ಮೆಕ್‌ಡೊನಾಲ್ಡ್ ಇಂಡಿಯಾದ ಆ್ಯಪ್‌ನಿಂದ ಲಕ್ಷಗಟ್ಟಲೆ ಗ್ರಾಹಕರ ವೈಯಕ್ತಿಕ ಮಾಹಿತಿ ಸೋರಿಕೆ?

ಹೊಸದಿಲ್ಲಿ, ಮಾ.20: ಮೆಕ್‌ಡೊನಾಲ್ಡ್ ಬರ್ಗರ್ ಖಂಡಿತಾ ಹಲವು ಮಂದಿಯ ಪಾಲಿಗೆ ದುಬಾರಿಯಾಗಿ ಪರಿಣಮಿಸಿದೆ. ಮೆಕ್‌ಡೊನಾಲ್ಡ್ ಇಂಡಿಯಾದ ಮೆಕ್‌ಡೆಲಿವರಿ ಎಂಬ ಆಪ್‌ನಿಂದ ಸುಮಾರು 22 ಲಕ್ಷ ಗ್ರಾಹಕರ ವೈಯಕ್ತಿಕ ಮಾಹಿತಿಗಳು ಸೋರಿಕೆಯಾಗಿವೆ ಎಂದು ಸೈಬರ್ ಸುರಕ್ಷತೆ ಸಂಸ್ಥೆಯಾದ ಫಲಿಬಲ್ ಬಹಿರಂಗಪಡಿಸಿದೆ.
ಸೋರಿಕೆಯಾದ ಮಾಹಿತಿಯಲ್ಲಿ ಹೆಸರು, ದೂರವಾಣಿ ಸಂಖ್ಯೆ, ಇ-ಮೇಲ್ ವಿಳಾಸ, ಮನೆಯ ವಿಳಾಸ ಮತ್ತು ಸಾಮಾಜಿಕ ಪ್ರೊಫೈಲ್ ಲಿಂಕ್‌ಗಳು ಬಹಿರಂಗವಾಗಿವೆ. ಇದರ ಮೂಲಕ ಸೈಬರ್ ಹ್ಯಾಕರ್‌ಗಳು ಬಳಕೆದಾರರ ಹಣಕಾಸು ಮಾಹಿತಿಯನ್ನು ಕೂಡಾ ಬಳಸಿಕೊಳ್ಳಬಹುದಾಗಿದೆ. ಕ್ರೆಡಿಟ್/ಡೆಬಿಟ್ ಕಾರ್ಡ್ ಮಾಹಿತಿ ಹಾಗೂ ಇ-ವೆಲೆಟ್ ಮಾಹಿತಿಯನ್ನೂ ಪಡೆಯಬಹುದಾಗಿದೆ ಎಂದು ಸೈಬರ್ ಭದ್ರತಾ ಸಂಸ್ಥೆ ಹೇಳಿದೆ.
ಆದರೆ ಮೆಕ್‌ಡೊನಾಲ್ಡ್ ಈ ಸೋರಿಕೆಯನ್ನು ನಿರಾಕರಿಸಿದೆ. ಅಮೆರಿಕದ ಬರ್ಗರ್ ಸರಣಿ ಸಂಸ್ಥೆಯ ಈ ವೆಬ್‌ಸೈಟ್ ಹಾಗೂ ಆ್ಯಪ್ ಅನ್ನು ವೆಸ್ಟ್‌ಲೈಫ್ ಡೆವೆಲಪ್‌ಮೆಂಟ್ ಸಂಸ್ಥೆ ನಿರ್ವಹಿಸುತ್ತಿದೆ.
"ನಮ್ಮ ಆ್ಯಪ್ ಬಳಕೆದಾರರು ಅಥವಾ ವೆಬ್‌ಸೈಟ್ ಬಳಕೆದಾರರು ಯಾವುದೇ ಸೂಕ್ಷ್ಮ ಹಣಕಾಸು ಮಾಹಿತಿ, ಕ್ರೆಡಿಟ್ ಕಾರ್ಡ್ ವಿವರಗಳು, ವ್ಯಾಲೆಟ್ ಪಾಸ್‌ವರ್ಡ್ ಅಥವಾ ಬ್ಯಾಂಕ್ ಖಾತೆ ಮಾಹಿತಿಯನ್ನು ಆ್ಯಪ್ ಇಟ್ಟುಕೋಳ್ಳುವುದಿಲ್ಲ. ಇದು ಬಳಕೆಗೆ ಸುರಕ್ಷಿತವಾಗಿದ್ದು, ನಿರಂತರವಾಗಿ ಇದರ ಭದ್ರತಾ ಕ್ರಮಗಳಿಗೆ ಸಂಸ್ಥೆ ಒತ್ತು ನೀಡುತ್ತಿದೆ. ಮುಂಜಾಗ್ರತಾ ಕ್ರಮವಾಗಿ ಎಲ್ಲ ಗ್ರಾಹಕರು ಪರಿಷ್ಕೃತ ಆ್ಯಪ್ ಬಳಸಬೇಕು. ಗ್ರಾಹಕ ಮಾಹಿತಿಗಳ ಖಾಸಗಿತನ ಹಾಗೂ ಸುರಕ್ಷತೆ ನಮ್ಮ ಆದ್ಯತೆ" ಎಂದು ಮೆಕ್‌ಡೊನಾಲ್ಡ್ ವಕ್ತಾರರು ಪ್ರಕಟಣೆಯಲ್ಲಿ ಹೇಳಿದ್ದಾರೆ.