ಗುಂಡ್ಲುಪೇಟೆ ಉಪಚುನಾವಣೆ: ನಾಮಪತ್ರ ಸಲ್ಲಿಕೆ ವೇಳೆ ಪರಸ್ಪರ ಕಲ್ಲು ತೂರಾಟ; 7 ಮಂದಿಗೆ ಗಾಯ

ಗುಂಡ್ಲುಪೇಟೆ, ಮಾ.20: ಉಪಚುನಾವಣೆ ಹಿನ್ನಲೆಯಲ್ಲಿ ನಾಮಪತ್ರ ಸಲ್ಲಿಸುವ ವೇಳೆ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳ ಕಾರ್ಯಕರ್ತರ ನಡುವೆ ಕಲ್ಲು ತೂರಾಟ ನಡೆದ ಪರಿಣಾಮ ನಾಲ್ವರು ಬಿಜೆಪಿ ಕಾರ್ಯಕರ್ತರೂ ಸೇರಿದಂತೆ ಮೂವರು ಪೊಲೀಸರಿಗೆ ಗಾಯಗಳಾಗಿದ್ದು, ಜನರನ್ನು ನಿಯಂತ್ರಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಿದರು.
ಸೋಮವಾರ ಬೆಳಗ್ಗೆ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಲು ರೋಡ್ ಶೋ ವೇಳೆ ಈ ಘಟನೆ ನಡೆದಿದ್ದು, ಬಿಜೆಪಿ ಕಾರ್ಯಕರ್ತರಾದ ಝಫಾವುಲ್ಲಾ (30), ಮಾದನಾಯ್ಕ(37), ಚಿಕ್ಕಾಟಿ ರಾಜಪ್ಪ(48), ಮಡಳ್ಳಿ ಕೀರ್ತಿ(23) ಹಾಗೂ ಎಸ್ಸೈ ನಾಗರಾಜು, ಪೇದೆಗಳಾದ ಮಂಜುನಾಥ್‌ಸ್ವಾಮಿ, ನಾಗರಾಜು ಗಾಯಗೊಂಡವರಾಗಿದ್ದಾರೆ. ಗಾಯಾಳುಗಳನ್ನು ಪಟ್ಟಣದ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಿಲಾಗಿದೆ.
ಘಟನೆ ವಿವರ:
ಬೆಳಗ್ಗೆ 11 ಗಂಟೆಗೆ ಬಿಜೆಪಿ ಅಭ್ಯರ್ಥಿ ಸಿ.ಎಸ್.ನಿರಂಜನಕುಮಾರ್ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಮೋಹನಕುಮಾರಿ 12:30ಕ್ಕೆ ನಾಮಪತ್ರ ಸಲ್ಲಿಸಲು ತೀರ್ಮಾನಿಸಿದ್ದರು. ನಾಮಪತ್ರ ಸಲ್ಲಿಸುವ ಮುನ್ನ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ತೆರೆದ ವಾಹನದಲ್ಲಿ ಮೆರವಣಿಗೆಯಲ್ಲಿ ಸಾಗಿ ಎಂಡಿಸಿಸಿ ಬ್ಯಾಂಕ್ ಎದುರು ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು.
ನಂತರ ತಾಲೂಕು ಕಚೇರಿ ಸಭಾಂಗಣಕ್ಕೆ ಆಗಮಿಸಿದ ಅಭ್ಯರ್ಥಿ ನಿರಂಜನಕುಮಾರ್ ನಾಮಪತ್ರ ಸಲ್ಲಿಸಿದರು. ನಾಮಪತ್ರದ ಸಲ್ಲಿಸುತ್ತಿದ್ದ ವೇಳೆ ಸುಮಾರು 1 ಘಂಟೆಗೂ ಹೆಚ್ಚು ಕಾಲ ಚುನಾವಣೆಯಾಧಿಕಾರಿ ಪರಿಶೀಲನೆಯಲ್ಲಿ ತೊಡಗಿದ್ದರಿಂದ ಕಾರ್ಯಕರ್ತರು ಗೊಂದಲಕ್ಕೀಡಾಗಿದ್ದು, ಇದೇ ವೇಳೆ ಕಾಂಗ್ರೆಸ್ ಪಕ್ಷದವರೂ ಕೂಡ ನಾಮಪತ್ರ ಸಲ್ಲಿಸಲು ಮೆರವಣಿಗೆಯಲ್ಲಿ ಬಂದಿದ್ದರಿಂದ ಈ ಸಂದರ್ಭದಲ್ಲಿ ಎರಡೂ ಪಕ್ಷಗಳ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆಯಿತು.
