃತಿಗಳನ್ನು ಬಾಸಗೋಡ ಶಾಲೆಯ ಮುಖ್ಯಾಧ್ಯಾಪಕ ಮಂಜುನಾಥ ಗಾಂವಕರ್ ಬರ್ಗಿ ಪರಿಚಯಿಸಿದರು.
ನಿಕಟಪೂರ್ವ ಸಮ್ಮೇಳನ ಅಧ್ಯಕ್ಷ ಡಾ.ಆರ್.ಜಿ.ಗುಂದಿ ನೂತನ ಸಮ್ಮೇಳನ ಅಧ್ಯಕ್ಷ ಎನ್. ವಿ. ನಾಯಕ ಭಾವಿಕೇರಿ ಅವರಿಗೆ ಧ್ವಜ ಹಸ್ತಾಂತರಿಸಿ ಮಾತನಾಡಿದರು. ಇದೇ ಸಂದರ್ಭದಲ್ಲಿ ತಾ.ಪಂ. ಅಧ್ಯಕ್ಷ ಸುಜಾತಾ ಗಾಂವಕರ್, ಕುಮಟಾದ ಡಾ. ವಿ.ಕೆ.ಹಂಪಿಹೊಳಿ ಮತ್ತು ಉತ್ತರ ಕನ್ನಡ ಜಿ.ಪ. ಮಾಜಿ ಅಧ್ಯಕ್ಷ ರಮಾನಂದ ಬಿ.ನಾಯಕ ಕೃತಿಗಳನ್ನು ಬಿಡುಗಡೆಗೊಳಿಸಿ ಮಾತನಾಡಿದರು. ವೇದಿಕೆಯಲ್ಲಿ ಕಸಾಪ ಸಾಹಿತ್ಯ ಸಮ್ಮೇಳನದ ನಿಕಟಪೂರ್ವ ಅಧ್ಯಕ್ಷರಾದ ಶಾಂತಾರಾಮ ನಾಯಕ ಹಿಚ್ಕಡ, ಬಿ.ಹೊನ್ನಪ್ಪ ಭಾವಿಕೇರಿ, ಮೋಹನ ಹಬ್ಬು, ಸಾಹಿತಿಗಳಾದ ಗೋಪಾಲಕೃಷ್ಣ ನಾಯಕ, ಕೃಷ್ಣ ನಾಯಕ ಹಿಚ್ಕಡ, ಗ್ರಾ.ಪಂ. ಅಧ್ಯಕ್ಷ ಉದಯ ಗುನಗಾ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಟಿ.ಮಂಜುನಾಥ ಮುಂತಾದವರು ಉಪಸ್ಥಿತರಿದ್ದರು. ಚನಗಾರ ಶಾಲೆಯ ವಿದ್ಯಾರ್ಥಿನಿಯರು ನಾಡಗೀತೆ ಹಾಡಿದರು. ಸ್ವಾಗತ ಸಮಿತಿ ಅಧ್ಯಕ್ಷ ಹಾಗೂ ವಾ.ಕ. ರ.ಸಾ.ಸಂಸ್ಥೆಯ ನಿರ್ದೇಶಕ ಜಿ.ಎಂ.ಶೆಟ್ಟಿ ಸ್ವಾಗತಿಸಿದರು.
ಕಸಾಪ ತಾಲೂಕು ಅಧ್ಯಕ್ಷ ಡಾ.ಪ್ರಕಾಶ ನಾಯಕ ಪ್ರಾಸ್ತಾವಿಕ ಮಾತನ್ನಾಡಿದರು. ಉಪನ್ಯಾಸಕರಾದ ಮಹೇಶ ನಾಯಕ ಹಿಚ್ಕಡ, ಎಸ್.ಆರ್. ನಾಯಕ ನಿರೂಪಿಸಿದರು. ವಾಸುದೇವ ನಾಯಕ ಪರಿಚಯಿಸಿದರು. ತಿಮ್ಮಣ್ಣ ಭಟ್, ರಫೀಕ್ ಶೇಖ್ ಸಹಕರಿಸಿದರು. ಶಂಕರ ಕೊಡಿಯಾ ಸಂದೇಶ ವಾಚಿಸಿದರು. ದಾಮೋದರ ಜಿ. ನಾಯ್ಕ ವಂದಿಸಿದರು.
