ಮಾ.23ಕ್ಕೆ 'ರಂಗ್ ರಂಗ್‌ದ ದಿಬ್ಬಣ' ತುಳು ಚಿತ್ರದ ಧ್ವನಿಸುರುಳಿ ಬಿಡುಗಡೆ

ಉಡುಪಿ, ಮಾ.20: ಸಂಪೂರ್ಣವಾಗಿ ಕರಾವಳಿಯಲ್ಲೇ ಚಿತ್ರೀಕರಣಗೊಂಡ ವಾರಿನ್ ಕಂಬೈನ್ಸ್‌ನ ಹೊಸ ತುಳು ಚಲನಚಿತ್ರ 'ರಂಗ್ ರಂಗ್‌ದ ದಿಬ್ಬಣ' ದ ಧ್ವನಿಸುರುಳಿ ಲೋಕಾರ್ಪಣೆ ಇದೇ ಮಾ.23ರ ಗುರುವಾರ ಸಂಜೆ 4:00ಕ್ಕೆ ಶ್ರೀಕೃಷ್ಣ ಮಠದಲ್ಲಿ ಪರ್ಯಾಯ ಪೇಜಾವರ ಮಠದ ಶ್ರೀವಿಶ್ವೇಶ್ವರ ತೀರ್ಥ ಶ್ರೀಪಾದರಿಂದ ನಡೆಯಲಿದೆ ಎಂದು ಚಿತ್ರದ ನಾಯಕ ರವಿರಾಜ್ ಶೆಟ್ಟಿ ತಿಳಿಸಿದರು.
ಉಡುಪಿಯಲ್ಲಿಂದು ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ತುಳುಭಾಷೆಯಲ್ಲಿ ಕರಾವಳಿಯ ಪ್ರತಿಭಾವಂತ ಯುವಕರೇ ನಿರ್ಮಿಸುತ್ತಿರುವ ದಿಬ್ಬಣ', ಸ್ಯಾಂಡಲ್‌ವುಡ್‌ನ ತಂತ್ರಜ್ಞರ ಕೈಚಳಕದಿಂದ ಅದ್ದೂರಿಯಾಗಿ ಮೂಡಿಬಂದಿದೆ. ಚಿತ್ರದ ಡಬ್ಬಿಂಗ್, ಸಂಕಲನ ಹಾಗೂ ರಿರೆರ್ಕಾಡಿಂಗ್ ಬೆಂಗಳೂರಿನಲ್ಲಿ ನಡೆದಿದ್ದು, ಮೇ ತಿಂಗಳಲ್ಲಿ ರಾಜ್ಯಾದ್ಯಂತ ಬಿಡುಗಡೆ ಯಾಗಲಿದೆ ಎಂದು ಅವರು ತಿಳಿಸಿದರು.
ಕನ್ನಡ ಚಿತ್ರರಂಗ ಖ್ಯಾತ ನಿರ್ದೇಶಕ ಎಸ್.ಮಹೇಂದರ್ ಗರಡಿಯಲ್ಲಿ ಪಳಗಿರುವ ಕೃಷ್ಣಪ್ರಸಾದ್ ಉಪ್ಪಿನಕೋಟೆ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿರುವ ದಿಬ್ಬಣದ ನಿರ್ಮಾಪಕರು ಬೆಂಗಳೂರಿನ ಯುವ ಉದ್ಯಮಿ ಶರತ್ ಕೋಟ್ಯಾನ್. ಛಾಯಾಗ್ರಾಹಕರು ರೇಣುಕುಮಾರ್, ಸಂಗೀತ ನಿರ್ದೇಶಕರು ಎಸ್.ಪಿ. ಚಂದ್ರಕಾಂತ್.
