ಮೊದಲ ದಿನದ ಕಾರ್ಯಭಾರ ನಿರ್ವಹಿಸಿದ ಆದಿತ್ಯನಾಥ
ಅಪರಾಧ,ಕಸಾಯಿಖಾನೆಗಳತ್ತ ಗಮನ

ಲಕ್ನೋ,ಮಾ.20: ಬಿಎಸ್‌ಪಿ ನಾಯಕನೋರ್ವನ ಹತ್ಯೆ ಹಿನ್ನೆಲೆಯಲ್ಲಿ ಸೋಮವಾರ ರಾಜ್ಯ ಪೊಲೀಸ್ ಮುಖ್ಯಸ್ಥರನ್ನು ಭೇಟಿಯಾಗುವುದರೊಂದಿಗೆ ಉತ್ತರ ಪ್ರದೇಶದ ನೂತನ ಮುಖ್ಯಮಂತ್ರಿ ಆದಿತ್ಯನಾಥ ಅವರು ಕಚೇರಿಯಲ್ಲಿ ತನ್ನ ಮೊದಲ ದಿನವನ್ನು ಆರಂಭಿಸಿದರು. ‘ಎಚ್ಚರಿಕೆಯಿಂದಿರಿ ’ಎಂದು ಡಿಜಿಪಿ ಜಾವೇದ್ ಅಹ್ಮದ್ ಅವರಿಗೆ ಸೂಚಿಸಿದ ಅವರು, ರಾಜ್ಯದಲ್ಲಿ ಅಪರಾಧಗಳನ್ನು ಹತ್ತಿಕ್ಕಲು ಯೋಜನೆಯೊಂದರ ಕುರಿತು ಕೇಳಿದರೆನ್ನಲಾಗಿದೆ. ಆದಿತ್ಯನಾಥ ಅವರು ಇಬ್ಬರು ಉಪಮುಖ್ಯಮಂತ್ರಿಗಳಾದ ಕೇಶವ ಪ್ರಸಾದ ಮೌರ್ಯ ಮತ್ತು ದಿನೇಶ ಶರ್ಮಾ ಅವರೊಂದಿಗೆ ರಾಜ್ಯದ ಹಿರಿಯ ಅಧಿಕಾರಿಗಳನ್ನೂ ಭೇಟಿಯಾದರು.
ಡಿಜಿಪಿಯೊಂದಿಗೆ ಭೇಟಿ ಸಂದರ್ಭದಲ್ಲಿ ರವಿವಾರ ರಾತ್ರಿ ಅಲಹಾಬಾದ್‌ನಲ್ಲಿ ಬಿಎಸ್‌ಪಿ ನಾಯಕನ ಹತ್ಯೆ ಬಗ್ಗೆ ಕಳವಳ ವ್ಯಕ್ತಪಡಿಸಿದರಲ್ಲದೆ, 15 ದಿನಗಳಲ್ಲಿ ಉತ್ತಮ ಪೊಲೀಸ್ ಕಾರ್ಯ ನಿರ್ವಹಣೆಗೆ ಅಗತ್ಯ ನೀಲಿನಕ್ಷೆಯನ್ನು ಸಿದ್ಧಗೊಳಿಸುವಂತೆ ಆದೇಶಿಸಿದರು ಎಂದು ಮೂಲಗಳು ತಿಳಿಸಿದವು.
ಕಸಾಯಿಖಾನೆಗಳನ್ನು ಮುಚ್ಚುವ ಬಿಜೆಪಿ ಭರವಸೆಯನ್ನು ನೂತನ ಸರಕಾರವು ಈಡೇರಿಸಲಿದೆ ಎಂದು ಸುಳಿವು ನೀಡಿದ ಮೌರ್ಯ, ಸಂಪುಟದ ಪ್ರಥಮ ಸಭೆಯಲ್ಲಿ ಈ ಕುರಿತು ನಿರ್ಧಾರವೊಂದನ್ನು ತೆಗೆದುಕೊಳ್ಳಲಾಗುವುದು ಎಂದರು. ಆದರೆ ಪರವಾನಿಗೆ ಹೊಂದಿರುವ ಕಸಾಯಿಖಾನೆಗಳ ವಿರುದ್ಧವೂ ಕ್ರಮವನ್ನು ಜರುಗಿಸಲಾಗುವುದೇ ಎನ್ನುವುದು ಸ್ಪಷ್ಟವಾಗಿಲ್ಲ.
