ಕಾಗ್ನಿಜಂಟ್‌ನಿಂದ 6,000 ಉದ್ಯೋಗಿಗಳ ವಜಾ ಸಾಧ್ಯತೆ

ಹೊಸದಿಲ್ಲಿ,ಮಾ.20: ಭಾರತದಲ್ಲಿ ಕಚೇರಿಗಳನ್ನು ಹೊಂದಿರುವ ಪ್ರಮುಖ ಮಾಹಿತಿ ತಂತ್ರಜ್ಞಾನ ಸಂಸ್ಥೆ ಕಾಗ್ನಿಜಂಟ್ ತನ್ನ ಕನಿಷ್ಠ 6,000 ಉದ್ಯೋಗಿಗಳನ್ನು ಮನೆಗೆ ಕಳುಹಿಸುವ ಸಾಧ್ಯತೆಯಿದೆ ಎಂದು ಬಲ್ಲ ಮೂಲಗಳು ತಿಳಿಸಿವೆ. ಇದು ಕಂಪನಿಯ ಒಟ್ಟು ಉದ್ಯೋಗಿಗಳ ಸಂಖ್ಯೆಯ ಶೇ.2ಕ್ಕೂ ಅಧಿಕವಾಗಿದೆ. 2016,ಡಿ.31ಕ್ಕೆ ಇದ್ದಂತೆ ಕಂಪನಿಯು ಒಟ್ಟು ಸುಮಾರು 2.6 ಲಕ್ಷ ಉದ್ಯೋಗಿಗಳನ್ನು ಹೊಂದಿದೆ.
ಇದು ಅಸಮರ್ಥರನ್ನು ತೆಗೆದುಹಾಕಲು ಕಂಪನಿಯು ಪ್ರತಿವರ್ಷ ನಡೆಸುವ ತನ್ನ ಉದ್ಯೋಗಿಗಳ ಕಾರ್ಯ ನಿರ್ವಹಣೆಯ ಪರಿಶೀಲನೆ ಪ್ರಕ್ರಿಯೆಯ ಭಾಗವಾಗಿದೆ. ನಮ್ಮ ಸಿಬ್ಬಂದಿ ವ್ಯವಸ್ಥಾಪನೆ ಕಾರ್ಯತಂತ್ರದ ಅಂಗವಾಗಿ ನಮ್ಮ ಗ್ರಾಹಕರ ಬೇಡಿಕೆಗಳನ್ನು ಈಡೇರಿಸಲು ಮತ್ತು ನಮ್ಮ ಉದ್ಯಮ ಗುರಿಗಳನ್ನು ಸಾಧಿಸಲು ಸಿಬ್ಬಂದಿಗಳು ಅಗತ್ಯ ಕೌಶಲ ಹೊಂದಿದ್ದಾರೆ ಎನ್ನುವುದನ್ನು ಖಚಿತಪಡಿಸಿಕೊಳ್ಳಲು ನಾವು ಆಗಾಗ್ಗೆ ಅವರ ಸಾಧನೆಗಳನ್ನು ಪುನರ್‌ಪರಿಶೀಲಿಸುತ್ತಿರುತ್ತೇವೆ. ಈ ಪ್ರಕ್ರಿಯೆಯಲ್ಲಿ ಕೆಲವು ಅಸಮರ್ಥ ನೌಕರರು ಕೆಲಸವನ್ನು ಕಳೆದುಕೊಳ್ಳುತ್ತಾರೆ ಎಂದು ಕಂಪನಿಯ ವಕ್ತಾರರೋರ್ವರು ತಿಳಿಸಿದರು.
ಕೆಳಸ್ತರದ ಹುದ್ದೆಗಳ ಮೇಲೆ ಆಟೋಮೇಷನ್‌ನ ಪರಿಣಾಮದಿಂದಾಗಿ ಐಟಿ ಕಂಪನಿಗಳಲ್ಲಿ ಹಲವಾರು ಹುದ್ದೆಗಳು ಹೆಚ್ಚುವರಿಯಾಗಿ ಪರಿಣಮಿಸಿದ್ದು, ಇದು ಅವುಗಳ ಆದಾಯಕ್ಕೂ ಕತ್ತರಿ ಹಾಕುತ್ತಿದೆ. ನೂತನ ಡಿಜಿಟಲ್ ಸೇವೆಗಳತ್ತ ತ್ವರಿತವಾಗಿ ಹೊರಳುತ್ತಿರುವ ತಂತ್ರಜ್ಞಾನದಲ್ಲಿಯ ಬೃಹತ್ ಬದಲಾವಣೆಗಳಿಂದಾಗಿ ಹಲವಾರು ಭಾರತೀಯ ಐಟಿ ಕಂಪನಿಗಳ ಬೆಳವಣಿಗೆ ಕುಂಠಿತಗೊಳ್ಳುವಂತಾಗಿದೆ ಎಂದು ವಿಶ್ಲೇಷಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.