ದಿಬ್ಬಣದ ಮೂಲಕ ರವಿರಾಜ್ ಶೆಟ್ಟಿ ಎಂಬ ಯುವ ನಾಯಕ ಚಿತ್ರರಂಗಕ್ಕೆ ಪರಿಚಯಿಸಲ್ಪಡುತಿದ್ದಾರೆ. ಇವರೊಂದಿಗೆ ಪ್ರಶಾಂತ್ ಸಾಮಗ, ನಾಯಕಿ ಯರಾಗಿ ಸಂಹೀತಾ ಶಾ ಹಾಗೂ ಸ್ವಾತಿ ಬಂಗೇರ ನಟಿಸುತಿದ್ದಾರೆ. ತುಳುನಾಡಿನ ಖ್ಯಾತ ಹಾಸ್ಯನಟರಾದ ಉಮೇಶ್ ಮಿಜಾರ್, ರಾಘವೇಂದ್ರ ರೈ, ದಿನೇಶ್ ಅತ್ತಾವರ, ರಂಜನ್ ಬೋಳೂರು, ರಘು ಪಾಂಡೇಶ್ವರ್ ಸಹ ಪ್ರಮುಖ ಪಾತ್ರಗಳಲ್ಲಿದ್ದಾರೆ.
ರಂಗ್‌ರಂಗ್‌ದ ದಿಬ್ಬಣ ಚಿತ್ರದಲ್ಲಿ ಒಟ್ಟು ಏಳು ಇಂಪಾದ ಹಾಡುಗಳಿವೆ. ಈ ಹಾಡುಗಳನ್ನು ಬಾಲಿವುಡ್‌ನ ಖ್ಯಾತ ಹಿನ್ನೆಲೆ ಗಾಯಕರಾದ ಉದಿತ್ ನಾರಾಯಣ್, ಜಾವೇದ್ ಅಲಿ, ಪ್ರಿಯಾ ಹಿಮೇಶ್, ವಿನುತ ಕಾರ್ತಿಕ್ ಅಲ್ಲದೇ ಅನುರಾದ ಭಟ್, ಪ್ರತಿಮಾ ಭಟ್ ಹಾಗೂ ಡಾ.ವಿಜಯ್ ಹಾಡಿದ್ದಾರೆ. ಜಾವೇದ್ ಅಲಿ ಅವರ ಹಾಡಿದ 'ಪಚ್ಚೆ ಕುರುಲ್‌ದ ಪಜ್ಜಿ' ಹಾಡು ಈಗಾಗಲೇ ಸೂಪರ್ ಹಿಟ್ ಆಗಿದೆ ಎಂದು ನಿರ್ದೇಶಕ ಕೃಷ್ಣಪ್ರಸಾದ್ ತಿಳಿಸಿದರು.
ಚಿತ್ರ ವಿಭಿನ್ನ ಕಥಾಹಂದರವನ್ನು ಹೊಂದಿದ್ದು, ಕಾಲೇಜು ವಿದ್ಯಾರ್ಥಿಗಳ ಸ್ವಚ್ಛಂದ ಬದುಕಿನಿಂದಾಗುವ ಅವಾಂತರಗಳನ್ನು ಬಿಚ್ಚಿಡುತ್ತಾ ಸಮಾಜಕ್ಕೆ ಸಂದೇಶವನ್ನು ನೀಡುತ್ತದೆ. ಮಾದಕ ದ್ರವ್ಯದ ವಿರುದ್ಧ ಯುವಜನರಲ್ಲಿ ಜಾಗೃತಿ ಮೂಡಿಸುತ್ತದೆ ಎಂದವರು ನುಡಿದರು. ಚಿತ್ರದಲ್ಲಿ ಹಾಸ್ಯಕ್ಕೆ ವಿಶೇಷ ಒತ್ತು ನೀಡಲಾಗಿದೆ ಎಂದು ಕೃಷ್ಣ ಪ್ರಸಾದ್ ನುಡಿದರು.
ಪತ್ರಿಕಾಗೋಷ್ಠಿಯಲ್ಲಿ ನಿರ್ಮಾಪಕ ಶರತ್ ಕೋಟ್ಯಾನ್, ಸಂಗೀತ ನಿರ್ದೇಶಖಕ ಚಂದ್ರಕಾತ್ ಎಸ್.ಪಿ., ನಾಯಕಿಯರಾದ ಸಂಹಿತಾ ಶಾ, ಸ್ವಾತಿ ಬಂಗೇರ ಹಾಗೂ ಮತ್ತೊಬ್ಬ ನಾಯಕ ಪ್ರಶಾಂತ್ ಸಾಮಗ ಉಪಸ್ಥಿತರಿದ್ದರು.







