ಜಾತಿ ಮೀರಿದ ಸರಳ ವಿವಾಹಗಳು ಹೆಚ್ಚಲಿ: ದಿನೇಶ್ ಅಮೀನ್‌ಮಟ್ಟು
ಶಿವಮೊಗ್ಗ: ಮಂತ್ರ ಮಾಂಗಲ್ಯ ಕಾರ್ಯಕ್ರಮ

ಶಿವಮೊಗ್ಗ, ಮಾ. 19: ಜಾತಿಗಳನ್ನು ಮೀರಿದ, ಸರಳ ವಿವಾಹಗಳು ಹೆಚ್ಚೆಚ್ಚು ನಡೆಯಬೇಕು. ಆಡಂಬರದ ಮದುವೆಗಳಿಂದ ಬರೀ ಹಣ ವೆಚ್ಚವಾಗುತ್ತದೆ ಎಂಬುದರ ಅರಿವು ಆಗಬೇಕು ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ದಿನೇಶ್ ಅಮೀನ್ ಮಟ್ಟು ಅಭಿಪ್ರಾಯಪಟ್ಟಿದ್ದಾರೆ. ನಗರದ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಸಭಾಂಗಣದಲ್ಲಿ ರವಿವಾರ ಆಯೋಜಿಸಲಾಗಿದ್ದ ‘ಮಂತ್ರ ಮಾಂಗಲ್ಯ’ ವಿವಾಹ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಅವರು ಮಾತನಾಡಿದರು. ‘ಮಂತ್ರ ಮಾಂಗಲ್ಯ’ ಎಂಬುದು ಅರ್ಥಪೂರ್ಣ, ಸರಳ ವಿವಾಹ ಮಾರ್ಗವಾಗಿದೆ.
ಇಂತಹ ಕಾರ್ಯಕ್ರಮಗಳ ಮೂಲಕ ರಾಷ್ಟ್ರಕವಿ ಕುವೆಂಪು ಅವರನ್ನು ಮತ್ತೆ ಮತ್ತೆ ಜೀವಂತವಾಗಿಸುವ ಪ್ರಯತ್ನಗಳು ನಡೆಯುತ್ತಿರುವುದು ನಿಜಕ್ಕೂ ಸ್ವಾಗತಾರ್ಹ ಸಂಗತಿಯಾಗಿದ್ದು, ಈ ರೀತಿಯ ಕಾರ್ಯಕ್ರಮಗಳು
ಹೆಚ್ಚೆಚ್ಚು ನಡೆಯಬೇಕು ಎಂದರು. ದಂಪತಿಗಳ ನಡುವೆ ಪರಸ್ಪರ ಪ್ರೀತಿ, ಅನ್ಯೋನ್ಯತೆ, ಮುಕ್ತತೆ ಇರಬೇಕು. ಅಭಿಪ್ರಾಯಗಳಿಗೆ ಗೌರವವಿರಬೇಕು. ಆಗ ಮಾತ್ರ ಉತ್ತಮ ದಾಂಪತ್ಯ ಜೀವನ ಸಾಧ್ಯವಾಗಲಿದೆ ಎಂದು ಹೇಳಿದರು. ಪ್ರಗತಿಪರ ಚಿಂತಕರಾದ ಬಾನು ಮುಸ್ತಾಕ್ ಮಾತನಾಡಿ, ಮನುಷ್ಯ ಮನುಷ್ಯರ ನಡುವಿನ ಗೋಡೆ ಕೆಡವುವಂತಹ ಕೆಲಸ ಮಾಡಬೇಕು. ನಾವೆಲ್ಲರೂ ಒಂದೇ ಎಂಬ ಕಲ್ಪನೆ ಬೆಳೆಯಬೇಕು. ‘ಮಂತ್ರ ಮಾಂಗಲ್ಯ’ ವಿವಾಹ ಸಂಖ್ಯೆಗಳು ಹೆಚ್ಚಾಗಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಪ್ರಗತಿಪರ ಚಿಂತಕರಾದ ಡಾ. ಮಲ್ಲಿಕಾರ್ಜುನ ಮೇಟಿ, ಪತ್ರಕರ್ತ ಎನ್.ರವಿಕುಮಾರ್ ಮತ್ತಿತರರು ಉಪಸ್ಥಿತರಿದ್ದರು.







