ವಿವೇಚನಾರಹಿತ ಮಾತು ಬೇಡ: ಕಾರ್ಯಕರ್ತರಿಗೆ ಆದಿತ್ಯನಾಥ್ ಕರೆ
.jpg)
ಲಕ್ನೋ, ಮಾ.20 ಪಕ್ಷದ ಕಾರ್ಯಕರ್ತರು ಯಾವುದೇ ವಿವೇಚನಾರಹಿತ ಹೇಳಿಕೆ ನೀಡಬಾರದು ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಫರ್ಮಾನು ಹೊರಡಿಸಿದ್ದಾರೆ.
ವರ್ಣರಂಜಿತ ಸಮಾರಂಭದಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಮಾತನಾಡಿದ ಅವರು, ಪಕ್ಷದ ಎಲ್ಲ ಮುಖಂಡರು 15 ದಿನಗಳ ಒಳಗಾಗಿ ಆಸ್ತಿ ವಿವರಗಳನ್ನು ಬಹಿರಂಗಪಡಿಸಬೇಕು ಎಂದು ಸೂಚಿಸಿದರು.
'ಸಬ್‌ಕಾ ಸಾಥ್ ಸಬ್‌ಕಾ ವಿಕಾಸ್' ತತ್ವಕ್ಕೆ ಬದ್ಧರಾಗಿ ಚುನಾವಣಾ ಆಶ್ವಾಸನೆಗಳನ್ನು ಈಡೇರಿಸುವುದಾಗಿ ಹೇಳಿದರು. ರಾಜ್ಯದಲ್ಲಿ ನಿಷ್ಪಕ್ಷಪಾತ ಆಡಳಿತ ನಡೆಸಲಾಗುವುದು ಎಂದು ಅವರು ಹೇಳಿದರು.
ಇಬ್ಬರು ಉಪಮುಖ್ಯಮಂತ್ರಿಗಳನ್ನೂ ಒಳಗೊಂಡಂತೆ 46 ಮಂದಿಯ ಆದಿತ್ಯನಾಥ್ ತಂಡದಲ್ಲಿ, ಮೇಲ್ವರ್ಗಕ್ಕೆ ಸೇರಿದ 23 ಮಂದಿ, ಇತರ ಹಿಂದುಳಿದ ವರ್ಗಗಳ 14, ದಲಿತ ಸಮುದಾಯದ ಐದು ಮಂದಿ ಸಚಿವರಿದ್ದಾರೆ. ಒಬ್ಬ ಮುಸ್ಲಿಂ ಹಾಗೂ ಒಬ್ಬ ಸಿಖ್ ಸಚಿವರೂ ಸಂಪುಟದಲ್ಲಿದ್ದಾರೆ. ಉತ್ತರ ಪ್ರದೇಶದ 19ne ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಆದಿತ್ಯನಾಥ್ (44) ಅವರು ಅಖಿಲೇಶ್ ಯಾದವ್ ಅವರನ್ನು ಹೊರತುಪಡಿಸಿದರೆ ರಾಜ್ಯದ ಅತಿ ಕಿರಿಯ ಮುಖ್ಯಮಂತ್ರಿ ಎನಿಸಿಕೊಂಡರು.
ಪ್ರಧಾನಿ ನರೇಂದ್ರ ಮೋದಿ, ಪಕ್ಷದ ಅಧ್ಯಕ್ಷ ಅಮಿತ್ ಶಾ, ಹಿರಿಯ ಮುಖಂಡ ಎಲ್.ಕೆ.ಆಡ್ವಾಣಿ, ಮುರಳಿ ಮನೋಹರ ಜೋಶಿ, ಬಿಜೆಪಿ ಆಡಳಿತದ ರಾಜ್ಯಗಳ ಮುಖ್ಯಮಂತ್ರಿಗಳ ಸಮ್ಮುಖದಲ್ಲಿ ರವಿವಾರ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯಿತು.
ಗೃಹ ಸಚಿವ ರಾಜ್‌ನಾಥ್‌ಸಿಂಗ್ ಅವರ ಪುತ್ರ ಪಂಕಜ್ ಸಿಂಗ್ ಸಂಪುಟದಲ್ಲಿ ಸ್ಥಾನ ಪಡೆಯುವಲ್ಲಿ ವಿಫಲರಾಗಿದ್ದಾರೆ. ಆದರೆ ಮಾಜಿ ಸಿಎಂ ಕಲ್ಯಾಣ್ ಸಿಂಗ್ ಅವರ ಮೊಮ್ಮಗ ಹಾಗೂ ಲಾಲ್‌ಜಿ ಟಂಡನ್ ಅವರ ಮಗ ಸಂಪುಟಕ್ಕೆ ಸೇರ್ಪಡೆಯಾಗಿದ್ದಾರೆ. ಸಂದೀಪ್ ಸಿಂಗ್ ರಾಜ್ಯ ಸಚಿವರಾಗಿದ್ದರೆ, ಅಶುತೋಶ್ ಟಂಡನ್ ಸಂಪುಟ ದರ್ಜೆ ಸಚಿವರಾಗಿದ್ದಾರೆ.







