ಭಾಗಲ್ಪುರದ ಚುಲ್ ಬುಲ್ ಪಾಂಡೆ ಖ್ಯಾತಿಯ ಪೊಲೀಸ್ ಅಧಿಕಾರಿ ವಿಜಯ್ ಶರ್ಮ ಬಲಿ

ಭಾಗಲ್ಪುರ, ಮಾ. 20 : ಬಿಹಾರದ ಭಾಗಲ್ಪುರದ ಚುಲ್ ಬುಲ್ ಪಾಂಡೆ ಎಂದೇ ಖ್ಯಾತರಾಗಿದ್ದ ಇಲ್ಲಿನ ತಿಲ್ಕಾ ಮಾಜ್ಹಿ ಠಾಣೆಯ ಸಬ್ ಇನ್ಸ್ ಪೆಕ್ಟರ್ ವಿಜಯ್ ಚಂದ್ರ ಶರ್ಮಾ ಅವರು ವಾಹನ ಅಪಘಾತವೊಂದರಲ್ಲಿ ಮೃತಪಟ್ಟಿದ್ದಾರೆ. ಚುಲ್ ಬುಲ್ ಪಾಂಡೆ ಎಂಬುದು ಖ್ಯಾತ ಹಿಟ್ ಚಲನಚಿತ್ರ ದಬಂಗ್ ಸರಣಿಯಲ್ಲಿ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ನಿರ್ವಹಿಸಿದ ನಿರ್ಭೀತ ಪೊಲೀಸ್ ಅಧಿಕಾರಿಯ ಪಾತ್ರದ ಹೆಸರು.
ವಿಜಯ್ ಶರ್ಮ ಅವರನ್ನು ಅವರ ದಕ್ಷತೆ ಹಾಗು ಧೈರ್ಯಕ್ಕಾಗಿ ದಬಂಗ್ ಅಧಿಕಾರಿ ಎಂದೇ ಭಾಗಲ್ಪುರ ಪರಿಸರದ ಜನರು ಕರೆಯುತ್ತಿದ್ದರು. ರವಿವಾರ ರಾತ್ರಿ ಇಲ್ಲಿನ ವಿಮಾನ ನಿಲ್ದಾಣದಲ್ಲಿ ನಡೆದ ಘಟನೆಯೊಂದಕ್ಕೆ ಸಂಬಂಧಿಸಿ ದುಷ್ಕರ್ಮಿಗಳನ್ನು ಹೆಡೆಮುರಿ ಕಟ್ಟಲು ಸ್ವತಃ ವಿಜಯ್ ಒಬ್ಬರೇ ಹೊರಟಿದ್ದರು. ಸ್ಕಾರ್ಪಿಯೋ ವಾಹನವನ್ನು ಅವರೇ ಚಲಾಯಿಸುತ್ತಿದ್ದರು.
ವೇಗವಾಗಿ ಹೋಗುತ್ತಿರುವಾಗ ಸ್ಕಾರ್ಪಿಯೋ ವಾಹನ ನಿಯಂತ್ರಣ ಕಳೆದುಕೊಂಡು ಬಲಬದಿಗೆ ಮಗುಚಿದ ಪರಿಣಾಮ ವಿಜಯ್ ಗಂಭೀರವಾಗಿ ಗಾಯಗೊಂಡಿದ್ದಾರೆ. ವಾಹನದ ಎದುರಿನ ಚಕ್ರದ ಗಾಳಿಯೂ ಕಡಿಮೆಯಿತ್ತು ಎಂದು ಹೇಳಲಾಗಿದೆ. ಜೊತೆಗೆ ಯಾರೂ ಇಲ್ಲದ್ದರಿಂದ ಬಹಳ ಹೊತ್ತಿನವರೆಗೆ ಯಾರಿಗೂ ಇದು ಗೊತ್ತಾಗದೆ ಅವರ ಪ್ರಾಣಕ್ಕೇ ಸಂಚಕಾರ ಬಂದಿದೆ.
ಬಹಳ ಹೊತ್ತಿನವರೆಗೆ ಸಬ್ ಇನ್ಸ್ ಪೆಕ್ಟರ್ ಠಾಣೆಗೆ ಹಿಂದಿರುಗದೆ ಇದ್ದುದರಿಂದ ಸಂಶಯಗೊಂಡ ಠಾಣಾ ಸಿಬ್ಬಂದಿ ಹೋಗಿ ನೋಡುವಾಗ ವಿಜಯ್ ರಕ್ತದ ಮಡುವಿನಲ್ಲಿ ವಾಹನದೊಳಗೆ ಸಿಲುಕಿಕೊಂಡಿದ್ದರು. ಅಲ್ಲಿಂದ ಅವರನ್ನು ಹೊರತೆಗೆದು ಆಸ್ಪತ್ರೆಗೆ ಕರೆದು ಕೊಂಡು ಹೋದರಾದರೂ ಅಷ್ಟು ಹೊತ್ತಿಗೆ ಅವರು ಮೃತಪಟ್ಟಿದ್ದರು.
ವಿಜಯ್ ಬಿಹಾರದ ಮುಂಗೇರ್ ಜಿಲ್ಲೆಯ ಜಮಲಾಪುರ ನಿವಾಸಿ.2014 ರಲ್ಲಿ ಮಹಿಳಾ ಪೊಲೀಸ್ ಸಿಬ್ಬಂದಿಯೊಬ್ಬರನ್ನು ವಿಜಯ್ ಅಂತರ್ಜಾತಿ ವಿವಾಹವಾಗಿದ್ದರು. ಅವರಿಗೆ ಒಂದು ಚಿಕ್ಕ ಮಗುವಿದೆ. ವಿಜಯ್ ಸಾವಿನ ಸುದ್ದಿ ಕೇಳಿ ಅವರ ಕುಟುಂಬ , ಭಾಗಲ್ಪುರದ ಜನತೆ ಹಾಗು ಪೊಲೀಸ್ ಸಿಬ್ಬಂದಿ ಆಘಾತಕ್ಕೀಡಾಗಿದ್ದಾರೆ.