ಅಲಹಾಬಾದ್‌ನಲ್ಲಿ ರವಿವಾರ ರಾತ್ರಿ ಮುಚ್ಚಿಸಲಾದ ಎರಡು ಕಸಾಯಿಖಾನೆಗಳು ಅಕ್ರಮವಾಗಿ ನಡೆಯುತ್ತಿದ್ದವು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆದಿತ್ಯನಾಥ ಅವರು ಸದಾ ಕಸಾಯಿಖಾನೆಗಳನ್ನು ಮುಚ್ಚಿಸಬೇಕು ಎಂದು ಪ್ರತಿಪಾದಿಸಿಕೊಂಡು ಬಂದಿದ್ದಾರೆ. ಆದರೆ ಇಂತಹ ಕ್ರಮ ಸಾವಿರಾರು ಜನರ ಆದಾಯ ಮತ್ತು ಜೀವನೋಪಾಯಕ್ಕೆ ಕಲ್ಲು ಹಾಕಲಿದೆ ಎಂದು ಮಾಂಸ ವ್ಯಾಪಾರಿಗಳು ಹೇಳಿದ್ದಾರೆ.
ಆದಿತ್ಯನಾಥ ಅವರು ಬೆಳಿಗ್ಗೆ ಮುಖ್ಯ ಕಾರ್ಯದರ್ಶಿ ರಾಹುಲ್ ಭಟ್ನಾಗರ್ ಅವರನ್ನೂ ಭೇಟಿಯಾಗಿ ಮಾತುಕತೆ ನಡೆಸಿದರು. ರವಿವಾರ ಪ್ರಮಾಣ ವಚನ ಸ್ವೀಕಾರದ ಬೆನ್ನಿಗೇ ತನ್ನ ಸಂಪುಟ ಸದಸ್ಯರೊಂದಿಗೆ ಅನೌಪಚಾರಿಕ ಸಭೆಯನ್ನು ನಡೆಸಿದ್ದ ಆದಿತ್ಯನಾಥ, 15 ದಿನಗಳಲ್ಲಿ ತಮ್ಮ ಆಸ್ತಿ-ಸಂಪತ್ತು ವಿವರಗಳನು ಸಲ್ಲಿಸುವಂತೆ ಎಲ್ಲ ಸಚಿವರಿಗೆ ತಾಕೀತು ಮಾಡಿದ್ದಾರೆ.
ಉ.ಪ್ರ.ಸರಕಾರದ ಅಧಿಕೃತ ವಕ್ತಾರರಾಗಿ ನಿಯೋಜಿತ ಶ್ರೀಕಾಂತ ಶರ್ಮಾ ಮತ್ತು ಸಿದ್ಧಾರ್ಥನಾಥ ಸಿಂಗ್ ಅವರ ಮೂಲಕ ಹೊರತುಪಡಿಸಿ ಮಾಧ್ಯಮಗಳೊಂದಿಗೆ ಮಾತನಾಡದಂತೆ ಸಚಿವರಿಗೆ ಎಚ್ಚರಿಕೆ ನೀಡಲಾಗಿದೆ.
ಆದಿತ್ಯನಾಥ ಸೋಮವಾರ ಲಕ್ನೋದ 5,ಕಾಳಿದಾಸ ಮಾರ್ಗದ ಅಧಿಕೃತ ನಿವಾಸವನ್ನು ಪ್ರವೇಶಿಸಿದರು. ಗೋರಖಪುರದಿಂದ ಆಗಮಿಸಿದ್ದ ಏಳು ಪುರೋಹಿತರ ತಂಡವು ಗೃಹಪ್ರವೇಶ ವಿಧಿಗಳನ್ನು ನಡೆಸಿತು.
ಗೋರಖಪುರದಿಂದ ಐದು ಬಾರಿ ಲೋಕಸಭೆಗೆ ಆಯ್ಕೆಯಾಗಿರುವ ಆದಿತ್ಯನಾಥ ಅಲ್ಲಿಯ ಗೋರಖನಾಥ ದೇವಸ್ಥಾನದ ಮಹಂತರಾಗಿದ್ದಾರೆ.