ವೈದ್ಯರಿಗೆ 17,43,440 ರೂಪಾಯಿ ದಂಡ ವಿಧಿಸಿದ ದಕ್ಷಿಣ ಕನ್ನಡ ಜಿಲ್ಲಾ ಗ್ರಾಹಕರ ಪರಿಹಾರ ವೇದಿಕೆ

ಪುತ್ತೂರು, ಮಾ.20: ಪುತ್ತೂರಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ಹೆರಿಗೆಗೆಂದು ದಾಖಲಾಗಿದ್ದ ಗರ್ಭಿಣಿ ಮಹಿಳೆಯೋರ್ವರು ಭ್ರೂಣದೊಂದಿಗೆ ಮೃತಪಟ್ಟ ಪ್ರಕರಣವೊಂದರಲ್ಲಿ ವೈದ್ಯೆಯ ಕರ್ತವ್ಯ ಲೋಪ ಸಾಬೀತಾಗಿದೆ. ಆದ್ದರಿಂದ ಮೃತ ಗರ್ಭಿಣಿ ಮಹಿಳೆಯ ತಂದೆ ಹಾಗೂ ಮಗನಿಗೆ ಒಟ್ಟು 17,43,440 ರೂಪಾಯಿ ಪರಿಹಾರ ಧನ ಪಾವತಿಸಬೇಕೆಂದು ದ.ಕ. ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆ ಆದೇಶ ನೀಡಿದೆ.
ಘಟನೆಯ ವಿವರ:
ಪುತ್ತೂರು ಪೆರಾಬೆ ಗ್ರಾಮದ ಆಲಂಕಾರು ಪರಾರಿ ನಿವಾಸಿ ಕಮಲಾಕ್ಷ ರೈಯವರ ಪುತ್ರಿ ಸ್ವಪ್ನ ರೈಯವರನ್ನು ಎರಡನೆ ಹೆರಿಗೆಗಾಗಿ ಪುತ್ತೂರಿನ ಪ್ರತಿಷ್ಠಿತ ಆಸ್ಪತ್ರೆಯೊಂದಕ್ಕೆ ದಾಖಲಿಸಲಾಗಿತ್ತು. ತುಂಬು ಗರ್ಭಿಣಿಯಾಗಿದ್ದ ಸ್ವಪ್ನರಿಗೆ 2010ರ ಡಿ.28ರಂದು ರಾತ್ರಿ 9:30ಕ್ಕೆ ಹೆರಿಗೆ ನೋವು ಕಾಣಿಸಿಕೊಂಡಿದ್ದು, ದ.29ರ ರಾತ್ರಿ ಅವರು ಮೃತಪಟ್ಟಿದ್ದರು.
ಈ ಸಂದರ್ಭ ಅವರ ಗರ್ಭದೊಳಗೆ ಪೂರ್ತಿ ಬೆಳೆದಿದ್ದ ಭ್ರೂಣವೂ ಮೃತಪಟ್ಟಿತ್ತು. ಇವರ ಸಾವಿಗೆ ವೈದ್ಯೆಯ ಹಾಗೂ ಆಸ್ಪತ್ರೆಯವರ ಕರ್ತವ್ಯ ಲೋಪ ಕಾರಣವೆಂದು ಆರೋಪಿಸಿ ಸ್ವಪ್ನ ರೈಯವರ ತಂದೆ ಕಮಲಾಕ್ಷ ರೈಯವರು ಈ ಪ್ರಕರಣವನ್ನು ದ.ಕ. ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆಗೆ ದೂರು ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ಗ್ರಾಹಕರ ವೇದಿಕೆಯಲ್ಲಿ ವೈದ್ಯೆಯ ಕರ್ತವ್ಯ ಲೋಪವೆಸಗಿರುವುದು ಸಾಬೀತಾಗಿದ್ದು, ಇದು ದಿವ್ಯ ವೈದ್ಯಕೀಯ ನಿರ್ಲಕ್ಷತನವೆಂದು ಪರಿಗಣಿಸಿ 17,43,440 ರೂ. ಪರಿಹಾರ ಧನ ಪಾವತಿಸಬೇಕೆಂದು ದ.ಕ. ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆಯ ಅಧ್ಯಕ್ಷ ವಿಶ್ವೇಶ್ವರ ಭಟ್ ಡಿ. ಅವರು ಆದೇಶದಲ್ಲಿ ತಿಳಿಸಿದ್ದಾರೆ.







