ಮುಲ್ಕಿ ತಾಲೂಕು ರಚನೆಗೆ ಆಗ್ರಹ: ಮಾ.22ರಂದು ಧರಣಿ
ಮುಲ್ಕಿ, ಮಾ.19: ರಾಜ್ಯ ಸರಕಾರದ ನೂತನ ತಾಲೂಕುಗಳ ಘೋಷಣೆ ಸಂದರ್ಭದಲ್ಲಿ ಮುಲ್ಕಿಯನ್ನು ಕಡೆಗಣಿಸಿದ್ದರಿಂದ ಮುಲ್ಕಿ ಹೋಬಳಿಯ ಜನತೆಗೆ ಅನ್ಯಾಯವಾಗಿದೆ. ಮುಲ್ಕಿ ತಾಲೂಕು ಆಗುವವರೆಗೆ ನಿರಂತರ ಹೋರಾಟ ನಡೆಯಲಿದ್ದು, ಮಾ.22ರ ಬೆಳಗ್ಗೆ ಧರಣಿ ನಡೆಯಲಿದೆ ಎಂದು ಮುಲ್ಕಿ ತಾಲೂಕು ಹೋರಾಟ ಸಮಿತಿಯ ಮುಖಂಡ ಹರಿಕೃಷ್ಣ ಪುನರೂರು ಹೇಳಿದ್ದಾರೆ.
ಮುಲ್ಕಿಯ ಹೋಟೆಲ್ ಸ್ವಾಗತ್ ಸಭಾಂಗಣದಲ್ಲಿ ಜರಗಿದ ಮುಲ್ಕಿ ತಾಲೂಕು ಹೋರಾಟ ಸಮಿತಿು ಸಭೆಯಲ್ಲಿ ಮಾತನಾಡಿದ ಅವರು, ಕಳೆದ ಹಲವಾರು ವರ್ಷಗಳಿಂದ ಮುಲ್ಕಿ ತಾಲೂಕು ರಚನೆ ಬಗ್ಗೆ ನಿರಂತರ ಹೋರಾಟ ನಡೆಯುತ್ತಿದೆ. ಕೇವಲ 9 ತಿಂಗಳ ಅವಧಿಯಲ್ಲಿ ಕಾಪು ತಾಲೂಕು ಘೋಷಣೆಯಾಗಿದ್ದು, ನಿರಂತರ 35 ವರ್ಷಗಳಿಂದ ನಡೆಸುತ್ತಿರುವ ಹೋರಾಟಕ್ಕೆ ಬೆಲೆ ಇಲ್ಲದಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಕೂಡಲೇ ಮುಲ್ಕಿಯನ್ನು ತಾಲೂಕು ಆಗಿ ಘೋಷಿಸಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ತೀವ್ರ ರೀತಿಯ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.
ಸಭೆಯಲ್ಲಿ ಮಾತನಾಡಿದ ಸಮಿತಿಯ ದಿನೇಶ್ ಹೆಗ್ಡೆ ಉಳೆಪಾಡಿ, ಶಾಸಕರ ಮೂಲಕ ಹೋರಾಟ ಸಮಿತಿಯು ಮುಖ್ಯ ಮಂತ್ರಿಯವರನ್ನು ಭೇಟಿಯಾಗಿ ಮುಲ್ಕಿ ತಾಲೂಕು ರಚಿಸುವಂತೆ ಒತ್ತಾಯಿಸಿ ಮನವಿ ಸಲ್ಲಿಸಲಾಗುವುದು ಎಂದರು.
ಮುಖ್ಯ ಮಂತ್ರಿಯಯವರ ಅಭಿಪ್ರಾಯದ ಆಧಾರದ ಮೇಲೆ ಮುಂದಿನ ಹೋರಾಟ ನಿರ್ಧರಿಸಲಾಗುವುದು ಎಂದ ಅವರು, ಮಾ.22ರಂದು ಬೆಳಗ್ಗೆ ಮುಲ್ಕಿ ಬಸ್ ನಿಲ್ದಾಣದ ಬಳಿ ಮುಲ್ಕಿ ತಾಲೂಕು ರಚಿಸುವಂತೆ ಒತ್ತಾಯಿಸಿ ಬೃಹತ್ ಧರಣಿ ನಡೆಸಲಾಗುವುದು ಮತ್ತು ಮುಲ್ಕಿಯ ವಿಶೇಷ ತಹಶೀಲ್ದಾರ್ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದರು.
ಸಭೆಯಲ್ಲಿ ಭುವನಾಭಿರಾಮ ಉಡುಪ, ಮುಲ್ಕಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಧನಂಜಯ ಕೋಟ್ಯಾನ್ ಮಟ್ಟು, ಮುನೀರ್ ಕಾರ್ನಾಡ್ ಮತ್ತಿತರರು ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ಜಿಪಂ ಉಪಾಧ್ಯಕ್ಷೆ ಕಸ್ತೂರಿ ಪಂಜ, ಸದಸ್ಯ ವಿನೋದ್ ಬೊಳ್ಳೂರು, ಬಿಜೆಪಿಯ ಮೂಡುಬಿದಿರೆ ಕ್ಷೇತ್ರಾಧ್ಯಕ್ಷ ಈಶ್ವರ್ ಕಟೀಲು, ಮುಲ್ಕಿ ನಪಂ ಅಧ್ಯಕ್ಷ ಸುನೀಲ್ ಆಳ್ವ, ಅಬ್ದುಲ್ ರಝಾಕ್, ಸಾಧು ಅಂಚನ್ ಮಟ್ಟು ಮತ್ತಿತರರು ಸಭೆಯಲ್ಲಿ ಉಪಸ್ಥಿತರಿದ್ದರು.







