ಏರ್ ಇಂಡಿಯಾದ ವಿಮಾನದಲ್ಲಿ 4 ಮಹಿಳೆಯರಿಗೆ ಒಂದೇ ಸೀಟ್
ಅಧಿಕಾರಿಗಳ ಅಚಾತುರ್ಯ: ಮುಕ್ಕಾಲು ಗಂಟೆ ತಡವಾಗಿ ಹೊರಟ ವಿಮಾನ

ಚಿಕ್ಕಮಗಳೂರು, ಮಾ.19: ಮುಂಬೈ ಯಿಂದ ಮಂಗಳೂರಿಗೆ ರವಿವಾರ ಬೆಳಗ್ಗೆ 10:15ಕ್ಕೆ ಹೊರಡಲಿದ್ದ ಏರ್ ಇಂಡಿಯಾದ ಎಐ 679 ಸಂಖ್ಯೆಯ ವಿಮಾನದಲ್ಲಿ ನಾಲ್ವರಿಗೆ ಒಂದೇ ಸೀಟು ಕಾಯ್ದಿರಿಸಿದ ಕಾರಣ ಕಾರಣ ಪ್ರಯಣಿಕರು ಪೇಚಿಗೆ ಸಿಲುಕಿದ್ದಲ್ಲದೆ, ಸುಮಾರು ಮುಕ್ಕಾಲು ಗಂಟೆ ತಡವಾಗಿ ಹೊರಟು ಮಂಗಳೂರಿಗೆ 12:28ಕ್ಕೆ ತಲುಪಿದ ಘಟನೆ ನಡೆದಿದೆ.
ಉಮ್ರಾ ಯಾತ್ರೆ ಮುಗಿಸಿ ಸೌದಿ ಅರೇಬಿಯಾದ ಜಿದ್ದಾದಿಂದ ಹೊರಟ 43 ಮಂದಿಯ ತಂಡ ಮುಂಬೈಯಲ್ಲಿ ವಿಮಾನ ಬದಲಿಸಿ ಮಂಗಳೂರಿಗೆ ಆಗಮಿಸುತ್ತಿದ್ದ ವೇಳೆ ಈ ಘಟನೆ ನಡೆದಿದೆ.
ಅವ್ವಮ್ಮ ಎಂಬ ಹೆಸರಿನ ಇಬ್ಬರು ಹಾಗೂ ಆಯಿಶಾ ಎಂ. ಎಂಬ ಹೆಸರಿನ ಇಬ್ಬರು ಮಹಿಳೆಯರು ಸೇರಿದಂತೆ ಒಟ್ಟು 4 ಮಂದಿ ಮಹಿಳೆಯರಿಗೆ ಏರ್ ಇಂಡಿಯಾದ ಎಐ 679 ಸಂಖ್ಯೆಯ ವಿಮಾನದಲ್ಲಿ 15ಇ ಸಂಖ್ಯೆಯ ಕೇವಲ 1 ಸೀಟನ್ನು ಮಾತ್ರ ಕಾಯ್ದಿರಲಾಗಿತ್ತು.
ಟಿಕೆಟ್ ಬುಕ್ಕಿಂಗ್ ಕೌಂಟರಿನ ಅಧಿಕಾರಿಗಳು ಬೋರ್ಟ್‌ಂಗ್ ನಂ.38ನ್ನು ಅವ್ವಮ್ಮ ಎಂಬ ಇಬ್ಬರು ಮಹಿಳೆಯರಿಗೆ ನೀಡಿದ್ದರೆ, ಬೋರ್ಟ್‌ಂಗ್ ನಂ.39ನ್ನು ಆಯಿಶಾ ಎಂ. ಹೆಸರಿನ ಇಬ್ಬರು ಮಹಿಳೆಯರಿಗೆ ನೀಡಿದ್ದರು. ವಿಮಾನ ನಿಲ್ದಾಣದ ಟಿಕೆಟ್ ಬುಕ್ಕಿಂಗ್ ಕೌಂಟರ್‌ನ ಅಧಿಕಾರಿಗಳ ಈ ಅಚಾತುರ್ಯ ಇಡೀ ವಿಮಾನವನ್ನು ಸುಮಾರು ಮುಕ್ಕಾಲು ಗಂಟೆ ತಡವಾಗಿ ಹೊರಡುವಂತೆ ಮಾಡಿ ಪ್ರಯಾಣಿಕರ ಅಸಹನೆಗೆ ಕಾರಣವಾಯಿತು. ನಂತರ ವಿಮಾನದಲ್ಲಿ ಖಾಲಿ ಇದ್ದ ಸೀಟುಗಳಲ್ಲಿ ಆ ಮಹಿಳೆಯರನ್ನು ಕುಳ್ಳಿರಿಸಿದ ಬಳಿಕ ವಿಮಾನದ ಪ್ರಯಾಣ ಮುಂದುವರಿಯಿತು ಎಂದು ವಿಮಾನದ ಪ್ರಯಾಣಿಕರು ತಿಳಿಸಿದ್ದಾರೆ.
ಈ ಪ್ರಯಾಣಿಕರು ಮಾ.5ರಂದು ಮಂಗಳೂರು ವಿಮಾನ ನಿಲ್ದಾಣದಿಂದ ಮುಂಬೈಯಲ್ಲಿ ವಿಮಾನ ಬದಲಿಸಿ ಜಿದ್ದಾ ಮೂಲಕ ಮಕ್ಕಾ ಮತ್ತು ಮದೀನ ಯಾತ್ರೆಗೆ ತೆರಳಿದ್ದರು. 15 ದಿನಗಳ ಉಮ್ರಾ ಯಾತ್ರೆ ಮುಗಿಸಿದ ಯಾತ್ರಿಗಳು ಮಾ.18ರಂದು ಜಿದ್ದಾದಿಂದ ಹೊರಟು ಮಾ.19ರಂದು ಬೆಳಗ್ಗೆ 5:30ಕ್ಕೆ ಮುಂಬೈ ತಲುಪಿದ್ದರು. ಮರಳುವ ದಾರಿಯಲ್ಲಿ ಈ ಅಚಾತುರ್ಯ ನಡೆದಿದೆ. ಮಾ.19ರಂದು 9:45ಕ್ಕೆ ಬೋರ್ಡಿಂಗ್ ಸಮಯ ಪಡೆದುಕೊಂಡಿದ್ದ ಏರ್ ಇಂಡಿಯಾದ ಈ ವಿಮಾನವು ಮುಂಬೈಯಲ್ಲಿ 10:15ಕ್ಕೆ ಹೊರಟು 11:40ಕ್ಕೆ ಮಂಗಳೂರು ವಿಮಾನ ನಿಲ್ದಾಣವನ್ನು ತಲುಪಬೇಕಿತ್ತು.







