ಉಡುಪಿ: ಬೀಡಿ ಕಾರ್ಮಿಕರ ಬಾಕಿ ತುಟ್ಟಿಭತ್ತೆ ನೀಡುವಂತೆ ಆಗ್ರಹಿಸಿ ಧರಣಿ

ಉಡುಪಿ, ಮಾ.20: ಕರ್ನಾಟಕ ಹೈಕೋರ್ಟ್ ಆದೇಶದಂತೆ 2015- 16ರ ಬಾಕಿ ತುಟ್ಟಿ ಭತ್ತೆಯನ್ನು ನೀಡುವಂತೆ ಒತ್ತಾಯಿಸಿ ಉಡುಪಿ ಜಿಲ್ಲಾ ಬೀಡಿ ಕಾರ್ಮಿಕರು ಸೋಮವಾರ ಉಡುಪಿ ಭಾರತ್ ಬೀಡಿ ಡಿಪೊ ಎದುರು ಧರಣಿ ಸತ್ಯಾಗ್ರಹ ನಡೆಸಿದರು.
ರಾಜ್ಯದ ಕಾರ್ಮಿಕ ಮಂತ್ರಿ ಬೀಡಿ ಮಾಲಕರ ಅನುಕಂಪಕ್ಕೆ ಒಳಗಾಗಿ ಬೀಡಿ ಕಾರ್ಮಿಕರಿಗೆ ಸಿಗಬೇಕಾದ ತುಟ್ಟಿ ಭತ್ತೆಯನ್ನು ಸ್ಥಗಿತಗೊಳಿಸುವ ಆದೇಶ ನೀಡಿದ್ದರು. ಈ ಬಗ್ಗೆ ಬೀಡಿ ಕಾರ್ಮಿಕ ಸಂಘಗಳು ನ್ಯಾಯಾಲಯದಲ್ಲಿ ಪ್ರಶ್ನಿಸಿ ಕಾರ್ಮಿಕ ಮಂತ್ರಿಯ ಆದೇಶವನ್ನು ವಜಾಗೊಳಿಸುವಲ್ಲಿ ಯಶಸ್ವಿ ಯಾಗಿದ್ದಾರೆ. ಹೈಕೋರ್ಟ್ ಆದೇಶದನ್ವಯ ಬಾಕಿಯಾದ ತುಟ್ಟಿ ಭತ್ತೆ ಸಾವಿರ ಬೀಡಿಗೆ 12.75ರೂ.ನಂತೆ ಮಾಲಕರು ನೀಡಬೇಕಾಗಿದೆ ಎಂದು ಸಿಐಟಿಯು ಮುಖಂಡ ವಿಠಲ ಪೂಜಾರಿ ತಿಳಿಸಿದರು.
ಬೀಡಿ ಕೈಗಾರಿಕೆಯ ಕಾನೂನಿನ್ವಯ ಬೋನಸ್, ಹಬ್ಬದ ರಜೆ ಸಂಬಳ ಒಟ್ಟು ಸೇರಿ 2015 ಎ.1ರಿಂದ 2016 ಮಾ.31ರವರೆಗೆ 3702.01ರೂ. ವನ್ನು ನೀಡಬೇಕು. ಈ ಬಗ್ಗೆ ಸಂಬಂಧಿಸಿ ಎಲ್ಲಾ ಬೀಡಿ ಕಂಪೆನಿಗಳ ಡಿಪೊ ಗಳಿಗೆ ಸಂಪೂರ್ಣ ಲೆಕ್ಕಾಚಾರದೊಂದಿಗೆ ಮನವಿ ನೀಡಿದ್ದರೂ ಈವರೆಗೆ ಯಾವುದೇ ಸ್ಪಂದನೆ ಸಿಕ್ಕಿಲ್ಲ ಎಂದು ಅವರು ದೂರಿದರು.
ಧರಣಿಯಲ್ಲಿ ಉಡುಪಿ ಜಿಲ್ಲಾ ಬೀಡಿ ಫೇಡರೇಶನ್‌ನ ಅಧ್ಯಕ್ಷ ಮಹಾಬಲ ವಡೇರಹೋಬಳಿ, ಕಾರ್ಯದರ್ಶಿ ಕೆ.ಲಕ್ಷ್ಮಣ್, ಕೋಶಾಧಿಕಾರಿ ಉಮೇಶ್ ಕುಂದರ್, ಮುಖಂಡರಾದ ಕೆ.ಶಂಕರ್, ಕವಿರಾಜ್, ವಿಶ್ವನಾಥ ರೈ, ಬಲ್ಕೀಸ್ ಕುಂದಾಪುರ, ನಳಿನಿ ತೆಂಕನಿಡಿಯೂರು, ಸುಜಾತ ಇಂದಿರಾನಗರ, ಪುಷ್ಪಾ ಕಾಪು, ಸುಗಂಧಿ ಉದ್ಯಾವರ ಮೊದಲಾದವರು ಉಪಸ್ಥಿತರಿದ್ದರು.
ಇದಕ್ಕೂ ಮುನ್ನ ನೂರಾರು ಬೀಡಿ ಕಾರ್ಮಿಕರು ಉಡುಪಿ ಸರ್ವಿಸ್ ಬಸ್ ನಿಲ್ದಾಣದ ಬಳಿ ಸೇರಿ ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿದರು.