‘ಪರಭಾಷೆ ಜ್ಞಾನ ವೃದ್ಧಿಗೆ ಮಾತ್ರ ಸೀಮಿತವಾಗಿರಲಿ’
ಅಂಕೋಲಾ, ಮಾ.19: ಜ್ಞಾನದ ವೃದ್ಧಿಗೆ ಯಾವುದೇ ಭಾಷೆ ಕಲಿತರೂ ಕನ್ನಡತನ ಎಂದಿಗೂ ನಮ್ಮದಾಗಿರಲಿ. ನಮ್ಮಿಳಗಿನ ಪ್ರೀತಿ, ಪ್ರೇಮ, ಸ್ನೇಹ, ಅಭಿಮಾನ, ಕನ್ನಡದ ನೆಲದಲ್ಲಿ ಸದಾ ಸಾಕಾರಗೊಳ್ಳುತ್ತಿರಲಿ ಎಂದು ಅಂಕೋಲಾ 6ನೆ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಎನ್.ವಿ. ನಾಯಕ ಭಾವಿಕೇರಿ ಕರೆ ನೀಡಿದರುತಾಲೂಕಿನ ಚನಗಾರ ಸರಕಾರಿ ಕಿ.ಪ್ರಾ.ಶಾಲೆಯ ಆವರಣದಲ್ಲಿ ಆಯೋಜಿಸಲಾದ 6ನೆ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಅವರು ಮಾತನಾಡಿ, ರಾಜ್ಯ ಮತ್ತು ಜಿಲ್ಲೆಯಲ್ಲಿ ಅಂಕೋಲಾಕ್ಕೆ ತನ್ನದೇ ಆದ ಹಿರಿಮೆಯಿದೆ. ಜಿಲ್ಲೆಯಲ್ಲಿ ಸಾಹಿತ್ಯ, ಕಲೆ, ಸಾಂಸ್ಕೃತಿ ರಂಗಗಳಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿದೆ.
ಎಲ್ಲರೂ ಕನ್ನಡದ ಮೂಲಕ ಬದುಕನ್ನು ಕಟ್ಟಬೇಕು ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು. ಮೊಟ್ಟ ಮೊದಲಬಾರಿ ಗ್ರಾಮೀಣ ಪ್ರದೇಶದ ಸಮ್ಮೇಳನ ಎಂಬ ಹೆಜ್ಜೆಗುರುತಿಗೆ ಕಾರಣವಾಗುತ್ತಿರುವುದು ವೈಯಕ್ತಿಕವಾಗಿ ಎಲ್ಲರಿಗೂ ಸಂತೋಷದ ಸಂಗತಿ. ಸಾಹಿತ್ಯ ಮತ್ತು ಕನ್ನಡ ಪರಿಚಾರಿಕೆ ಕೇವಲ ಪಟ್ಟಣ ಪ್ರದೇಶ ಮಾತ್ರವಲ್ಲದೇ ಅದರ ಮೂಲ ಸೆಲೆಯಾದ ಗ್ರಾಮೀಣ ಭಾಗದಲ್ಲೂ ಆಗುತ್ತಿರುವುದು ಆರೋಗ್ಯಕರ ಬೆಳವಣಿಗೆ ಎಂದರು. ಕಾರ್ಯಕ್ರಮ ಪೂರ್ವದಲ್ಲಿ ಸಮ್ಮೇಳನಾಧ್ಯಕ್ಷರನ್ನು ಚನಗಾರ ಸೇವಾ ಸಹಕಾರಿ ಸಂಘದಿಂದ ಸಮ್ಮೇಳನ ಸಭಾಂಗಣದವರೆಗೆ ಮರವಣಿಗೆ ಮೂಲಕ ಕರೆತರಲಾಯಿತು.
ಈ ಸಂದರ್ಭದಲ್ಲಿ ಕಸಾಪ ಜಿಲ್ಲಾಧ್ಯಕ್ಷ ಅರವಿಂದ ಕರ್ಕಿಕೋಡಿ, ತಾಲೂಕು ಅಧ್ಯಕ್ಷ ಡಾ. ಪ್ರಕಾಶ ನಾಯಕ ಬೆಳಸೆ, ಪ್ರಕಾಶ ಕುಂಜಿ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಸಮ್ಮೇಳನದ ಅಂಗವಾಗಿ ರಾಮ ನಾಯಕ, ಚಂದ್ರಹಾಸ ನಾಯಕ, ನಾರಾಯಣ ರಾಮ ಗೌಡ, ಬುದ್ದು ಆಗೇರ ಸ್ಮರಣಾರ್ಥ ಮಹಾದ್ವಾರಗಳನ್ನು ಉದ್ಘಾಟಿಸಲಾಯಿತು. ಕಾರ್ಯಕ್ರಮದಲ್ಲಿ ದಿ.ಮನೋಹರ ನಾಯಕ ಬೊಮ್ಮಿಗುಡಿ, ಜಿ.ಪಿ.ನಾಯಕ ಇವರ ಅಗಲಿಕೆ ಹಿನ್ನೆಲೆ ಒಂದು ನಿಮಿಷದ ಮೌನಾಚರಣೆಯನ್ನು ನಡೆಸಲಾಯಿತು.







