ಉತ್ತರ ಪ್ರದೇಶ ಸರಕಾರಕ್ಕೆ ಪ್ರಧಾನಿ ಕಚೇರಿಯಿಂದಲೇ ರಿಮೋಟ್ ಕಂಟ್ರೋಲ್
ರಾಜ್ಯಕ್ಕೆ ಕೇಂದ್ರದಿಂದ ನಿಯಂತ್ರಣಕ್ಕೆ ನೇಮಕವಾದವರು ಯಾರು ಗೊತ್ತೇ ?

ಹೊಸದಿಲ್ಲಿ,ಮಾ.20: ಅಸಾಧಾರಣ ಕ್ರಮವೊಂದರಲ್ಲಿ ಉತ್ತರ ಪ್ರದೇಶದ ನೂತನ ಸರಕಾರವು ಪ್ರಧಾನಿ ಕಚೇರಿಯ ನೇರ ನಿಗಾದಡಿ ಕಾರ್ಯ ನಿರ್ವಹಿಸಲಿದೆ. ಮುಖ್ಯಮಂತ್ರಿ ಆದಿತ್ಯನಾಥ ಸರಕಾರವು ಪ್ರಧಾನಿ ಕಚೇರಿಯಿಂದ ನೇರವಾಗಿ ನಿರ್ದೇಶಗಳನ್ನು ಪಡೆದುಕೊಳ್ಳಲಿದೆ.
ಪ್ರಧಾನಿ ನರೇಂದ್ರ ಮೋದಿಯವರ ಪ್ರಧಾನ ಕಾರ್ಯದರ್ಶಿ ನೃಪೇಂದ್ರ ಮಿಶ್ರಾ ಅವರು ನೂತನ ಸರಕಾರವು ಇನ್ನೂ ತನ್ನ ಸುಭದ್ರ ನೆಲೆಯನ್ನು ಕಂಡುಕೊಳ್ಳಬೇಕಾಗಿರುವ ಉತ್ತರ ಪ್ರದೇಶದಲ್ಲಿಯ ಎಲ್ಲ ಆಡಳಿತಾತ್ಮಕ ಬೆಳವಣಿಗೆಗಳ ಮೇಲೆ ನಿಗಾ ಇರಿಸುವ ಪ್ರಮುಖ ವ್ಯಕ್ತಿಯಾಗಿ ನಿಯೋಜನೆಗೊಂಡಿದ್ದಾರೆ.
ಮಿಶ್ರಾ ಅವರು ರವಿವಾರ ಸಂಜೆ ಆದಿತ್ಯನಾಥರನ್ನು ಭೇಟಿಯಾಗಿ 45 ನಿಮಿಷಗಳ ಕಾಲ ಚರ್ಚಿಸಿದ್ದಾರೆ.
ಇಂತಹ ಸಭೆಗಳು ನಿಯಮಿತವಾಗಿ ನಡೆಯಲಿವೆ. ಮಿಶ್ರಾ ಅವರು ಮೋದಿ ಮತ್ತು ಆದಿತ್ಯನಾಥ ಅವರ ನಡುವೆ ಪ್ರಮುಖ ಸಂಪರ್ಕ ಕೊಂಡಿಯಾಗಲಿದ್ದಾರೆ ಎಂದು ಮೂಲಗಳು ತಿಳಿಸಿದವು.
ಮೋದಿಯವರು 2014ರಲ್ಲಿ ಕೇಂದ್ರದಲ್ಲಿ ಸರಕಾರ ರಚಿಸಿದಾಗ ಉತ್ತರ ಪ್ರದೇಶ ಕೇಡರ್‌ನ ಐಎಎಸ್ ಅಧಿಕಾರಿಯಾಗಿರುವ ಮಿಶ್ರಾ ಅವರನ್ನು ವಿಶೇಷವಾಗಿ ಕರೆಸಿಕೊಂಡಿದ್ದರು.
ಉತ್ತರ ಪ್ರದೇಶದಲ್ಲಿ ಇನ್ನು ಮುಂದೆ ಎಲ್ಲ ಉನ್ನತ ಆಡಳಿತಾತ್ಮಕ ಹುದ್ದೆಗಳಿಗೆ ನೇಮಕಗಳು ಮಿಶ್ರಾ ಅವರು ಅಭ್ಯರ್ಥಿಗಳ ಹಿನ್ನೆಲೆಯನ್ನು ಪರಿಶೀಲಿಸಿ ಒಪ್ಪಿಗೆ ನೀಡಿದ ನಂತರವೇ ನಡೆಯಲಿವೆ.
ಆದಿತ್ಯನಾಥ ಮತ್ತು ಮಿಶ್ರಾ ಅವರು ಸರಕಾರಿ ಯೋಜನೆಗಳ ಅನುಷ್ಠಾನ ಮತ್ತು ಯೋಜನೆಗಳ ಲಾಭಗಳನ್ನು ಬಡವರಿಗೆ ತಲುಪಿಸಲು ಅಗತ್ಯ ಕಾರ್ಯತಂತ್ರಗಳ ಬಗ್ಗೆ ಚರ್ಚಿಸಿದರೆಂದು ಮೂಲಗಳು ತಿಳಿಸಿದವು.
ಮಿಶ್ರಾ ಮತ್ತು ಪ್ರಧಾನಿ ಕಚೇರಿ ಉ.ಪ್ರ.ಸರಕಾರದೊಂದಿಗೆ ನೇರ ಸಂಪರ್ಕದಲ್ಲಿರುವ ನಿರೀಕ್ಷೆಯಿದೆ. ಮಿಶ್ರಾ ಅವರು ದೈನಂದಿನ ಆಡಳಿತ ವ್ಯವಹಾರಗಳಲ್ಲಿ ಆದಿತ್ಯನಾಥ ಸರಕಾರಕ್ಕೆ ಮಾರ್ಗದರ್ಶನ ನೀಡುವ ಸಾಧ್ಯತೆಗಳಿವೆ.
ಉತ್ತರ ಪ್ರದೇಶದಲ್ಲಿ ಜಾರಿಗೆ ತರಬಹುದಾದ ಹೊಸ ಯೋಜನೆಗಳ ಕುರಿತೂ ಆದಿತ್ಯನಾಥ ಮತ್ತು ಮಿಶ್ರಾ ಚರ್ಚಿಸಿದ್ದಾರೆನ್ನಲಾಗಿದೆ.
ಮುಂದಿನ ಕೆಲದಿನಗಳಲ್ಲಿ ಉತ್ತರ ಪ್ರದೇಶದ ಅಧಿಕಾರ ಶಾಹಿಯ ದೃಷ್ಟಿಕೋನದಲ್ಲಿ ಬದಲಾವಣೆಯನ್ನು ನಿರೀಕ್ಷಿಸಲಾಗಿದೆ. ರಾಜ್ಯದಲ್ಲಿ ಸಂಭಾವ್ಯ ಉನ್ನತ ಅಧಿಕಾರಿಗಳ ಹೆಸರುಗಳನ್ನೂ ಆದಿತ್ಯನಾಥ ಮತ್ತು ಮಿಶ್ರಾ ಚರ್ಚಿಸಿದ್ದಾರೆ.