ಬೀಫ್ ವದಂತಿ: ಹೋಟೆಲ್‌ಗೆ ಬೀಗ

ಜೈಪುರ, ಮಾ.20: ಮಾಂಸದ ತ್ಯಾಜ್ಯಗಳನ್ನು ಸಮರ್ಪಕವಾಗಿ ವಿಲೇವಾರಿ ಮಾಡುತ್ತಿಲ್ಲ ಎಂಬ ಆರೋಪದಲ್ಲಿ ಇಲ್ಲಿನ ಪ್ರತಿಷ್ಠಿತ ಹೋಟೆಲ್ ಒಂದಕ್ಕೆ ಬೀಗಮುದ್ರೆ ಹಾಕಿದ ಅಧಿಕಾರಿಗಳು, ಹೋಟೆಲ್ ಮಾಲಿಕ ಹಾಗೂ ಸಿಬ್ಬಂದಿಯನ್ನು ಬಂಧಿಸಿದ್ದಾರೆ.
ಜೈಪುರದ ಸಿಂಧಿ ಕ್ಯಾಂಪ್‌ನಲ್ಲಿರುವ 'ಹಯಾತ್ ರಬ್ಬಾನಿ' ಎಂಬ ಹೋಟೆಲ್‌ನಲ್ಲಿ ಗೋಮಾಂಸ ಸಿದ್ಧಪಡಿಸಲಾಗುತ್ತಿದ್ದು, ಉಳಿಕೆ ತಾಜ್ಯವನ್ನು ಸಮರ್ಪಕವಾಗಿ ವಿಲೇವಾರಿ ಮಾಡುತ್ತಿಲ್ಲ ಎಂಬ ವದಂತಿಯನ್ನು ಕೆಲವರು ಹಬ್ಬಿಸಿದ್ದರು.
ಆದರೆ ಆ ವದಂತಿ ನಿರಾಧಾರವಾಗಿದ್ದು, ಹೋಟೆಲ್‌ನಲ್ಲಿ ಮಾಂಸಾಹಾರದ ಉಳಿಕೆಯನ್ನು ಮುಕ್ತ ಪ್ರದೇಶದಲ್ಲಿ ಎಸೆಯುತ್ತಿರುವ ಬಗ್ಗೆ ಸ್ಥಳೀಯರಿಗೆ ಅಸಮಾಧಾನ ಇತ್ತು.ಇದನ್ನು ಹಸುಗಳು ಸೇವಿಸುತ್ತಿದ್ದವು. ಇದು ಸ್ಥಳೀಯರಲ್ಲಿ ಆಕ್ರೋಶಕ್ಕೆ ಕಾರಣವಾಗಿತ್ತು" ಎಂದು ಜೈಪುರ ಡಿಸಿಪಿ ಅಶೋಕ್ ಕುಮಾರ್ ಗುಪ್ತಾ ಹೇಳಿದ್ದಾರೆ.
ಗೋರಕ್ಷಾ ದಳದ ಮುಖಂಡ ಕಮಲ್ ದೀದಿ ಅವರ ದೂರಿನ ಮೇರೆಗೆ ಹೋಟೆಲ್ ಮಾಲಕ ನಯೀಮ್ ರಬ್ಬಾನಿ ಹಾಗೂ ಒಬ್ಬ ಸಿಬ್ಬಂದಿಯನ್ನು ಬಂಧಿಸಲಾಗಿದ್ದು, ಭಾರತೀಯ ದಂಡ ಸಂಹಿತೆಯ ಸೆಕ್ಷನ್ 295 ಎ ಅನ್ವಯ ಪ್ರಕರಣ ದಾಖಲಿಸಲಾಗಿದೆ ಎಂದು ಅವರು ವಿವರಿಸಿದ್ದಾರೆ.