ದರೋಡೆ ಪ್ರಕರಣ ನಾಲ್ವರು ಬಾಲಾಪರಾಧಿಗಳು ಸೇರಿ ಆರು ಮಂದಿ ಬಂಧನ
ಶಿವಮೊಗ್ಗ, ಮಾ. 19: ಕೆಐಎಡಿಬಿ ಕಾವಲುಗಾರನ ಮೇಲೆ ಹಲ್ಲೆ ನಡೆಸಿ ನಗದು ದೋಚಿ ಪರಾರಿಯಾಗಿದ್ದ ಆರೋಪದ ಮೇರೆಗೆ ನಾಲ್ವರು ಅಪ್ರಾಪ್ತ ವಯಸ್ಕರು ಸೇರಿದಂತೆ ಆರು ಮಂದಿಯನ್ನು ವಿನೋಬಾನಗರ ಠಾಣೆ ಪೊಲೀಸರು ಬಂಧಿಸಿರುವ ಘಟನೆ ರವಿವಾರ ನಗರದಲ್ಲಿ ನಡೆದಿದೆ.
ಚೆನ್ನಾಮುಂಭಾಪರ ಗ್ರಾಮದ ನಿವಾಸಿ ಅರುಣ್ (19), ಬೆಂಕಿನಗರ ಬಡಾವಣೆಯ ರಂಸ್ವಾಮಿ (19) ಹಾಗೂ ಉಳಿದ ನಾಲ್ವರು ಅಪ್ರಾಪ್ತ ವಯಸ್ಕರು ಬಂಧಿತ ಆರೋಪಿಗಳೆಂದು ಗುರುತಿಸಲಾಗಿದ್ದು, ಬಂಧಿತರಿಂದ 3,000 ಸಾವಿರ ನಗದನ್ನು ಪೊಲೀಸರು ವಶಕ್ಕೆ ಪಡೆದು ಕೊಂಡಿದ್ದಾರೆ.
ಇನ್‌ಸ್ಪೆಕ್ಟರ್ ಕೆ.ಟಿ. ಗುರುರಾಜ್, ಸಬ್ ಇನ್‌ಸ್ಪೆಕ್ಟರ್ ರಾಘವೇಂದ್ರ ಕಾಂಡಿಕೆ ಮತ್ತು ಸಿಬ್ಬಂದಿ ಎಲ್ಲ ಆರೋಪಿಗಳನ್ನು ನಗರದ ತರಕಾರಿ ಮಾರುಕಟ್ಟೆಯ ಬಳಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಘಟನೆ ಹಿನ್ನೆಲೆ: ಆಟೊ ಕಾಂಪ್ಲೆಕ್ಸ್ ನಿವಾಸಿ ರುದ್ರಪ್ಪ(55)ಎಂಬವರು ಕೆಐಎಡಿಬಿ ಅಧೀನದ ಆಟೊ ಕಾಂಪ್ಲೆಕ್ಸ್‌ನಲ್ಲಿ ಕಾರ್ಯಾಚರಿಸುತ್ತಿರುವ ಸಂಸ್ಥೆಯೊಂದರ ಕೆಲಸ ಮಾಡುತ್ತಿದ್ದರು. ಕಳೆದ ಹೋಳಿ ಹಬ್ಬದಂದು ನೀರು ಕೇಳುವ ನೆಪದಲ್ಲಿ ಆರು ಯುವಕರ ತಂಡ ಇವರ ಮನೆಗೆ ಆಗಮಿಸಿದ್ದರು.
ರುದ್ರಪ್ಪ ನೀರು ತರಲು ಒಳ ಹೋಗುತ್ತಿದ್ದಂತೆ ಆರೋಪಿಗಳು ಮೇಲೆ ಹಲ್ಲೆ ನಡೆಸಿ, ಅವರ ಬಳಿಯಿದ್ದ ಸುಮಾರು 10 ಸಾವಿರ ನಗದು ಅಪಹರಿಸಿ ಪರಾರಿಯಾಗಿದ್ದರು. ಈ ಕುರಿತಂತೆ ವಿನೋಬಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.







