ಉತ್ತರ ಪ್ರದೇಶ: ಬಿಜೆಪಿಗೆ ಬಿಜೆಪಿಯೇ ಶತ್ರು
ಬಿತ್ತಿದಂತೆ ಬೆಳೆ ಎಂಬ ಮಾತು ಉತ್ತರ ಪ್ರದೇಶಕ್ಕೆ ಸೂಕ್ತವಾಗಿದೆ. ಅಲ್ಲಿನ ಮತದಾರರು, ರಾಜಕಾರಣಿಗಳು ಜೊತೆ ಸೇರಿ ಏನನ್ನು ಬಿತ್ತಿದ್ದಾರೆಯೋ ಅದರ ಫಲವೀಗ ಮುಖ್ಯಮಂತ್ರಿ ರೂಪದಲ್ಲಿ ಪ್ರತಿಜ್ಞಾಸ್ವೀಕಾರ ಮಾಡುತ್ತಿದೆ. ಈ ಪ್ರತಿಜ್ಞಾ ಸ್ವೀಕಾರ ಸಮಾರಂಭ ಒಂದು ಸೂತಕದ ಮನೆಯಂತಿದೆ. ಬಿಜೆಪಿ ನಾಯಕರ ಪಾಲಿಗೂ ತೀರಾ ಸಂಭ್ರಮವನ್ನೇನೂ ಇದು ಕೊಟ್ಟಿಲ್ಲ. ಭಾರೀ ಬಹುಮತವನ್ನು ಪಡೆದಿದ್ದರೂ ಬಿಜೆಪಿಯ ಪಾಲಿಗೆ ಸರಕಾರ ರಚನೆ ಸುಲಭ ಸಾಧ್ಯವಾಗಿರಲಿಲ್ಲ ಎನ್ನುವುದನ್ನು ಎತ್ತಿ ಹಿಡಿಯುವಂತೆ ಒಬ್ಬ ಮುಖ್ಯಮಂತ್ರಿಯ ಜೊತೆಗೆ ಇನ್ನಿಬ್ಬರು ಉಪಮುಖ್ಯಮಂತ್ರಿಗಳನ್ನು ಆಯ್ಕೆ ಮಾಡಲಾಗಿದೆ. ಮೋದಿ ನೇತೃತ್ವದಲ್ಲಿ ಚುನಾವಣೆಯನ್ನು ಎದುರಿಸಿ ಸ್ಪಷ್ಟ ಬಹುಮತ ಪಡೆದ ಸರಕಾರ ಎರಡು ಉಪ ಮುಖ್ಯಮಂತ್ರಿಗಳನ್ನು ಹೊಂದುವ ಅಗತ್ಯವಾದರೂ ಏನಿತ್ತು? ಪಕ್ಷದಲ್ಲಿ ಅಧಿಕಾರ ಹಂಚಲು ತೀರಾ ಕಷ್ಟವಾದಾಗ, ಮುಖ್ಯಮಂತ್ರಿಗಳ ಸ್ಥಾನಕ್ಕೆ ತೀವ್ರ ಸ್ಪರ್ಧೆ ಇದ್ದಾಗ ಉಪಮುಖ್ಯಮಂತ್ರಿಗಳ ನೇಮಕಮಾಡಲಾಗುತ್ತದೆ.
ಈ ಉಪಮುಖ್ಯಮಂತ್ರಿ ಸ್ಥಾನ ಕೇವಲ ಭಿನ್ನಮತವನ್ನು ಅಡಗಿಸುವ ಉದ್ದೇಶಕ್ಕಾಗಿಯಷ್ಟೇ ಸೃಷ್ಟಿಸಲಾಗುತ್ತದೆ. ಉಪಮುಖ್ಯಮಂತ್ರಿ ಸ್ಥಾನಕ್ಕೆ ಯಾವುದೇ ಸಾಂವಿಧಾನಿಕ ಸ್ಥಾನಮಾನಗಳಿಲ್ಲ. ಈ ಹಿಂದೆ ಕರ್ನಾಟಕದಲ್ಲಿ ಬಿಜೆಪಿ ಸರಕಾರ ಅಸ್ತಿತ್ವದಲ್ಲಿದ್ದಾಗ ರಾಜಕೀಯಕ್ಕಾಗಿ ನಡು ರಸ್ತೆಯಲ್ಲೇ ಕಚ್ಚಾಟ ನಡೆದಿರುವುದನ್ನು ಜನರು ಇನ್ನೂ ಮರೆತಿಲ್ಲ. ಯಡಿಯೂರಪ್ಪ ರಾಜೀನಾಮೆ ನೀಡಿದ ಬಳಿಕ ಮುಖ್ಯಮಂತ್ರಿ ಆಯ್ಕೆಯ ಜೊತೆಗೆ ಎರಡೆರಡು ಉಪಮುಖ್ಯಮಂತ್ರಿಯನ್ನು ಆಯ್ಕೆ ಮಾಡುವ ಅನಿವಾರ್ಯತೆ ಬಿಜೆಪಿ ಮುಖಂಡರಿಗೆ ಎದುರಾಯಿತು. ಆದರೆ ಅದರ ಪರಿಣಾಮ ಏನಾಯಿತು ಎನ್ನುವುದನ್ನು ನಾವೆಲ್ಲರೂ ನೋಡಿದ್ದೇವೆ. ಆದರೆ ಅಂದಿನ ಕರ್ನಾಟಕದ ಸ್ಥಿತಿ ಇಂದು ಬಿಜೆಪಿಗೆ ಉತ್ತರ ಪ್ರದೇಶದಲ್ಲಿ ಇಲ್ಲ. ಸ್ಪಷ್ಟ ಬಹುಮತವನ್ನು ಪಡೆದಿರುವುದರಿಂದ, ನಾಯಕನನ್ನು ಆಯ್ಕೆ ಮಾಡುವುದು ವರಿಷ್ಠರಿಗೆ ಕಷ್ಟವಾಗಬಾರದಿತ್ತು. ದುರದೃಷ್ಟವಶಾತ್ ಬಹುಮತವಿಲ್ಲದಿದ್ದರೂ ಮಣಿಪುರ, ಗೋವಾರದಲ್ಲಿ ಮುಖ್ಯಮಂತ್ರಿ ಆಯ್ಕೆ ಕಷ್ಟವಾಗಲಿಲ್ಲ. ಆದರೆ 300ಕ್ಕೂ ಅಧಿಕ ಸ್ಥಾನಗಳನ್ನು ಪಡೆದಿದ್ದ ಉತ್ತರ ಪ್ರದೇಶದಲ್ಲಿ ಬಿಜೆಪಿ ಸರಕಾರ ರಚನೆ ಮಾಡುವ ಹೊತ್ತಿಗೆ ಬೆವರಿಳಿಸಿಕೊಂಡಿತು. ಎರಡು ಉಪಮುಖ್ಯಮಂತ್ರಿಗಳನ್ನು ಆಯ್ಕೆ ಮಾಡಬೇಕಾಯಿತು ಎಂದರೆ ಉತ್ತರ ಪ್ರದೇಶದ ಬಿಜೆಪಿಯೊಳಗೆ ಮೂರು ಗುಂಪುಗಳು ಈಗಾಗಲೇ ಸೃಷ್ಟಿಯಾಗಿದೆ ಎಂದೇ ಅರ್ಥ.
ಪ್ರಮಾಣ ವಚನ ಸಂದರ್ಭದಲ್ಲಿ ಅಭಿವೃದ್ಧಿಯೇ ಸರಕಾರದ ಗುರಿ ಎಂದು ನರೇಂದ್ರ ಮೋದಿಯವರು ಹೇಳಿದ್ದಾರೆ. ಆದರೆ ಅಭಿವೃದ್ಧಿಗೂ, ಉತ್ತರಪ್ರದೇಶದ ಸದ್ಯದ ನಾಯಕನಿಗೂ ಸಂಬಂಧ ಕಲ್ಪಿಸುವುದು ತುಸು ಕಷ್ಟವೇ ಸರಿ. ನಿಜಕ್ಕೂ ಉತ್ತರ ಪ್ರದೇಶದ ಅಭಿವೃದ್ಧಿಯನ್ನೇ ಗುರಿಯಾಗಿಟ್ಟುಕೊಂಡಿದ್ದರೆ ಬಿಜೆಪಿಯ ಬಳಿ ಮುಖ್ಯವಾಗಿ ನರೇಂದ್ರ ಮೋದಿಯ ಬಳಿ ಯೋಗ್ಯ ಅಭ್ಯರ್ಥಿಗಳು ಇದ್ದರು. ಇಷ್ಟಕ್ಕೂ ಆಯ್ಕೆಯಾದ ಮೂರೂ ಮುಖ್ಯಮಂತ್ರಿಗಳು ನರೇಂದ್ರ ಮೋದಿ ಆಯ್ಕೆ ಅಲ್ಲವೇ ಅಲ್ಲ. ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿ ನರೇಂದ್ರಮೋದಿಯ ಅಭ್ಯರ್ಥಿಯಾಗಿರುವ ಮನೋಜ್ ಸಿನ್ಹಾ ಅವರು ಆಯ್ಕೆಯಾಗುತ್ತಾರೆಂದೇ ಎಲ್ಲರೂ ಕೊನೆಯವರೆಗೆ ಭಾವಿಸಿದ್ದರು. ಆದರೆ ಆತನನ್ನು ಮುಖ್ಯಮಂತ್ರಿಯಾಗಿ ಆಯ್ಕೆಯಾಗದಂತೆ ತಡೆಯುವ ತಂತ್ರದ ಭಾಗವಾಗಿಯೇ, ಅನಿರೀಕ್ಷಿತವಾಗಿ ಆದಿತ್ಯನಾಥ್ ಹೆಸರು ಪ್ರಧಾನ ಭೂಮಿಕೆಗೆ ಬಂತು. ಆದಿತ್ಯನಾಥ್ ಮುಖ್ಯಮಂತ್ರಿಯಾಗುತ್ತಾರೆ ಎಂಬ ಘೋಷಣೆಯಾದಾಗ ವಿರೋಧಪಕ್ಷದವರಿಗಿಂತ ಬಿಜೆಪಿಯ ನಾಯಕರೇ ಭಾಗಶಃ ಕಂಗಾಲಾಗಿದ್ದರು. ಯಾಕೆಂದರೆ ಯಾವುದೇ ರಾಜಕೀಯ ಒಳನೋಟಗಳಿಲ್ಲದ, ಕೇವಲ ವಿಷಭಾಷಣಗಳ ಮೂಲಕ ಸಮಾಜವನ್ನು ಒಡೆಯುತ್ತಲೇ ತನ್ನ ರಾಜಕೀಯವನ್ನು ರೂಪಿಸಿಕೊಂಡಿರುವ ಆದಿತ್ಯನಾಥ್ ಉತ್ತರ ಪ್ರದೇಶವನ್ನು ಅಭಿವೃದ್ಧಿಯೆಡೆಗೆ ಕೊಂಡೊಯ್ಯುತಋ್ತರೆ ಎನ್ನುವುದೇ ಒಂದು ತಮಾಷೆಯಾಗಿದೆ.
ಸದಾ ತನ್ನ ವಿಕ್ಷಿಪ್ತ ವರ್ತನೆಗಳ ಮೂಲಕ ದೇಶದ ಗಮನ ಸೆಳೆಯುತ್ತಾ ಬಂದಿರುವ, ಯೋಗಿಯಾದರೂ, ಸರ್ವ ತಾಮಸಗುಣಗಳನ್ನು ಮೈಗೂಡಿಸಿಕೊಂಡು ಅತ್ಯಾಚಾರ, ಕೊಲೆಗಳ ಕುರಿತಂತೆ ಅತ್ಯಾಸಕ್ತನಾಗಿರುವ ಈ ವ್ಯಕ್ತಿ ಉತ್ತರ ಪ್ರದೇಶವನ್ನು ಇನ್ನಷ್ಟು ದುರಂತದ ಕಡೆಗೆ ಒಯ್ಯುವುದರಲ್ಲಿ ಎರಡು ಮಾತಿಲ್ಲ. ಈ ಆಯ್ಕೆಯಾಗುತ್ತಾ ಬಂದಿರುವ ಗೋರಖ್ ಪುರ್‌ನ ಸ್ಥಿತಿಗತಿಯನ್ನು ನೋಡಿದರೆ ಸಾಕು, ಈ ರಾಜಕಾರಣಿಯ ಯೋಗ್ಯತೆ ಗೊತ್ತಾಗಿ ಬಿಡುತ್ತದೆ. ತನ್ನ ಕ್ಷೇತ್ರವನ್ನೇ ಮೇಲೆತ್ತುವುದಕ್ಕಾಗಿ ಸಾಧ್ಯವಾಗದವನ ಕೈಯಲ್ಲಿ ಇದೀಗ ಅತ್ಯಂತ ಸೂಕ್ಷವೆನಿಸಿರುವ ಉತ್ತರಪ್ರದೇಶವನ್ನು ಕೊಡಲಾಗಿದೆ. ಒಂದು ರೀತಿಯಲ್ಲಿ ಕೋತಿಗೆ ಭಂಗಿ ಕುಡಿಸಿದಂತಾಗಿದೆ. ಇದು ಉತ್ತರ ಪ್ರದೇಶವನ್ನು ಎತ್ತ ಕೊಂಡೊಯ್ಯುತ್ತದೆ ಎನ್ನುವುದನ್ನು ಕಾದು ನೋಡಬೇಕು.
