ಲಂಕಾ ತಮಿಳರ ಕುರಿತ ವಿಶ್ವಸಂಸ್ಥೆ ನಿರ್ಣಯ ವಿರೋಧಿಸಲು ಎಡಿಎಂಕೆ ಒತ್ತಾಯ

ಹೊಸದಿಲ್ಲಿ, ಮಾ.20: ಶ್ರೀಲಂಕಾದಲ್ಲಿ ತಮಿಳರ ಹತ್ಯೆ ಕುರಿತ ವರದಿ ಸಲ್ಲಿಕೆಗೆ ಇನ್ನೂ ಎರಡು ವರ್ಷದ ಕಾಲಾವಕಾಶ ನೀಡಿರುವ ಯುಎನ್‌ಎಚ್‌ಆರ್‌ಸಿ (ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಸಮಿತಿ) ನಿರ್ಣಯವನ್ನು ಭಾರತ ವಿರೋಧಿಸಬೇಕು ಎಂದು ಎಐಎಡಿಂಕೆ ಒತ್ತಾಯಿಸಿದೆ.
ರಾಜ್ಯಸಭೆಯಲ್ಲಿ ಶೂನ್ಯವೇಳೆಯಲ್ಲಿ ವಿಷಯ ಪ್ರಸ್ತಾವಿಸಿದ ಎಐಎಡಿಎಂಕೆಯ ವಿ.ಮೈತ್ರೇಯನ್, ಯೋಜಿತ ಮತ್ತು ವ್ಯವಸ್ಥಿತ ಜನಾಂಗ ಹತ್ಯೆಯ ಘಟನೆಯಲ್ಲಿ 1.5 ಲಕ್ಷ ತಮಿಳರನ್ನು ಹತ್ಯೆ ಮಾಡಲಾಗಿದೆ. ಆದರೆ ಇದುವರೆಗೆ ನಂಬಿಕೆಗೆ ಅರ್ಹವಾದ ಯಾವುದೇ ತನಿಖೆ ನಡೆದಿಲ್ಲ ಮತ್ತು ಯಾರೊಬ್ಬರನ್ನೂ ಶಿಕ್ಷಿಸಲಾಗಿಲ್ಲ ಎಂದರು.
ಅಮೆರಿಕಾ, ಬ್ರಿಟನ್ ಮತ್ತಿತರ ರಾಷ್ಟ್ರಗಳು ಶ್ರೀಲಂಕಾದಲ್ಲಿ ತಮಿಳರ ಹತ್ಯೆ ಕುರಿತ ವರದಿ ಸಲ್ಲಿಕೆಗೆ ಇನ್ನೂ ಎರಡು ವರ್ಷದ ಕಾಲಾವಕಾಶ ನೀಡುವ ನಿರ್ಣಯವನ್ನು ಬೆಂಬಲಿಸಿರುವುದು ಆಘಾತಕಾರಿ ವಿಷಯ. ಈ ನಿರ್ಣಯದಂತೆ ವರದಿ ಸಲ್ಲಿಸಲು ಶ್ರೀಲಂಕಾ ಸರಕಾರಕ್ಕೆ 2019ರವರೆಗೆ ಕಾಲಾವಕಾಶವಿದೆ. ಅಲ್ಲದೆ ನಿರ್ಣಯದಲ್ಲಿ ಹೊಸ ಕರಾರುಗಳನ್ನು ಸೇರಿಸಲಾಗಿದೆ. ಇದರಂತೆ ಶ್ರೀಲಂಕಾ ಸರಕಾರದ ಅನುಮತಿ ಪಡೆದ ಬಳಿಕವಷ್ಟೇ ವಿದೇಶಿ ವಕೀಲರು ಅಥವಾ ನ್ಯಾಯವಾದಿಗಳು ಆ ದೇಶವನ್ನು ಪ್ರವೇಶಿಸಬಹುದು ಎಂದವರು ತಿಳಿಸಿದರು. ಜಿನೆವಾದಲ್ಲಿ ಯುಎನ್‌ಎಚ್‌ಆರ್‌ಸಿ ಅಧಿವೇಶನ ನಡೆಯುತ್ತಿದೆ ಮತ್ತು ಮಾ.22ರಂದು ನಿರ್ಣಯವನ್ನು ಮತಕ್ಕೆ ಹಾಕಲಾಗುವುದು. ಈ ಸಂದರ್ಭ ಭಾರತ ನಿರ್ಣಯವನ್ನು ವಿರೋಧಿಸಬೇಕು ಎಂದವರು ಒತ್ತಾಯಿಸಿದರು.