ಮಂಗಳೂರು: ಸ್ಕೂಟರ್ ಸ್ಕಿಡ್: ಯುವಕ ಮೃತ್ಯು

ಮಂಗಳೂರು, ಮಾ.20: ನಗರ ಹೊರವಲಯದ ಕಣ್ಣೂರು ಚೆಕ್‌ಪೋಸ್ಟ್ ಬಳಿ ಸ್ಕೂಟರ್ ಸ್ಕಿಡ್ಡಾಗಿ ಉರುಳಿದ ಪರಿಣಾಮ ಸವಾರ ಮೃತಪಟ್ಟ ಘಟನೆ ಸೋಮವಾರ ನಡೆದಿದೆ.
ಕಣ್ಣೂರು ಸಮೀಪದ ಬಳ್ಳೂರುಗುಡ್ಡೆ ನಿವಾಸಿ ಮುಸ್ತಫಾ ಎಂಬವರ ಪುತ್ರ ತೌಸೀಫ್ (23)ಮೃತಪಟ್ಟ ಯುವಕ.
ಇವರು ರವಿವಾರ ಅಪರಾಹ್ನ 3:30ಕ್ಕೆ ತನ್ನ ಸಂಬಂಧಿಕರ ಮದುವೆಗೆ ತೆರಳಿ ಮನೆಗೆ ಮರಳುತ್ತಿದ್ದಾಗ ಕಣ್ಣುರು ಚೆಕ್‌ಪೋಸ್ಟ್ ಬಳಿ ಸ್ಕೂಟರ್ ಸ್ಕಿಡ್ಡಾಗಿ ಬಿತ್ತು. ಇದರಿಂದ ಗಂಭೀರ ಗಾಯಗೊಂಡ ತೌಸೀಫ್‌ರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸೋಮವಾರ ಮುಂಜಾನೆ ಮೃತಪಟ್ಟಿದ್ದಾರೆ.
ಈ ಸಂದರ್ಭ ಮುಹಮ್ಮದ್ ಎಂಬವರು ಸ್ಕಿಡ್ಡಾದ ಸ್ಕೂಟರ್‌ನ ಹಿಂದಿನಿಂದ ಬರುತ್ತಿದ್ದ ಬಸ್ಸಿನಲ್ಲಿ ತೆರಳುತ್ತಿದ್ದರು ಎನ್ನಲಾಗಿದೆ. ತೌಸಿಫ್‌ನ ತಲೆ ಮತ್ತು ಹೊಟ್ಟೆಯ ಭಾಗಕ್ಕೆ ಗುದ್ದಿದ ಗಾಯವಾಗಿತ್ತು. ತಕ್ಷಣ ಮುಹಮ್ಮದ್ ಇತರರ ಸಹಾಯದಿಂದ ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಿ ಕಂಕನಾಡಿ ನಗರ ಠಾಣೆಗೆ ದೂರು ನೀಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.