ಉತ್ತರಪ್ರದೇಶದ ಫಲಿತಾಂಶ ಮೋದಿಯ ವರ್ಚಸ್ಸನ್ನು ಮೇಲೆತ್ತಿದೆಯಾದರೂ, ಇದರ ಬಳಿಕ ನಡೆದ ಬೆಳವಣಿಗೆಗಳು ಮೋದಿಗೆ ಪೂರಕವಾಗಿಲ್ಲ. ಉತ್ತರ ಪ್ರದೇಶದಲ್ಲಿ ಮೋದಿಯ ಪ್ರಾಬಲ್ಯವನ್ನು ಹತ್ತಿಕ್ಕುವುದಕ್ಕಾಗಿಯೇ ಆರೆಸ್ಸೆಸ್ ಆದಿತ್ಯನಾಥ್‌ನನ್ನು ಬಳಸಿಕೊಂಡಿದೆ ಎನ್ನುವ ಮಾತುಗಳು ಈಗ ಕೇಳಿ ಬರುತ್ತಿವೆ. ಮೋದಿಯ ಅಭ್ಯರ್ಥಿ ಉತ್ತರ ಪ್ರದೇಶದಲ್ಲಿ ಅಧಿಕಾರ ಚುಕ್ಕಾಣಿಯನ್ನು ಹಿಡಿಯದಂತೆ ತಡೆಯಲು ಅಲ್ಲಿನ ಬಿಜೆಪಿ ಮುಖಂಡ ಕೇಶವ್ ವೌರ್ಯ ಕೂಡ ಆರೆಸ್ಸೆಸ್ ಜೊತೆಗೆ ಕೈ ಜೋಡಿಸಿ, ಅಂತಿಮವಾಗಿ ಉಪಮುಖ್ಯಮಂತ್ರಿ ಸ್ಥಾನವನ್ನು ತನ್ನದಾಗಿಸಿಕೊಂಡರು ಎಂಬ ಮಾತಿದೆ. ಇದ್ದುದರಲ್ಲಿ ದಿನೇಶ್ ಶರ್ಮಾ ಅವರಿಗೆ ಒಂದಿಷ್ಟು ವರ್ಚಸ್ಸು ಇದೆಯಾದರೂ, ಅಧಿಕಾರ ನಡೆಸುವ ಸಂದರ್ಭದಲ್ಲಿ ಅದು ಯಾವ ಪ್ರಯೋಜನಕ್ಕೂ ಬರುವುದಿಲ್ಲ.
ಆದಿತ್ಯನಾಥ್‌ನ ರಾಜಕೀಯ ವರ್ಚಸ್ಸು ಇರುವುದೇ ಕೋಮು ವಿಭಜನಕಾರಿ ಹೇಳಿಕೆಗಳ ಮೂಲಕ. ಅದು ಅಂತಿಮವಾಗಿ ರಾಮಜನ್ಮಭೂಮಿ ಯನ್ನು ತಲುಪದೇ ಇರುವುದು ಸಾಧ್ಯವೇ ಇಲ್ಲ. ಇದೇ ಸಂದರ್ಭದಲ್ಲಿ ಬಿಜೆಪಿಯೊಳಗೆ ಅಭಿವೃದ್ಧಿ ಮತ್ತು ಕೋಮುರಾಜಕಾರಣ ಇವುಗಳ ನಡುವೆ ಸಂಘರ್ಷಗಳು ನಡೆಯುವ ಸಾಧ್ಯತೆಗಳು ಹೆಚ್ಚಿವೆ. ಮುಂದಿನ ದಿನಗಳಲ್ಲಿ ಆದಿತ್ಯನಾಥ್ ನರೇಂದ್ರ ಮೋದಿಗೆ ಸೆಡ್ಡು ಹೊಡೆದು, ಉತ್ತರ ಪ್ರದೇಶದ ನಿಯಂತ್ರಣವನ್ನು ಸಂಪೂರ್ಣ ತನ್ನ ಕೈಗೆ ತೆಗೆದುಕೊಳ್ಳಲು ಪ್ರಯತ್ನಸಿದರೆ ಅದರಲ್ಲಿ ಅಚ್ಚರಿಯೇನೂ ಇಲ್ಲ. ಮೂವರು ಮುಖ್ಯಮಂತ್ರಿ ಉತ್ತರ ಪ್ರದೇಶವನ್ನು ಮೂರು ದಿಕ್ಕಿಗೆ ಎಳೆಯುವ ಸೂಚನೆಗಳು ಆರಂಭದಲ್ಲೇ ಸಿಕ್ಕಿರುವುದರಿಂದ, ಈ ಸಂದರ್ಭವನ್ನು ಇತರ ಜಾತ್ಯತೀತ ಶಕ್ತಿಗಳು ಹೇಗೆ ತಮಗೆ ಪೂರಕವಾಗಿ ಬಳಸಿಕೊಳ್ಳುತ್ತದೆ ಎನ್ನುವುದನ್ನು ಕಾದು ನೋಡಬೇಕಾಗಿದೆ.