ಈ ವೇಳೆ ಮುಖಂಡರಾದ ಶ್ರೀರಾಮುಲು ಮತ್ತು ಅರವಿಂದ ಲಿಂಬಾವಳಿ ಕಾರ್ಯಕರ್ತರನ್ನು ಸಮಾಧಾನ ಪಡಿಸಲು ಮುಂದಾಗುತ್ತಿದಂತೆ ಕಲ್ಲು, ಚಪ್ಪಲಿ ತೂರಾಟ ಶುರುವಾದ್ದರಿಂದ ಪೊಲೀಸರು ಗುಂಪು ಚದುರಿಸಲು ಮತ್ತೊಮ್ಮೆ ಲಾಠಿ ಪ್ರಹಾರ ನಡೆಸಿದರು.ಇದರಿಂದಾಗಿ ರಾ.ಹೆದ್ದಾರಿಯು ಸುಮಾರು 2 ಗಂಟೆಗಳ ಕಾಲ ಅಸ್ತ್ಯವ್ಯಸ್ತ್ಯವಾಯಿತು.
ಸ್ಥಳದಲ್ಲಿ ಅಡಿಷನಲ್ ಎಸ್ಪಿ ಗೀತಾಪ್ರಸನ್ನ, ಡಿವೈಎಸ್ಪಿ ಗಂಗಾಧರ್, ಸಿಐ ಕೃಷ್ಣಪ್ಪ, ಶಿವಸ್ವಾಮಿ, ಬಿ.ಮಹೇಶ್, ಪಿಎಸ್ಸೈ ಸಂದೀಪಕುಮಾರ್, ಕಿರಣ್‌ಕುಮಾರ್ ಹಾಘೂ ಸಿಬ್ಬಂದಿ ಬಿಗಿ ಬಂದೋಬಸ್ತ್ ಕಲ್ಪಿಸಿದ್ದರು.
ಠಾಣೆ ಎದುರು ಮುಂದುವರಿದ ಜಟಾಪಟಿ:
ನಾಮಪತ್ರ ಸಲ್ಲಿಕೆ ವೇಳೆ ನಡೆದ ಕಲ್ಲು ತೂರಾಟಕ್ಕೆ ಕಾಂಗ್ರೆಸ್ ಪಕ್ಷದ ಮುಖಂಡರೇ ಕಾರಣ, ಕಲ್ಲು ತೂರಾಟ ನಡೆಸಿದ ಕಾಂಗ್ರೆಸ್ ಪಕ್ಷದ ಕಿಡಗೇಡಿಗಳನ್ನು ಬಂಧಿಸುವಂತೆ ಒತ್ತಾಯಿಸಿ ಬಿಜೆಪಿ ಅಭ್ಯರ್ಥಿ ನಿರಂಜನ್‌ಕುಮಾರ್ ಹಾಗೂ ಅರವಿಂದ ಲಿಂಬಾವಳಿ ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರು ಪಟ್ಟಣದ ಪೊಲೀಸ್ ಠಾಣೆ ಎದುರು ಧರಣಿ ನಡೆಸಿದರು.
ಈ ವೇಳೆ ಠಾಣೆಯ ಗೇಟ್‌ಗಳನ್ನು ಮುಚ್ಚಲಾಗಿದ್ದರಿಂದ ಧರಣಿ ನಿರತರು ಪೊಲೀಸರ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿದರು. ಇದೇ ವೇಳೆ ಮಾಜಿ ಸಚಿವ ದಿ.ಮಹದೇವಪ್ರಸಾದ್ ಅವರ ಸಹೋದರ ನಂಜುಂಡ ಪ್ರಸಾದ್ ಹಾಗೂ ಕಾಡಾ ಅಧ್ಯಕ್ಷ ನಂಜಪ್ಪ ಠಾಣೆಯ ಒಳಗೆ ಪ್ರವೇಶಿಸಿದ್ದರಿಂದ ಕೆರಳಿದ ಬಿಜೆಪಿ ಮುಖಂಡರು ಇದನ್ನು ಪ್ರಶ್ನಿಸಿದರು. ಅದರಿಂದ ಕೆರಳಿದ ಕಾಡಾ ಅಧ್ಯಕ್ಷ ಬಿಜೆಪಿ ಮುಖಂಡರ ವಿರುದ್ಧ ಕೆಂಡಕಾರಿ ತೊಡೆ ತಟ್ಟಿದರು. ಇದರಿಂದ ಕೆಲಕಾಲ ಸ್ಥಳದಲ್ಲಿ ಮಾತಿನ ಚಕಮಕಿ ನಟಡೆದು ಗೊಂದಲ ಉಂಟಾಯಿತು. ಸಕಾಲಾದಲ್ಲಿ ಪೊಲೀಸರ ಮಧ್ಯ ಪ್ರವೇಶದಿಂದ ಪರಿಸ್ಥಿತಿ ತಣ್ಣಗಾಯಿತು.







